ಬಾಗಲಕೋಟೆ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿದರು. ಸಂಸದ ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಚುನಾವಣಾ ಉಸ್ತುವಾರಿ ಅರುಣ ಶಹಾಪುರ, ಬಸವರಾಜ ಯಂಕಂಚಿ ಇದ್ದರು.
ಕೇಂದ್ರ ಸಚಿವ ಜೋಶಿ, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಶೆಟ್ಟರ್ ಸೇರಿ ಹಲವರು ಭಾಗಿ
ಬಾಗಲಕೋಟೆ:ಬಾಗಲಕೋಟೆ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಇಂದು (ಮಾ. 23) ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ನಡೆಯುವ ಬೃಹತ್ ಮೆರವಣಿಗೆಗೆ ಕ್ಷೇತ್ರದ 10 ರಿಂದ 15 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.
ನಗರದ ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಳಗ್ಗೆ 9.30ಕ್ಕೆ ಕಣವಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಪಶು ಆಸ್ಪತ್ರೆ, ಅಡತ್ ಬಜಾರ್, ಎಂಜಿ ರಸ್ತೆ ಮುಖಾಂತರ ಬಸವೇಶ್ವರ ವೃತ್ತಕ್ಕೆ ಮೆರವಣಿಗೆ ಆಗಮಿಸಲಿದೆ.
ಮೆರವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ, ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ. ಶ್ರೀರಾಮುಲು ಸೇರಿ ಅನೇಕ ಮುಖಂಡರು ಹಾಗೂ ಜಿಲ್ಲೆಯ ಹಾಲಿ ಮಾಜಿ ಶಾಸಕರು, ಸಂಸದರು ಭಾವಹಿಸಲಿದ್ದಾರೆ.
ಬಸವೇಶ್ವರ ವೃತ್ತದಲ್ಲೇ ತೆರದ ವಾಹನದಲ್ಲಿ ಮುಖಂಡರು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಭೆಯ ಬಳಿಕ ವೀರಣ್ಣ ಚರಂತಿಮಠ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಚುನಾವಣಾ ಉಸ್ತುವಾರಿ ಅರುಣ ಶಹಾಪುರ, ಮುಖಂಡರಾದ ಬಸವರಾಜ ಯಂಕಂಚಿ, ಯಲ್ಲಪ್ಪ ಬೆಂಡಿಗೇರಿ, ಮುತ್ತಣ್ಣ ಬೆಣ್ಣೂರ, ಶರಣು ತಳ್ಳಿಕೇರಿ, ಸತ್ಯನಾರಾಯಣ ಹೇಮಾದ್ರಿ ಇದ್ದರು.