ಶಾಂತಿ, ಸೌಹಾರ್ದತೆಯಿಂದ ಬಾಳಿ

ರಬಕವಿ-ಬನಹಟ್ಟಿ ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಅಧಿಕಾರಿಗಳು ದಲಿತರಿಗೆ ಕ್ಷೌರಿಕ ಅಂಗಡಿಗಳಲ್ಲಿ ಕ್ಷೌರಕ್ಕೆ ಅವಕಾಶ ಮಾಡಿಕೊಟ್ಟರು.
ರಬಕವಿ-ಬನಹಟ್ಟಿ ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಅಧಿಕಾರಿಗಳು ದಲಿತರಿಗೆ ಕ್ಷೌರಿಕ ಅಂಗಡಿಗಳಲ್ಲಿ ಕ್ಷೌರಕ್ಕೆ ಅವಕಾಶ ಮಾಡಿಕೊಟ್ಟರು.
Published on

ಪ್ರಮುಖ ಮುಖ್ಯಾಂಶಗಳು

  • ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸಲಹೆ
  • ತಮದಡ್ಡಿಯಲ್ಲಿ ಅಧಿಕಾರಿಗಳ ಸಭೆ
  • ದೂರು-ಪ್ರತಿದೂರು ಆಲಿಕೆ
ಬಾಗಲಕೋಟೆ : ದಲಿತರಿಗೆ ಬಹಿಷ್ಕಾರ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದ ತಮದಡ್ಡಿ ಗ್ರಾಮದಲ್ಲಿ ಹಿರಿಯ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದು ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಯುವಲ್ಲಿ ಯಶಸ್ಸು ಕಂಡಿದೆ.
ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರದ ಆರೋಪ ಕೇಳಿ ಬಂದಿತ್ತು. ತಮದಡ್ಡಿ ಗ್ರಾಮದಲ್ಲಿ ಉತ್ಸವಗಳ ಸಂದರ್ಭದಲ್ಲಿ ಸಹಕಾರ ಸಂಘಗಳ ನಾಮಫಲಕ, ಬ್ಯಾನರ್‌ಗಳಲ್ಲಿ ದಲಿತ ಮುಖಂಡರ ಹೆಸರು ಪ್ರಕಟಿಸುವುದಿಲ್ಲ. ಎಸ್‌ಡಿಎಂಸಿ ಅಧ್ಯಕ್ಷ ಸ್ಥಾನದ ಅವಕಾಶ ದೊರೆತಿಲ್ಲ. ಪರಿಶಿಷ್ಟ ಸಮುದಾಯದವರಿಗಾಗಿ ಶೌಚಾಲಯ ನಿರ್ಮಿಸಿಲ್ಲ. ಗ್ರಾಮದಲ್ಲಿ ಭೇದ ಭಾವದ ವಾತಾವರಣವಿದೆ ಎಂದು ದಲಿತ ಮುಖಂಡರು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಫೆ. 23ರಂದು ಗ್ರಾಮಕ್ಕೆ ತೆರಳಿದ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಡಿವೈಎಸ್‌ಪಿ ಸಯ್ಯದ್ ರೋಷನ್ ಜಮೀರ್ ಹಾಗೂ ಅಧಿಕಾರಿಗಳು ಸಭೆ ನಡೆಸಿದರು. ಸವರ್ಣೀಯರು ಹಾಗೂ ದಲಿತ ಮುಖಂಡರು ಸಭೆಯಲ್ಲಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯವಾಗಿ ಕಳೆದ ಐದು ವರ್ಷಗಳಲ್ಲಿ ಗ್ರಾಮ ಪಂಚಾಯಿತಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಬಂದ ಅನುದಾನದ ಬಗ್ಗೆ ವಿವರವನ್ನೇ ನೀಡುತ್ತಿಲ್ಲ. ಅಲ್ಲದೇ ದಲಿತರನ್ನು ಸಭೆಗಳಿಗೆ ಕರೆಯದೇ ಅಹಂ ಮರೆಯುತ್ತಾರೆ ಎಂದು ದೂರಿದರು. ನಂತರ ಶಾಂತಿ, ಸೌಹಾರ್ದತೆಯಿಂದ ಬದುಕಬೇಕು ಎಂದು ಸಲಹೆ ನೀಡಿದ ಅಧಿಕಾರಿಗಳು ದಲಿತರ ಸಮಸ್ಯೆ ಆಲಿಸಿ ಪರಿಹರಿಸುವ ಭರವಸೆ ನೀಡಿದರು.
ಸಭೆ ನಂತರ ದಲಿತರಿಗೆ ಆಂಜನೇಯ ದೇವಸ್ಥಾನದಲ್ಲಿ ಪ್ರವೇಶ ಕಲ್ಪಿಸಿ, ಕ್ಷೌರಿಕ ಅಂಗಡಿಗಳಲ್ಲಿ ಕ್ಷೌರಕ್ಕೆ ಅವಕಾಶ ಒದಗಿಸಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪವಿಭಾಗಾಕಾರಿ ಶ್ವೇತಾ ಬೀಡಿಕರ, ಬ್ಯಾನರ್‌ನಲ್ಲಿ ದಲಿತ ಮುಖಂಡರ ಹೆಸರು, ಫೋಟೊ ಪ್ರಕಟಿಸದಿರುವುದು, ದೇವಸ್ಥಾನ ಪ್ರವೇಶಕ್ಕೆ ನಕಾರ ಸೇರಿ ನಾನಾ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ವಿವರಿಸಿದರು.
ಎರಡೂ ಪಂಗಡಗಳ ಮುಖಂಡರಲ್ಲಿ ವಿಶ್ವಾಸ ಮೂಡಿಸಿ ಸಮಸ್ಯೆ ಪರಿಹರಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net