ಸಾಮೂಹಿಕ ವಿವಾಹ ಭಾಗ್ಯವಂತರ ಮದುವೆ

 ಕಮತಗಿ ಸಮೀಪದ ಶಿರೂರ ಪಟ್ಟಣದಲ್ಲಿ ಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 25 ನವ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಕಮತಗಿ ಸಮೀಪದ ಶಿರೂರ ಪಟ್ಟಣದಲ್ಲಿ ಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 25 ನವ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
Published on

ಪ್ರಮುಖ ಮುಖ್ಯಾಂಶಗಳು

  • ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಮತ
  • 25 ಜೋಡಿಗಳಿಗೆ ಕಂಕಣಬಲ
  • ಉಚಿತ ಸಾಮೂಹಿಕ ವಿವಾಹ
ಕಮತಗಿ: ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗುವವರು ಪುಣ್ಯವಂತರಾಗಿದ್ದು, ಈ ವಿವಾಹಗಳು ಬಡವರ ಮದುವೆಗಳಲ್ಲ. ಅದು ಭಾಗ್ಯವಂತರ ಮದುವೆ ಎಂದು ಬಿಲ್ ಕೆರೂರಿನ ಬಿಲ್ವಾಶ್ರಮ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ಶಿರೂರ ಪಟ್ಟಣದಲ್ಲಿ ಶುಕ್ರವಾರ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಹಾಗೂ ಲಿಂ. ಸಿದ್ಧಲಿಂಗ ಶ್ರೀಗಳ 55ನೇ ಪುಣ್ಯರಾಧನೆ ನಿಮಿತ್ತ ಸ್ಥಳೀಯ ಸಿಂಚನ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಸಾಮೂಹಿಕ ವಿವಾಹಗಳು ಬಡವರ ಮದುವೆಗಳು ಎನ್ನುವ ಕಲ್ಪನೆ ಬೇಡ. ಇಲ್ಲಿ ಮದುವೆಯಾಗುವವರು ಪುಣ್ಯಜೀವಿಗಳಾಗಿದ್ದು, ವಧು-ವರರು ಉತ್ತಮ ಜೀವನ ನಡೆಸಿ ಒಳ್ಳೆಯ ಮಕ್ಕಳಿಗೆ ಜನ್ಮ ನೀಡಿ, ಅವರಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜದ ಆಸ್ತಿಯನ್ನಾಗಿ ಮಾಡಬೇಕು ಎಂದರು.
ಅಣ್ಣಿಗೇರಿಯ ದಾಸೋಹ ಮಠದ ಡಾ. ಶಿವಕುಮಾರ ಸ್ವಾಮೀಜಿ ಮಾತನಾಡಿ, ಪ್ರಪಂಚ ಹಾಗೂ ಪಾರಮಾರ್ಥ ಎರಡನ್ನೂ ಅನುಸರಿಸಿ ಬದುಕು ನಡೆಸುವವನೇ ಜಾಣ. ಮನುಷ್ಯ ಪ್ರಾಪಂಚಿಕ ಬದುಕಿನ ಜೊತೆಯಲ್ಲಿ ಪಾರಮಾರ್ಥ ಬದುಕನ್ನೂ ಸಹ ಅನುಸರಿಸಿಕೊಂಡು ನಡೆದಾಗ ಜೀವನ ಸುಂದರವಾಗಿರುತ್ತದೆ ಎಂದರಲ್ಲದೇ, ಸಾಮೂಹಿಕ ವಿವಾಹದ ಕೀರ್ತಿ ಗುಡ್ಡಾಪುರದ ದಾನಮ್ಮದೇವಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಗುಳೇದಗುಡ್ಡದ ಒಪ್ಪತ್ತೇಶ್ವರ ಶ್ರೀಗಳು ಮಾತನಾಡಿ, ಜಾತ್ರೆಗಳು ಕೇವಲ ಮೋಜು, ಮಸ್ತಿ ಮಾಡುವುದಕ್ಕಾಗಿ ಇರಕೂಡದು. ಸಮಾಜದ ಒಳಿತಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾತ್ರೆಯನ್ನು ಅರ್ಥ ಪೂರ್ಣಗೊಳಿಸುವ ಕೆಲಸ ನಡೆಯಬೇಕು. ಇದಕ್ಕೆ ಶಿರೂರಿನ ಸಿಂಚನ ಗೆಳೆಯರ ಬಳಗದ ಕಾರ್ಯ ಅನುಕರಣೀಯವಾಗಿದೆ ಎಂದರು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 25 ಜೋಡಿ ವಧು-ವರರು ಸಪ್ತಪದಿ ತುಳಿದು ಸತಿಪತಿಗಳಾದರು. ಶಿವಯೋಗಾಶ್ರಮದ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಮರಡಿಮಠದ ಕಾಡಸಿದ್ಧೇಶ್ವರ ಸ್ವಾಮೀಜಿ, ಶಿವಯೋಗಾಶ್ರಮದ ಮರಿಮಹಾಂತ ಚನ್ನವೀರ ದೇವರು, ಕಮತಗಿಯ ಹೊಳೆ ಹುಚ್ಚೇಶ್ವರ ಶ್ರೀಗಳು, ಅಮೀನಗಡದ ಪ್ರಭು ಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಿದ್ಧೇಶ್ವರ ವಿದ್ಯಾವರ್ಧಕ ಸಂಘಕ ಕಾರ್ಯದರ್ಶಿ ತಮ್ಮಣ್ಣ ಗಿರಿಜಾ, ಶಿಶು ಅಭಿವೃದ್ಧಿ ಇಲಾಖೆ ವಲಯ ಮೇಲ್ವಿಚಾರಕಿ ಜಯಶ್ರೀ ಕಟಗಿ, ಸಂಜಯ ನಡುವಿನಮನಿ, ಆರ್.ಎಸ್. ದೋಣಿ, ಬಸವಗೌಡ ಮಾಚಾ, ವೈ.ಎಸ್. ಮಾವರಾಣಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net