ಮುತ್ತೂರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ

 ಹುತ್ತಿನಾಕಾರದ ಸಾಲಿಗ್ರಾಮ ರೂಪದಲ್ಲಿರುವ ಮುತ್ತೂರ ಮಹಾಲಕ್ಷ್ಮೀಯ ಮೂಲ ವಿಗ್ರಹ.
ಹುತ್ತಿನಾಕಾರದ ಸಾಲಿಗ್ರಾಮ ರೂಪದಲ್ಲಿರುವ ಮುತ್ತೂರ ಮಹಾಲಕ್ಷ್ಮೀಯ ಮೂಲ ವಿಗ್ರಹ.
Published on

ಪ್ರಮುಖ ಮುಖ್ಯಾಂಶಗಳು

  • ಅಸಂಖ್ಯಾತ ಭಕ್ತರ ಆರಾಧ್ಯ ದೈವ
  • 14ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ
  • ಮುತ್ತೂರ ಗ್ರಾಮದಲ್ಲಿ ನೆಲೆಸಿರುವ ಐತಿಹಾಸಿಕ ಪ್ರಸಿದ್ಧ ಮಹಾಲಕ್ಷ್ಮೀ ದೇವಿಯ ಜಾತ್ರಾ
ಜಮಖಂಡಿ: ತಾಲೂಕಿನ ಮುತ್ತೂರ ಗ್ರಾಮದಲ್ಲಿ ನೆಲೆಸಿರುವ ಐತಿಹಾಸಿಕ ಪ್ರಸಿದ್ಧ ಮಹಾಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವವು ಜ. 14ರಂದು ಸಂಭ್ರಮದಿಂದ ಜರುಗಲಿದೆ.
ಮೂರು ಶತಮಾನಗಳ ಇತಿಹಾಸವಿರುವ ಈ ಕ್ಷೇತ್ರವು ಕರ್ನಾಟಕ ಮತ್ತು ಮಹಾರಾಷ್ಟ್ರ ಅಸಂಖ್ಯಾತ ಭಕ್ತರ ಆರಾಧ್ಯ ದೈವವಾಗಿದೆ. 14 ರಂದು ಬೆಳಗ್ಗೆ 6 ಗಂಟೆಗೆ ಪಂಚಾಮೃತ ಅಭಿಷೇಕ, ಅಲಂಕಾರ ಹಾಗೂ ಪುಷ್ಪ ಸೇವೆ. ಸಂಜೆ 5ಕ್ಕೆ ವಾದ್ಯಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ ಕೃಷ್ಣಾ ನದಿಗೆ ತೆರಳಿ ಪುಣ್ಯಸ್ನಾನ ಪೂರೈಸಲಿದೆ. ರಾತ್ರಿ 9 ಗಂಟೆಗೆ ಕುದುರೆ ಕುಣಿತ, ನಂದಿಕೋಲುಗಳೊಂದಿಗೆ ದೇವಿಯ ಸ್ವಾಗತ. ರಾತ್ರಿ ಇಡೀ ಶ್ರೀ ಕೃಷ್ಣ ಪಾರಿಜಾತ, ರೇಣುಕಾ ಯಲ್ಲಮ್ಮ ಹಾಗೂ ಬೈಲಾಟ ಕಾರ್ಯಕ್ರಮಗಳು ಜರುಗಲಿವೆ.
15 ರಂದು ಬೆಳಗ್ಗೆ 6ಕ್ಕೆ ದೇವಿಯ ಪುನರ್ ಸ್ಥಾಪನೆ. ಬೆಳಗ್ಗೆಯಿಂದ ಸಂಜೆಯವರೆಗೆ ಕರಡಿ ಮಜಲು, ಸಂಭಾ ವಾದ್ಯ, ಹಲಗಿ ಹಾಗೂ ಡೊಳ್ಳಿನ ವಾದ್ಯ ವೈಭವ. ಸಂಜೆ 4ಕ್ಕೆ ಪ್ರಸಿದ್ಧ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗಳು. ರಾತ್ರಿ ಪಲ್ಲಕ್ಕಿ ಉತ್ಸವ ಹಾಗೂ ಶಾಸೀಯ ಸಂಗೀತ ಸೇವೆ ಜರುಗಲಿದೆ.
ಶತಮಾನಗಳಿಂದ ನಡೆದುಕೊಂಡು ಬಂದಿರುವ ಪ್ರತಿ ಶುಕ್ರವಾರ ಮುತ್ತೂರಿನ ಸುಮಂಗಲೆಯರು ಸೇರಿ ಪಲ್ಲಕ್ಕಿ ಉತ್ಸವ ನಡೆಸುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಜಾತ್ರಾ ಮಹೋತ್ಸವಕ್ಕೆ ಗ್ರಾಮಸ್ಥರು ಹಾಗೂ ದೇವಸ್ಥಾನದ ಕಮಿಟಿಯವರು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಭಕ್ತನಿಗಾಗಿ ಧರೆಗಿಳಿದ ದೇವಿ

ಮೂರು ಶತಮಾನಗಳ ಹಿಂದೆ ಮುತ್ತೂರ ಗ್ರಾಮದ ಕರಣಿಕ ಮನೆತನದ ಶ್ರೀಪಾದ ಎಂಬ ಪರಮ ಭಕ್ತನು ಪ್ರತಿ ಅಮಾವಾಸ್ಯೆಯಂದು ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಹೋಗಿ ದೇವಿಯ ದರ್ಶನ ಪಡೆಯುತ್ತಿದ್ದನು. ವಯಸ್ಸಾದ ಮೇಲೆ ಪ್ರಯಾಣ ಅಸಾಧ್ಯವಾದಾಗ, ಭಕ್ತನ ಭಕ್ತಿಗೆ ಮೆಚ್ಚಿದ ದೇವಿ, ಆತನ ಬೆನ್ನ ಹಿಂದೆ ಮುತ್ತೂರ ಗ್ರಾಮದವರೆಗೂ ಬಂದಳು. ಮನೆ ಮುಂದೆ ತಲುಪಿದಾಗ ಶ್ರೀಪಾದನು ಹಿಂತಿರುಗಿ ನೋಡಿದ ಕ್ಷಣ, ದೇವಿ ಹತ್ತು ವರ್ಷದ ಬಾಲಕಿಯಾಗಿ ದರ್ಶನ ನೀಡಿದಳು. ಗ್ರಾಮದ ಪೂರ್ವ ದಿಕ್ಕಿನಲ್ಲಿರುವ ಶ್ರೀಗಂಧ, ಅಶ್ವತ್ಥ ಮತ್ತು ಹುಣಸೆ ಮರಗಳ ಮಧ್ಯೆ ಹುತ್ತಿನಾಕಾರದ ಸಾಲಿಗ್ರಾಮ ರೂಪದಲ್ಲಿ ನೆಲೆಸುವುದಾಗಿ ಭರವಸೆ ನೀಡಿ ಅಲ್ಲಿಯೇ ಸ್ಥಿರವಾದಳು ಎಂಬ ಪ್ರತೀತಿ ಇದೆ.
ಪ್ರತಿ ವರ್ಷ ಸಂಕ್ರಾಂತಿಯಂದು ಆರಂಭವಾಗುವ ಈ ಜಾತ್ರಾ ಮಹೋತ್ಸವವು ಐದು ದಿನಗಳ ಕಾಲ ನಡೆಯುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾ ತಂಡಗಳು ಆಗಮಿಸಿ ಜಾನಪದ ಕಲೆಗಳನ್ನು ಪ್ರದರ್ಶಿಸುತ್ತವೆ. ಈ ಬಾರಿಯೂ 20 ಸಾವಿರಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆಯಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net