ಲೋಕಾಪುರ ಪಟ್ಟಣದ ಪೊಲೀಸ್ ಕಚೇರಿಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಪಿಎಸ್‌ಐ ಕೆ.ಬಿ.ಜಕ್ಕನ್ನವರ ಮಾತನಾಡಿದರು. ರಫೀಕ ಬೈರಕದಾರ, ಎ.ಎಂ.ಯಾದವಾಡ, ಮಹೇಶ ಹುಗ್ಗಿ, ಮಾರುತಿ ರಂಗಣ್ಣವರ ಇದ್ದರು.
ಲೋಕಾಪುರ : ಬಕ್ರೀದ್ ಹಬ್ಬವನ್ನು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೌಹಾರ್ದಯುತ ಹಾಗೂ ಕಾನೂನು ಬದ್ಧವಾಗಿ ಆಚರಿಸಬೇಕು ಎಂದು ಪಿಎಸ್‌ಐ ಕೆ.ಬಿ.ಜಕ್ಕನ್ನವರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಮುಸ್ಲಿಂ ಮುಖಂಡರು ಹಾಗೂ ವಿವಿಧ ಸಮಾಜದ ಗಣ್ಯರೊಂದಿಗೆ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಕ್ರೀದ್ ಹಬ್ಬವು ತ್ಯಾಗ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳ ಸಂಕೇತವಾಗಿದೆ. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸುವ ರೀತಿಯಲ್ಲಿ ಆಚರಣೆ ನಡೆಯಬೇಕು ಎಂದರು.
ಯಾವುದೇ ರೀತಿಯ ಅಹಿತರಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳು, ಪ್ರಚೋದನಕಾರಿ ಸಂದೇಶಗಳು ಹಾಗೂ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ರಫೀಕ ಬೈರಕದಾರ ಮಾತನಾಡಿ, ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಅಣ್ಣ ತಮ್ಮಂದಿರಂತೆ ಉತ್ತಮ ಸಂಬಂಧ ಹೊಂದಿದ್ದೇವೆ. ಯಾವುದೇ ಧರ್ಮದ ಹಬ್ಬಗಳಿದ್ದರೂ ಎಲ್ಲರೂ ಸಹಬಾಳ್ವೆ ಮತ್ತು ಸಹಯೋಗದೊಂದಿಗೆ ಆಚರಿಸುತ್ತಾ ಬಂದಿದ್ದೇವೆ. ಎಲ್ಲಾ ಹಬ್ಬಗಳನ್ನು ಪ್ರತಿ ವರ್ಷ ಶಾಂತಿ, ಸೌಹಾರ್ದವಾಗಿ ಆಚರಿಸುತ್ತೇವೆ ಎಂದು ತಿಳಿಸಿದರು.
ಅಂಜುಮನ್-ಎ-ಇಸ್ಲಾಂ ಕಮೀಟಿ ಅಧ್ಯಕ್ಷ ಹಸನಡೋಂಗ್ರಿ ಮಹಾಲಿಂಗಪುರ ಮಾತನಾಡಿ, ಬೆಳಗ್ಗೆ 7 ಗಂಟೆಗೆ ಜಾಮೀಯಾ ಮಸೀದಿಗೆ ಹಾಜರಾಗಿ 7.30 ಕ್ಕೆ ರ‍್ಯಾಲಿ ಪ್ರಾರಂಭಗೊಂಡು ಮೇನ ಬಜಾರ, ಬಸವೇಶ್ವರ ವೃತ್ತ, ಜಾಲಿಕಟ್ಟಿ ಕ್ರಾಸ ಮುಖಾಂತರ ಈದ್ಗಾ ಮೈದಾನ ತಲುಪಿ ಈದ್-ಉಲ್-ಅದಾ ಬಕ್ರೀದ್ ನಮಾಜ ಮಾಡುವ ಕಾರ್ಯಕ್ರಮ ವಿರುತ್ತದೆ ತಿಳಿಸಿದರು.
ಮುಸ್ಲಿಂ ಸಮಾಜದ ಮುಖಂಡ ಅಲ್ಲಾಸಾಬ ಯಾದವಾಡ, ಮಹೇಶ ಹುಗ್ಗಿ, ಗೋವಿಂದಪ್ಪ ಕೌಲಗಿ ಮಾತನಾಡಿದರು. ಪಿಕೆಪಿಎಸ್ ಸದಸ್ಯ ಮಾರುತಿ ರಂಗಣ್ಣವರ, ಅಬ್ದುಲ್ ರೆಹೆಮಾನ ತೊರಗಲ್, ಮಾರುತಿ ಕರೆಣ್ಣವರ, ಗೋಪಾಲ ಲಮಾಣಿ, ಸುಲ್ತಾನ ಕಲಾದಗಿ, ದ್ಯಾವಪ್ಪ ನಾಯ್ಕ, ಕುತುಬು ಅತ್ತಾರ, ಶಬ್ಬೀರ ಚೌಧರಿ ಇದ್ದರು.