ಕೆರೂರ ಎಪಿಎಂಸಿ ಆವರಣದಲ್ಲಿ ಬುಧವಾರ ಸಂಜೆ ಮೆಕ್ಕೆಜೋಳ ಖರೀದಿ ಕುರಿತು ಕೃಷಿ ಇಲಾಖೆ ಮಾರಾಟ ಅಧಿಕಾರಿ ಬಿ.ಎಸ್. ಭಾವಿಹಾಳ ರೈತರೊಂದಿಗೆ ಸಭೆ ನಡೆಸಿ ಮಾತನಾಡಿದರು. ಡಾ. ಎಂ.ಜಿ. ಕಿತ್ತಲಿ, ರಂಗನಾಥ ದೇಸಾಯಿ ಇತರರಿದ್ದರು.
ಖರೀದಿ ಬಂದ್ ಆಗಿದ್ದಕ್ಕೆ ಕೆಲವು ರೈತರು ಆಕ್ಷೇಪ ವ್ಯಕ್ತಪಡಿಸಿದ್ದರು.
ಕೆರೂರ : ಇಲ್ಲಿನ ಎಪಿಎಂಸಿಯಲ್ಲಿ ಬೆಂಬಲ ಬೆಲೆಯಡಿ ಸರ್ಕಾರ ಸ್ಥಾಪಿಸಿದ್ದ ಮೆಕ್ಕೆಜೋಳ ಖರೀದಿ ಕೇಂದ್ರವು ಕೆಲ ದಿನಗಳಿಂದ ಸ್ಥಗಿತಗೊಂಡಿತ್ತು. ಸದ್ಯ ಎಲ್ಲಾ ಸಮಸ್ಯೆಗಳ ಪರಿಹಾರ ಮಾಡಿಕೊಂಡು ಮತ್ತೆ ಖರೀದಿ ಆರಂಭಿಸಲಾಗಿದೆ ಎಂದು ಬಾಗಲಕೋಟೆ ಕೃಷಿ ಇಲಾಖೆ ಮಾರಾಟ ಅಧೀಕ್ಷಕಿ ಬಿ.ಎಸ್. ಭಾವಿಹಾಳ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಬುಧವಾರ ಖರೀದಿ ಕೇಂದ್ರದಲ್ಲಿ ರೈತರೊಂದಿಗೆ ಚರ್ಚೆ ನಡೆಸಿ, ಮಾತನಾಡಿದ ಅವರು, ಖರೀದಿ ಬಂದ್ ಆಗಿದ್ದಕ್ಕೆ ಕೆಲವು ರೈತರು ಆಕ್ಷೇಪ ವ್ಯಕ್ತಪಡಿಸಿದ್ದರು. ಎಲ್ಲವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹರಿಸಿ, ಮತ್ತೆ ಪ್ರಾರಂಭಿಸಲಾಗಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೃಷಿ ಮಾರುಕಟ್ಟೆ ಅಧಿಕಾರಿ ಬಿ.ಎಸ್. ಭಾವಿಹಾಳ, ಕಾರ್ಯದರ್ಶಿ ರವಿ ರಾಠೋಡ, ಡಾ. ಎಂ.ಜಿ. ಕಿತ್ತಲಿ, ದಾನಪ್ಪ ಕಿರಗಿ, ಮುನಿಯಪ್ಪ ಚೂರಿ, ಉಮೇಶ ಕೊಣ್ಣೂರ, ಪರಪ್ಪ ಚಂದರಗಿ, ಶ್ರೀಧರ ಕಾಂಬಳೆ, ಹಣಮಂತ ಕುಂದರಗಿ, ಕುಮಾರ ಐಹೊಳೆ ಇತರರಿದ್ದರು.
ಕ್ವಿಂಟಾಲ್‌ಗೆ 2150 ರೂ. ದರ ನಿಗದಿ
ಸರ್ಕಾರದಿಂದ ಲಿಂಗರಾಜ ವಾಲಿಯವರ ಕಂಪನಿಯಿಂದ 44,000 ಕ್ವಿಂಟಾಲ್ ಮೆಕ್ಕೆ ಜೋಳ ಖರೀದಿಸಬೇಕಿತ್ತು. ಆದರೆ 14 ಸಾವಿರ ಕ್ವಿಂಟಾಲ್ ಮಾತ್ರ ಖರೀದಿ ಮಾಡಿದ್ದರು. ಸರ್ಕಾರದ ಒಪ್ಪಂದದ ಪ್ರಕಾರ ರೈತರಿಂದ 30 ಸಾವಿರ ಕ್ವಿಂಟಾಲ್ ಖರೀದಿಸಬೇಕಿದೆ. ಹೀಗಾಗಿ ರೈತರು ಹೋರಾಟಕ್ಕೆ ಮುಂದಾಗಿದ್ದರು. ಇದನ್ನು ಅರಿತು ಕೃಷಿ ಅಧಿಕಾರಿಗಳು ಖರೀದಿ ಕೇಂದ್ರ ಪುನರಾರಂಭಿಸುವ ಭರವಸೆ ನೀಡಿದ್ದರು. ಅಲ್ಲದೇ ಪ್ರತಿ ಕ್ವಿಂಟಾಲ್‌ಗೆ 2150 ರೂ. ದರ ನಿಗದಿ ಪಡಿಸಿ ಗುರುವಾರದಿಂದ ಖರೀದಿ ಆರಂಭವಾಗಲಿದೆ ಎಂದು ಘೋಷಣೆ ಮಾಡಿದರು.