ಬಸವ ಅನುಯಾಯಿಗಳ ಮೇಲೆ ಗದಾಪ್ರಹಾರ

 ಕೂಡಲಸಂಗಮದಲ್ಲಿ ನಡೆದ 39ನೇ ಶರಣ ಮೇಳದಲ್ಲಿ ಮಂಗಳವಾರ ಪಾಲ್ಗೊಂಡಿದ್ದ ಭಕ್ತರು
ಕೂಡಲಸಂಗಮದಲ್ಲಿ ನಡೆದ 39ನೇ ಶರಣ ಮೇಳದಲ್ಲಿ ಮಂಗಳವಾರ ಪಾಲ್ಗೊಂಡಿದ್ದ ಭಕ್ತರು
Published on

ಪ್ರಮುಖ ಮುಖ್ಯಾಂಶಗಳು

  • ಶರಣ ಮೇಳದಲ್ಲಿ ಹೇಳಿಕೆ
  • ಬಸವ ಧರ್ಮ ನಿಸರ್ಗ ಧರ್ಮವಾಗಿದೆ
  • ಸಾಹಿತಿ ರಂಜಾನ್ ದರ್ಗಾ ಆತಂಕ
ಬಾಗಲಕೋಟೆ: ‘ಬಸವಾದಿ ಶರಣರ ಅನುಯಾಯಿಗಳ ಮೇಲೆ ದೊಡ್ಡ ಮಟ್ಟದ ಗದಾಪ್ರಹಾರ ನಡೆದಿದೆ. ಲಿಂಗಾಯತದಲ್ಲಿ ಹುಟ್ಟಿದವರೇ ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಸಾಹಿತಿ ರಂಜಾನ್ ದರ್ಗಾ ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯ ಕೂಡಲಸಂಗಮ ಕ್ಷೇತ್ರದಲ್ಲಿ ಮಂಗಳವಾರ ನಡೆದ ಬಸವ ಧರ್ಮ ಪೀಠದ 39ನೇ ಶರಣ ಮೇಳದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರಣ ಮೇಳದಲ್ಲಿ ಪತ್ರಕರ್ತ ರವಿ ಮೂಕಿ ಅವರಿಗೆ ರಾಜ್ಯ ಮಟ್ಟದ ಶರಣ ಜ್ಞಾನ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜಗದ್ಗುರು ಮಾತೆ ಗಂಗಾದೇವಿ ಮತ್ತಿತರರಿದ್ದರು
12ನೇ ಶತಮಾನದಲ್ಲಿ ಬಸವಾದಿ ಶರಣರನ್ನು ಯಾರು ಹತ್ಯೆ ಮಾಡಿದರೋ ಅಂಥವರ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇದು ಆತ್ಮವಿಮರ್ಶೆಯ ಕಾಲವಾಗಿದೆ. ನಾವು ನಮ್ಮ ಧರ್ಮ ಪಾಲನೆ ಮಾಡುತ್ತಿದ್ದೇವಾ? ಬಸವ ತತ್ವ ಪಾಲನೆ ಮಾಡಬೇಕು. ಲಿಂಗಾಯತ ಅರಿವಿನ ಧರ್ಮವಾಗಿದೆ. ಅಸಮಾನತೆ, ಮೌಢ್ಯಗಳು, ನೀಚ ಬುದ್ದಿ, ಸಂಪ್ರದಾಯಗಳಿಂದ ಲಿಂಗಾಯತರು ಹೊರಬರಬೇಕಿದೆ. ವಿಶ್ವಸಂಸ್ಥೆ ಹಾಗೂ ತತ್ವಜ್ಞಾನಿಗಳು ಕಂಡುಕೊಂಡಿರುವ ಜಗತ್ತು ಕಾಡುವ ಪ್ರಮುಖ ನಾಲ್ಕು ಸಮಸ್ಯೆಗಳಿಗೆ ಬಸವಣ್ಣನ ಒಂದೇ ಒಂದು ವಚನದಲ್ಲಿ ಪರಿಹಾರ ಕಂಡು ಬರುತ್ತದೆ ಎಂದರೆ ಬಸವ ಧರ್ಮದ ಶಕ್ತಿ ಗೊತ್ತಾಗುತ್ತದೆ. ಬಸವ ಧರ್ಮದಲ್ಲಿ ನಿಸರ್ಗ ಧರ್ಮ, ನಿಸರ್ಗದ ತತ್ವ ಅಡಗಿದೆ ಎಂದರು.
ಈ ಜಗತ್ತಿನಲ್ಲಿ ರಾಜ್ಯ ಉಳಿಸಿಕೊಳ್ಳಲು, ರಾಜ್ಯ ವಿಸ್ತರಿಸಲು ಅನೇಕ ವೀರಮಹಿಳೆಯರು ಖಡ್ಗ ಹಿಡಿದು ಹೋರಾಡಿದ್ದಾರೆ. ಆದರೆ, ಜ್ಞಾನ ಸಂಪತ್ತು ಉಳಿಸಿಲು ಖಡ್ಗ ಝಳಪಿಸಿದ ಏಕೈಕ ವೀರಮಾತೆ ಎಂದರೆ ಅದು ಅಕ್ಕ ನಾಗಮ್ಮ. ಸರ್ವಸಮಾನತೆಯ ಸಂಕೇತವೇ ಇಷ್ಟಲಿಂಗ. ಜಗತ್ತು ಉಳಿಸಲು ಲಿಂಗಪ್ರಜ್ಞೆ ಬೆಳೆಸಬೇಕು ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಮಾತೆ ಗಂಗಾದೇವಿ ಆಶೀರ್ವಚನ ನೀಡಿ, ಎಲ್ಲ ಧರ್ಮಿಯರಿಗೆ ಒಂದು, ಎರಡು ಧರ್ಮಕ್ಷೇತ್ರಗಳು ಇದ್ದರೆ ಲಿಂಗಾಯತರಿಗೆ ಮೂರು ಧರ್ಮ ಕ್ಷೇತ್ರಗಳು ಇವೆ. ಕೂಡಲಸಂಗಮ, ಬಸವ ಕಲ್ಯಾಣ ಮತ್ತು ಉಳುವಿ ಆ ಮೂರು ಕ್ಷೇತ್ರಗಳು. ಕೂಡಲಸಂಗಮ ಲಿಂಗಾಯತರಿಗೆ ತವರು ಮನೆ ಇದ್ದಂತೆ. ಪ್ರತಿ ವರ್ಷ ಲಿಂಗಾಯತರು ತವರು ಮನೆಯಲ್ಲಿ ಸಮಾಗಮಗೊಂಡು ಶರಣ ಮೇಳ ಆಯೋಜಿಸುತ್ತ ಬರಲಾಗಿದೆ ಎಂದು ವಿವರಿಸಿದರು.
ಬಸವಾತ್ಮಜೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಖ್ಯಾತ ಗಾಯಕಿ ಸಂಗೀತಾ ಕಟ್ಟಿ, ನಾನೊಬ್ಬ ಸಂಗೀತಗಾರ್ತಿಯಾಗಿ ಬಸವ ತತ್ವವನ್ನು ನನ್ನ ಸಂಗೀತದಲ್ಲಿ ಅಳವಡಿಸಿಕೊಳ್ಳುತ್ತಿದ್ದೇನೆ. ಸಂಗೀತಗಾರರು ಸ್ವರ ಭಾಷೆ, ರಾಗ ಭಾಷೆಯ ಬೆನ್ನುಹತ್ತಿ ಹೋಗಬೇಕು. ಕಾಯಕವೇ ಕೈಲಾಸ ತತ್ವವನ್ನು ನಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಮಾತಿನ ನಡುವೆ ಅನೇಕ ವಚನಗಳ ಗಾಯನ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net