ಐಹೊಳೆ ಸ್ಥಳಾಂತರ ಕನಸು ನನಸಾಗಲಿ...!

 ಹುನಗುಂದ ತಾಲೂಕಿನ ಐಹೊಳೆ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಚಾಲುಕ್ಯ ಉತ್ಸವ ಸಮಾರೋಪ ಸಮಾರಂಭವನ್ನು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು. ಚಿತ್ರದಲ್ಲಿ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿ.ಪಂ. ಸಿಇಒ ಶಶಿಧರ ಕುರೇರ ಮತ್ತಿತರರು ಇದ್ದರು.
ಹುನಗುಂದ ತಾಲೂಕಿನ ಐಹೊಳೆ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಚಾಲುಕ್ಯ ಉತ್ಸವ ಸಮಾರೋಪ ಸಮಾರಂಭವನ್ನು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು. ಚಿತ್ರದಲ್ಲಿ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿ.ಪಂ. ಸಿಇಒ ಶಶಿಧರ ಕುರೇರ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ವಿಜಯಾನಂದ ಕಾಶಪ್ಪನವರ ಅಭಿಮತ,
  • ಕಳೆಗುಂದಿದ ಸಮಾರೋಪ ಸಮಾರಂಭ
  • ಮೇಟಿ ಅವರಿಗೆ ಶ್ರದ್ಧಾಂಜಲಿ
ಜಯಸಿಂಹ ವೇದಿಕೆ ಐಹೊಳೆ: ದೇವಾಲಯಗಳ ವಾಸ್ತುಶಿಲ್ಪಗಳ ತೊಟ್ಟಿಲು ಖ್ಯಾತಿಯ ಐಹೊಳೆಯ ಸ್ಮಾರಕಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಗ್ರಾಮವನ್ನು ಸಂಪೂರ್ಣ ಸ್ಥಳಾಂತರ ಮಾಡಬೇಕು ಎನ್ನುವುದು ದಿ. ಶಾಸಕ ಎಚ್.ವೈ. ಮೇಟಿ ಅವರ ಕನಸಾಗಿತ್ತು. ಅವರ ಕನಸು ನನಸಾಗುವ ನಿರ್ಣಯವನ್ನು ನಮ್ಮ ಮುಖ್ಯಮಂತ್ರಿಗಳು ಮಾಡುತ್ತಾರೆ ಎನ್ನುವ ವಿಶ್ವಾಸವನ್ನು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ವ್ಯಕ್ತಪಡಿಸಿದರು.
ಹುನಗುಂದ ತಾಲೂಕಿನ ಐಹೊಳೆ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಚಾಲುಕ್ಯ ಉತ್ಸವದ 3ನೇ ದಿನದ ಸಮಾರೋಪದ ಉದ್ಘಾಟನೆ ಹಾಗೂ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
11 ವರ್ಷಗಳಿಂದ ನಿಂತುಹೋಗಿದ್ದ ಚಾಲುಕ್ಯ ಉತ್ಸವ ಇಂದು ಐಹೊಳೆಯಲ್ಲಿ ನಡೆಯುತ್ತಿದೆ ಎಂದರೆ ಇದಕ್ಕೆ ಮುಖ್ಯ ಕಾರಣವೇ ದಿ. ಎಚ್.ವೈ. ಮೇಟಿ ಅವರು. ಇಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇಟಿ ಅವರು ವಹಿಸಬೇಕಿತ್ತು. ಆದರೆ, ಅವರ ನಿಧನರಾಗಿದ್ದರಿಂದ ಬಹಳ ದುಃಖದಿಂದ ಈ ಅಧ್ಯಕ್ಷ ಸ್ಥಾನವನ್ನು ನಾನು ವಹಿಸಿಕೊಳ್ಳಬೇಕಾಯಿತು ಎಂದರು.
ಐಹೊಳೆಯನ್ನು ಸ್ಥಳಾಂತರ ಮಾಡಿ, ಇಲ್ಲಿ ಸ್ಮಾರಕಗಳನ್ನು ಸಂರಕ್ಷಿಸುವ ಬಗ್ಗೆ ಎಚ್.ವೈ. ಮೇಟಿ ಅವರಿಗೆ ಅತೀವ ಕಾಳಜಿ ಇತ್ತು. ಇದಕ್ಕಾಗಿ 2013ರಲ್ಲಿ ನನ್ನನ್ನು ಕರೆದುಕೊಂಡು ಮುಖ್ಯಮಂತ್ರಿಗಳ ಬಳಿಗೆ ಹೋಗಿ ಈ ಬಗ್ಗೆ ಒತ್ತಾಯ ಮಾಡಿದ್ದರು. ಅವರ ಕನಸನ್ನು ಈಗ ನಮ್ಮ ಮುಖ್ಯಮಂತ್ರಿಗಳು ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.
ಬಾಗಲಕೋಟೆ ಜಿಲ್ಲೆ ಚಾಲುಕ್ಯ ಅರಸರ ನಾಡು, ಅಣ್ಣ ಬಸವಣ್ಣನ ನಾಡಾಗಿದೆ. ಇಂಥ ದೀಮಂತರನ್ನು ಸ್ಮರಿಸುವ ಕೆಲಸ ಈ ನೆಲದಲ್ಲೆ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವರ್ಷ ಬಸವ ಜಯಂತಿಯನ್ನು ಕೂಡಲಸಂಗಮದಲ್ಲಿ ನಡೆಸಿದರು. ನಿಂತುಹೋಗಿದ್ದ ಚಾಲುಕ್ಯ ಉತ್ಸವವನ್ನು ಬಜೆಟ್‌ನಲ್ಲಿ ಘೋಷಿಸಿ ಅದಕ್ಕೆ ಹೆಚ್ಚಿನ ಅನುದಾನ ಒದಗಿಸಿದರು ಎಂದು ಹೇಳಿದರು.
ಚಾಲುಕ್ಯರ ಪ್ರಮುಖ ಸ್ಮಾರಕಗಳು ಇರುವ ಅಂದಿನ ವಾತಾಪಿ (ಬಾದಾಮಿ), ಕಿಸುವೊಳಲ್(ಪಟ್ಟದಕಲ್ಲು) ಆರ್ಯಪುರ (ಐಹೊಳೆ) ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮುಖ್ಯವಾಗಿ ಐಹೊಳೆ ಗ್ರಾಮಸ್ಥರು ಇಲ್ಲಿನ ಸ್ಮಾರಕಗಳನ್ನು ಸಂರಕ್ಷಣೆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಅನೇಕ ಕಡೆಗೆ ಕುಳ್ಳು ತಟ್ಟುವ ದೃಶ್ಯವೂ ಕಂಡು ಬರುತ್ತಿದೆ. ಸ್ಥಳೀಯರೇ ಹೀಗೆ ಮಾಡಿದರೆ ಹೇಗೆ? ಇವುಗಳನ್ನು ರಕ್ಷಿಸುವ ಕೆಲಸವನ್ನು ಗ್ರಾಮಸ್ಥರು ಮಾಡಬೇಕು ಎಂದರು.
ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಚಾಲುಕ್ಯ ಉತ್ಸವ ಮೂರು ದಿನಗಳ ಕಾಲ ಅತ್ಯಂತ ಸಂಭ್ರಮದಿಂದ ನಡೆದಿದೆ. ಈ ಉತ್ಸವ ನಡೆಯಲು ಶ್ರಮ ವಹಿಸಿದವರ ಪೈಕಿ ಎಚ್.ವೈ. ಮೇಟಿ ಅವರ ಪ್ರಮುಖರು. ಆದರೆ, ಇವತ್ತು ಅವರು ನಮ್ಮೊಂದಿಗೆ ಇಲ್ಲ. ಆದರೆ, ಅವರ ಕೆಲಸ ಕಾರ್ಯಗಳು ನಮ್ಮ ನಡುವೆ ಇವೆ. ರಾಜಕೀಯ ಜೀವನದಲ್ಲಿ ನಮಗೆಲ್ಲ ಮಾರ್ಗದರ್ಶನ ಮಾಡುತ್ತಿದ್ದರು ಎಂದು ಸ್ಮರಿಸಿಕೊಂಡರು.
ಐಹೊಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನಮಂತಗೌಡ ಪಾಟೀಲ, ಕೆಎಂಎಫ್ ಅಧ್ಯಕ್ಷ ಕರಿಗೌಡರ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಶಶಿಧರ ಕುರೇರ, ಆರ್ ಆ್ಯಂಡ್ ಆರ್ ಇಲಾಖೆ ಜಿಎಂ ಮಹಾದೇವ ಮುರಗಿ, ಎಸಿ ಸಂತೋಷ ಜಗಲಾಸರ್, ಕಾಂಗ್ರೆಸ್ ಮುಖಂಡ ಉಮೇಶ ಮೇಟಿ ಮತ್ತಿತರರು ಇದ್ದರು.

ಉದ್ಘಾಟನೆ ಉತ್ಸಾಹ ಸಮಾರೋಪಕ್ಕೆ ಇರಲಿಲ್ಲ

11 ವರ್ಷಗಳ ನಂತರ ಶುರುವಾದ ಚಾಲುಕ್ಯ ಉತ್ಸವಕ್ಕೆ ಬಾದಾಮಿಯಲ್ಲಿ ಜ. 19 ರಂದು ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರಿಂದ ಅಂದಿನ ಉದ್ಘಾಟನಾ ವೇದಿಕೆ ಜನಪ್ರತಿನಿಧಿಗಳಿಂದ ತುಂಬಿ ತುಳಕಿತು. 2ನೇ ದಿನ ಪಟ್ಟದಕಲ್ಲಿನಲ್ಲಿ ನಡೆದ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೊರತು ಪಡಿಸಿ ಆಹ್ವಾನಿತ ಯಾವೊಬ್ಬ ಸಚಿವರು ಆಗಮಿಸಲಿಲ್ಲ. ಬೆಳಗ್ಗೆ ಬಾಗಲಕೋಟೆಯಲ್ಲಿ ಸಮುದಾಯದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಚಾಲುಕ್ಯ ಉತ್ಸವದ ಪ್ರಮುಖ ಆಹ್ವಾನಿತ ಸಚಿವರು ಸಹ ಆಗಮಿಸಲಿಲ್ಲ. 3ನೇ ದಿನ ಸಮಾರೋಪಕ್ಕೆ ಐಹೊಳೆಗೆ ಆಹ್ವಾನಿತ ಸಚಿವರು, ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಅತ್ತ ಮುಖವನ್ನೇ ಮಾಡಲಿಲ್ಲ. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತ್ರ ಉಪಸ್ಥಿತರಿದ್ದರು. ಹೀಗಾಗಿ ಸಮಾರೋಪದ ಸಭಾ ವೇದಿಕೆ ಖಾಲಿ ಖಾಲಿಯಾಗಿತ್ತು. ಅಧಿಕಾರಿಗಳು ಮಾತ್ರ ಇದ್ದರು. ಒಟ್ಟಾರೆ, ಒಲ್ಲದ ಮನಸ್ಸಿನಿಂದ ಶುರುವಾದ ಚಾಲುಕ್ಯ ಉತ್ಸವ ಅಂತೂ ಇಂತೂ ನಡೆಯಿತಲ್ಲ ಎನ್ನುವುದೊಂದೆ ಸಮಾಧಾನ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net