ಪುಣ್ಯ ಕಾರ್ಯಗಳಿಂದ ಜೀವನ ಸಾರ್ಥಕ

 ಕಮತಗಿ ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ನಡೆದ ಹೇಮ ವೇಮನ ಸದ್ಬೋಧನ ಪೀಠದ ವಾರ್ಷಿಕೋತ್ಸವ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು. ತೊಂಡಿಕಟ್ಟಿ ಅವಧೂತ ಗಾಳೆಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು, ಗೋವಿಂದಪ್ಪ ಗೌಡಪ್ಪಗೋಳ, ಗಣಪಾಲ ಐನಾಥರೆಡ್ಡಿ, ಆರ್.ಎಲ್.ಕಟಗೇರಿ ಇತರರಿದ್ದರು.
ಕಮತಗಿ ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ನಡೆದ ಹೇಮ ವೇಮನ ಸದ್ಬೋಧನ ಪೀಠದ ವಾರ್ಷಿಕೋತ್ಸವ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು. ತೊಂಡಿಕಟ್ಟಿ ಅವಧೂತ ಗಾಳೆಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು, ಗೋವಿಂದಪ್ಪ ಗೌಡಪ್ಪಗೋಳ, ಗಣಪಾಲ ಐನಾಥರೆಡ್ಡಿ, ಆರ್.ಎಲ್.ಕಟಗೇರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಹೇಳಿಕೆ
  • ಹೇಮ ವೇಮನ ಸದ್ಬೋಧನ ಪೀಠದ ವಾರ್ಷಿಕೋತ್ಸವ
  • ನಿಸ್ವಾರ್ಥ ಸೇವೆ ಹಾಗೂ ಪುಣ್ಯ ಕಾರ್ಯಗಳನ್ನು ಮಾಡುವುದರಿಂದ ಜೀವನ ಸಾರ್ಥಕಗೊಳ್ಳುತ್ತದೆ.
ಕಮತಗಿ: ನಿಸ್ವಾರ್ಥ ಸೇವೆ ಹಾಗೂ ಪುಣ್ಯ ಕಾರ್ಯಗಳನ್ನು ಮಾಡುವುದರಿಂದ ಜೀವನ ಸಾರ್ಥಕಗೊಳ್ಳುತ್ತದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಹೇಳಿದರು.
ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ಭಾನುವಾರ ನಡೆದ ಹೇಮ ವೇಮನ ಸದ್ಬೋಧನ ಪೀಠದ ವಾರ್ಷಿಕೋತ್ಸವ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸದ್ಬೋಧನ ಪೀಠ 16 ವರ್ಷಗಳಿಂದ ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ ವೇಮನರ ತತ್ವ ಚಿಂತನ ಕಾರ್ಯಕ್ರಮ ಸಮಾಜವನ್ನು ಒಗ್ಗೂಡಿಸಿ ಎಲ್ಲರಲ್ಲಿ ಭಕ್ತಿ ಭಾವ ಬೆಳೆಸಿ ಧಾರ್ಮಿಕ ಜಾಗೃತಿ ಮೂಡಿಸಿದ್ದು, ವಿದ್ಯಾರ್ಥಿಗಳ ದತ್ತು ಸ್ವೀಕಾರದ ಪುಣ್ಯ ಕಾರ್ಯ ಬಡ ಮಕ್ಕಳ ಶೈಕ್ಷಣಿಕ ಬದುಕಿಗೆ ಬೆಳಕಾಗಿದೆ ಎಂದರು.
ರಾಜ್ಯ ರಡ್ಡಿ ಜನಸಂಘದ ನಿರ್ದೇಶಕ ಗಣಪಾಲ ಐನಾಥರೆಡ್ಡಿ ಮಾತನಾಡಿ, ಬಡ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಗತ್ಯ ನೆರವು ನೀಡುವ ಮಾನವೀಯ ಕಾರ್ಯವನ್ನು ಮಾಡುತ್ತಿರುವ ಸದ್ಬೋಧನ ಪೀಠದ ಕಾರ್ಯಕ್ಕೆ ಸಮಾಜದ ಸಹಾಯ, ಸಹಕಾರ ನಿರಂತರವಾಗಿರಬೇಕು. ಅದರಿಂದ ಸಮಾಜದ ಘನತೆಯೂ ಹೆಚ್ಚುತ್ತದೆ ಎಂದು ಹೇಳಿದರು.
ಉಪದೇಶ ನೀಡಿದ ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ, ಮಹಾಯೋಗಿ ವೇಮನರ ಚಿಂತನೆಗಳನ್ನು ಮನೆ ಮನೆಗೆ ತಲುಪಿಸಿ ಆ ಮೂಲಕ ಸಮಾಜಕ್ಕೆ ಒಳಿತನ್ನು ಮಾಡುತ್ತಿರುವ ಪೀಠದ ಪುಣ್ಯದ ಕಾರ್ಯ ಶ್ಲಾಘನೀಯ ಎಂದರು.
ನಿವೃತ್ತ ಕೃಷಿ ಉಪ ನಿರ್ದೇಶಕ ಆರ್.ಎಲ್. ಕಟಗೇರಿ ಮಾತನಾಡಿ, ಧಾನ ಧರ್ಮದ ಕಾರ್ಯಗಳು ಮನುಷ್ಯ ಜೀವನಕ್ಕೆ ಸಾರ್ಥಕತೆ ತಂದುಕೊಡುತ್ತವೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ತೊಂಡಿಕಟ್ಟಿ ಅವಧೂತ ಗಾಳೆಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು ಆಶೀರ್ವಚನ ನೀಡಿದರು. ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಅಧ್ಯಕ್ಷ ಪಂಡಿತ ಮಾಚಾ ಹಾಗೂ ಪೀಠದ ನಿರ್ದೇಶಕ ರಂಗಣ್ಣ ಕಟಗೇರಿ ವೇದಿಕೆಯಲ್ಲಿದ್ದರು.
ಸಮಾರಂಭದಲ್ಲಿ 8 ಬಡ ವಿದ್ಯಾರ್ಥಿಗಳನ್ನು ದತ್ತು ಪಡೆಯಲಾಯಿತು. ಕಳೆದ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿದ ಐವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಹೇಮರಡ್ಡಿ ಮಲ್ಲಮ್ಮ ಭಜನಾ ಮಂಡಳಿ ವೇಮನ ವಚನ ಪಠಿಸಿದರು. ಹಣಮಂತ ಹುದ್ದಾರ ಸ್ವಾಗತಿಸಿದರು. ಪಾಂಡು ಸಣ್ಣಪ್ಪನವರ ಹಾಗೂ ಗಂಗಾ ಅಮಾತೆಪ್ಪನವರ ನಿರೂಪಿಸಿದರು. ಡಿ.ಎಂ.ಬೆಣ್ಣೂರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net