ಮಹಿಷವಾಡಗಿ ಸೇತುವೆ ಕಾಮಗಾರಿ ಆಮೆಗತಿ

ರಬಕವಿ ಬನಹಟ್ಟಿ ಸಮೀಪದ ಕೃಷ್ಣಾ ನದಿಗೆ ಅಡ್ಡಲಾಗಿ ಮಹಿಷವಾಡಗಿ ಸೇತುವೆ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವ ಚಿತ್ರ.
ರಬಕವಿ ಬನಹಟ್ಟಿ ಸಮೀಪದ ಕೃಷ್ಣಾ ನದಿಗೆ ಅಡ್ಡಲಾಗಿ ಮಹಿಷವಾಡಗಿ ಸೇತುವೆ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವ ಚಿತ್ರ.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ನಿರ್ಲಕ್ಷ್ಯದಿಂದ ಹೋರಾಟ ನಡೆಸಲು ನಿರ್ಧಾರ
  • ಶೇ. 35ರಷ್ಟು ಕೆಲಸ ಪೂರ್ಣ
ರಬಕವಿ/ಬನಹಟ್ಟಿ: ಬೆಳಗಾವಿ-ಬಾಗಲಕೋಟೆ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ಯೋಜನೆಯಾದ ಮಹಿಷವಾಡಗಿ ಸೇತುವೆ ಕಾಮಗಾರಿ ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದು, ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಸರ್ಕಾರದ ನಿರ್ಲಕ್ಷ್ಯದ ಹಿನ್ನೆಲೆ ಮತ್ತೆ ಹೋರಾಟ ಆರಂಭಿಸುವ ಸೂಚನೆಗಳು ಕಾಣಿಸುತ್ತಿವೆ.
ಇದಕ್ಕೆ ಪೂರಕವಾಗಿ ರಬಕವಿಯಲ್ಲಿ ಕಳೆದ ಡಿ. 16ರಿಂದ ಒಂದು ವಾರ ಕಾಲ ಉಪವಾಸ ಸತ್ಯಾಗ್ರಹಕ್ಕೆ ಕೊಂಚ ಆಸಕ್ತಿ ತೋರಿದ್ದ ಸರ್ಕಾರ ಮತ್ತೆ ತೀವ್ರ ನಿರ್ಲಕ್ಷ್ಯಕ್ಕೆ ಕಾರಣವಾಗಿದ್ದರಿಂದ ಮತ್ತೆ ಹೋರಾಟ ನಡೆಯುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ ಅಥಣಿ ತಾಲೂಕಿನ ಮಹಿಷವಾಡಗಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ರೈತರ ಭೂಮಿಗೆ ಪರಿಹಾರ ದೊರಕಿದೆ.
2017ರಲ್ಲಿ ಆರಂಭವಾದ ಈ ಕಾಮಗಾರಿಗೆ ಪ್ರಾರಂಭದಲ್ಲಿ 25 ಕೋಟಿ ರೂ. ಮಂಜೂರಾಗಿದ್ದು, ನಂತರ 2021ರಲ್ಲಿ 45 ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿತ್ತು. ಆದರೂ ಇಷ್ಟು ವರ್ಷಗಳಲ್ಲಿ ಶೇ. 35ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ.

ಕಾಮಗಾರಿಗೆ ಮತ್ತೆ ಕಂಟಕ

ಇತ್ತೀಚಿನ ದಿನಗಳಲ್ಲಿ ಹಿಪ್ಪರಗಿ ಬ್ಯಾರೇಜ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ನದಿಯೊಳಗಿನ ಉಳಿದ ಮೂರು ಪಿಲ್ಲರ್‌ಗಳ ಕಾಮಗಾರಿ ನಡೆಸಲು ಅನುಕೂಲಕರ ಪರಿಸ್ಥಿತಿ ಇದ್ದರೂ ಕಾರ್ಯ ಆರಂಭವಾಗಿಲ್ಲ. ಗುತ್ತಿಗೆದಾರರು ತಕ್ಷಣವೇ ನದಿಯೊಳಗೆ ಉಳಿದಿರುವ ಮೂರು ಪಿಲ್ಲರ್‌ಗಳ ಕಾಮಗಾರಿ ಪ್ರಾರಂಭಿಸಬೇಕಿದೆ. ಈ ಮೊದಲು ಸಚಿವ ಆರ್.ಬಿ. ತಿಮ್ಮಾಪೂರ ಆಶ್ವಾಸನೆ ನೀಡಿದಂತೆ ಪ್ರಸಕ್ತ ವರ್ಷದೊಳಗೆ ಕಾರ್ಯ ಮುಕ್ತಾಯಗೊಳಿಸುವುದಾಗಿ ತಿಳಿಸಿದ್ದರಾದರೂ ಮತ್ತೆ ನಿರ್ಲಕ್ಷ್ಯ ಹಾದಿಯಿಂದ `ಆಮೆಗತಿ'ಯಾಗಿದೆ.
"

ಮೇಲಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ತಿಳಿಸಲಾಗಿದ್ದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮತ್ತೊಮ್ಮೆ ಬೇಸಿಗೆಯೊಳಗೆ ನದಿಯೊಳಗಿನ ಕಾರ್ಯ ಮುಕ್ತಾಯಕ್ಕೆ ಮುತುವರ್ಜಿ ವಹಿಸುತ್ತೇನೆ.

— | ಸಿದ್ದು ಸವದಿ, ಶಾಸಕರು, ತೇರದಾಳ.
"

ಬೇಸಿಗೆ ಮುಗಿಯುವ ಹಂತದಲ್ಲಿದೆ. ಇನ್ನೊಂದು ತಿಂಗಳೊಳಗಾಗಿ ನದಿಯೊಳಗಿನ ಕಾರ್ಯವಾಗಬೇಕು. ಸಂಬಂಧಿಸಿದ ಅಧಿಕಾರಿ, ಸಚಿವರೊಂದಿಗೂ ಮಾತನಾಡಿದ್ದು, ಕಾರ್ಯವಾಗುವ ನಿರೀಕ್ಷೆಯಿದೆ. ಇಲ್ಲವಾದಲ್ಲಿ ಮತ್ತೆ ಹೋರಾಟ ಅನಿವಾರ್ಯ.

— | ಡಾ. ರವಿ ಜಮಖಂಡಿ, ಅಧ್ಯಕ್ಷರು, ರಬಕವಿ-ಬನಹಟ್ಟಿ ಮಹಿಷವಾಡಗಿ ಸೇತುವೆ ಹೋರಾಟ ಸಮಿತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net