ನಾಮ್ ಕೇ ವಾಸ್ತೆ ಗುಳೇದಗುಡ್ಡ ತಾಲೂಕು...!

ಗುಳೇದಗುಡ್ಡ ಪಟ್ಟಣದಲ್ಲಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ
ಗುಳೇದಗುಡ್ಡ ಪಟ್ಟಣದಲ್ಲಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ
Published on

ಪ್ರಮುಖ ಮುಖ್ಯಾಂಶಗಳು

  • ಆರು ಕಚೇರಿಗಳು ಮಾತ್ರ ಕಾರ್ಯಾಚರಣೆ
  • ಉಳಿದ ಇಲಾಖೆಗಳಿಗೆ ಜನತೆ ಬಾದಾಮಿಗೆ ಅಲೆದಾಟ
  • ಕಚೇರಿಗಳಲ್ಲಿ ಸಿಬ್ಬಂದಿಯೂ ಇಲ್ಲ, ಫೈಲ್‌ಗಳಂತೂ ಮೊದಲೇ ಇಲ್ಲ.
ಗುಳೇದಗುಡ್ಡ: ಸರ್ಕಾರ ಹೊಸ ತಾಲೂಕು ಮಾಡುವ ಭರಾಟೆಯಲ್ಲಿ ಸಮರ್ಪಕವಾಗಿ ಅನುದಾನ ಹಾಗೂ ಆಡಳಿತ ಕಚೇರಿಗಳ ವ್ಯವಸ್ಥೆ ಮಾಡದಿರುವ ಪರಿಣಾಮ ಶ್ರೀಸಾಮಾನ್ಯರು ಪರದಾಡುವಂತಾಗಿದೆ.
ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ, ಬಾದಾಮಿ ತಾಲೂಕಿನಿಂದ ಬೇರ್ಪಟ್ಟು ಸ್ವತಂತ್ರೃ ತಾಲೂಕಾಗಿರುವ ಗುಳೇದಗುಡ್ಡದ ಪರಿಸ್ಥಿತಿಗೆ ಆಡಳಿತ ವ್ಯವಸ್ಥೆಯೇ ತಲೆತಗ್ಗಿಸುವಂತಾಗಿದೆ.
ಸರ್ಕಾರದ ಆದೇಶದನ್ವಯ 2018ರಲ್ಲಿ ಗುಳೇದಗುಡ್ಡ ನೂತನ ತಾಲೂಕು ರಚನೆ ಆಗಿದೆ. ಇಲ್ಲಿಯವರೆಗೆ ಎಂಟು ವರ್ಷಗಳು ಗತಿಸಿದರೂ ಸಹ ತಹಸೀಲ್ದಾರ ಕಚೇರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕರ ಕಚೇರಿ, ಹೆಸ್ಕಾಂ., ಮಲಪ್ರಭಾ ಎಡದಂಡೆ ಕಾಲುವೆ (ಎಂಎಲ್‌ಬಿಸಿ) ಕಚೇರಿ, ಉಪ ನೋಂದಣಾಧಿಕಾರಿಗಳ ಕಚೇರಿ, ಪತ್ರಾಂಕಿತ ಉಪ ಖಜನಾಧಿಕಾರಿಗಳ ಕಚೇರಿ ಕಾರ್ಯನಿರ್ವಹಿಸುತ್ತಿವೆ. ಮಿಕ್ಕೆಲ್ಲಾ ಕಚೇರಿಗಳಿಗೆ ಜನತೆ ಬಾದಾಮಿಗೆ ತೆರಳುವ ಅನಿವಾರ್ಯತೆ ಇದೆ.
ನೂತನ ತಾಲೂಕು ಕೇಂದ್ರವಾಗಿ ಮಾರ್ಪಟ್ಟಾಗ ಎಲ್ಲಾ ಇಲಾಖೆಯವರು ತಮ್ಮ ಇಲೇಖೆಗಳ ನಾಮ ಫಲಕಗಳನ್ನು ತಂದು ಗುಳೇದಗುಡ್ಡ ಪಟ್ಟಣದ ಹಲವು ಕಡೆ ತೂಗುಹಾಕಿದ್ದಷ್ಟೇ ಬಂತು. ಆ ಕಚೇರಿಗಳಲ್ಲಿ ಸಿಬ್ಬಂದಿಯೂ ಇಲ್ಲ, ಫೈಲ್‌ಗಳಂತೂ ಮೊದಲೇ ಇಲ್ಲ. ಹೀಗಾಗಿ ಈ ತಾಲೂಕಿನ ಹೊಂದಿಕೊಂಡಿರುವ 38 ಗ್ರಾಮಗಳ ಜನರಲ್ಲಿ ಅನಾಥಪ್ರಜ್ಞೆ ಕಾಡುತ್ತಿದೆ.

ಪ್ರಮುಖ ಇಲಾಖೆ ಕಚೇರಿಗಳಿಲ್ಲ

ಗುಳೇದಗುಡ್ಡ ನೂತನ ತಾಲೂಕಿನಲ್ಲಿನ್ನೂ, ಲೋಕೋಪಯೋಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಹಾಯಕ ಕೃಷಿ ನಿರ್ದೇಶಕರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಭೂ ಮಾಪನ ವಿಭಾಗ, ಹಿರಿಯ ಸಹಾಯಕ ತೋಟಗಾರಿಕೆ, ಗುಳೇದಗುಡ್ಡ ವಲಯ ಅರಣ್ಯಾಧಿಕಾರಿಗಳು, ಅಗ್ನಿಶಾಮಕ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಚೇರಿ ಮುಂತಾದ ಪ್ರಮುಖ ಇಲಾಖೆಗಳೇ ಇಲ್ಲ.
ಎಲ್ಲದಕ್ಕೂ ಜನತೆ ಬಾದಾಮಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ತಮ್ಮ ಕೆಲಸಕ್ಕಾಗಿ ದೂರದ ಬಾದಾಮಿಗೆ ಹೋದರೂ ಅಲ್ಲಿ ಇಲಾಖೆ ಅಧಿಕಾರಿಗಳು ಸಿಕ್ಕರೆ ಸಿಕ್ಕರು ಇಲ್ಲದಿದ್ದರೆ ಇಲ್ಲ. ಇಂತಹ ಸಂದರ್ಭದಲ್ಲಿ ಯಾಕಾದರೂ ಗುಳೇದಗುಡ್ಡ ತಾಲೂಕು ಕೇಂದ್ರವಾಗಿದೆಯೋ ಎಂದು ಹಿಡಿಶಾಪ ಹಾಕುತ್ತಾ ಹಿಂದಿರುಗುವುದು ಸಾಮಾನ್ಯವಾಗಿದೆ.
ಇನ್ನಾದರೂ ಶಾಸಕರು ತಕ್ಷಣ ಈ ಕಾರ್ಯಕ್ಕೆ ಮುಂದಾಗಬೇಕು. ತಾಲೂಕಿಗೆ ಎಲ್ಲ ಕಚೇರಿಗಳನ್ನು ಪ್ರಾರಂಭಿಸಬೇಕು. ಕೇವಲ ನಾಮಲಕ ಹಾಕಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಸಾರ್ವಜನಿಕರು ‘ವಿಜಯವಾಣಿ’ ಎದುರು ಬೇಸರ ವ್ಯಕ್ತಪಡಿಸಿದ್ದಾರೆ.
"

ಬಹು ವರ್ಷಗಳ ಬೇಡಿಕೆ ಬಳಿಕ 2018ರಲ್ಲಿ ರಚಿಸಲಾಯಿತು. ಆದರೆ ಜನರಿಗೆ ಅನುಕೂಲವಾಗುವ ಕಚೇರಿಗಳು ಇಲ್ಲವಾಗಿವೆ. ನಾಮಲಕಗಳು ಕಂಡರೂ ಕಚೇರಿ ಒಳಗೆ ಸಿಬ್ಬಂದಿ, ಕಡತಗಳೇ ಇಲ್ಲ. ಕಚೇರಿಗಳೆಲ್ಲ ಖಾಲಿ ಖಾಲಿಯಾಗಿವೆ. ಹೆಸರಿಗಷ್ಟೇ ತಾಲೂಕು ರಚಿಸಿದಂತಾಗಿದೆ. ಜನತೆಗೆ ಬಾದಾಮಿಗೆ ಅಲೆದಾಡುವುದು ತಪ್ಪಿಲ್ಲ. ಶೀಘ್ರದಲ್ಲಿಯೇ ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಇಲ್ಲವಾದಲ್ಲಿ ಮತ್ತೊಂದು ಹೋರಾಟ ಅನಿವಾರ್ಯವಾಗಲಿದೆ.
| ಅಶೋಕ ಹೆಗಡೆ ತಾಲೂಕು ಹೋರಾಟ ಸಮಿತಿ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net