ಬಾದಾಮಿಯಲ್ಲಿ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಎಸ್.ಬಿ. ಮಮದಾಪೂರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ನಿಮಿತ್ತ ಜಾಗೃತಿ ಜಾಥಾ ನಡೆಸಿತು. ಡಾ. ಎಸ್.ವಿ. ಅಂಗಡಿ, ಎನ್‌ಎಸ್‌ಎಸ್ ಘಟಕ-1ರ ಕಾರ್ಯಕ್ರಮಾಧಿಕಾರಿ ಬಿ.ಕೆ. ಕಟ್ಟಿಮನಿ, ಪ್ರಾಚಾರ್ಯ ಡಾ. ಎ.ಎ. ತೋಪಲಕಟ್ಟಿ ಇತರರಿದ್ದರು.
ಬಾದಾಮಿ : ಯುವ ಜನರು ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ವ್ಯಸನ, ಜೂಜಾಟ ಸೇರಿ ಎಲ್ಲ ರೀತಿಯ ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ರೆಡ್ ರಿಬ್ಬನ್ ಕ್ಲಬ್ ಅಧಿಕಾರಿ ಡಾ. ಎಸ್.ವಿ. ಅಂಗಡಿ ಹೇಳಿದರು.
ನಗರದ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಎಸ್.ಬಿ. ಮಮದಾಪೂರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಎನ್‌ಎಸ್‌ಎಸ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ರೆಡ್ ರಿಬ್ಬನ್ ಕ್ಲಬ್ ಹಾಗೂ ಕ್ರೀಡಾ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಡಾ. ಮಹಾಂತ ಶಿವಯೋಗಿಗಳವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ವ್ಯಸನಗಳು ವ್ಯಕ್ತಿಯ ಆರೋಗ್ಯ, ಕುಟುಂಬದ ನೆಮ್ಮದಿ ಹಾಗೂ ಸಮಾಜದ ಅಭಿವೃದ್ಧಿಗೆ ಗಂಭೀರ ಹಾನಿ ಉಂಟುಮಾಡುತ್ತವೆ. ಆದ್ದರಿಂದ ಯುವಕರಲ್ಲಿ ವ್ಯಸನಮುಕ್ತಿಯ ಅರಿವು ಮೂಡಿಸಿ, ಉತ್ತಮ ಸಂಸ್ಕಾರ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಹಿರಿಯ ಪ್ರಾಧ್ಯಾಪಕ ಎಸ್.ಎಸ್. ಮೂಲಿಮನಿ ಮಾತನಾಡಿ, ಶಿಸ್ತುಬದ್ಧ ಜೀವನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಎನ್‌ಎಸ್‌ಎಸ್ ಘಟಕ-2ರ ಕಾರ್ಯಕ್ರಮಾಧಿಕಾರಿ ಶ್ರೀಪಾದ ಆರ್. ಮಾಳಗಿ ಅವರು ವ್ಯಸನಮುಕ್ತ ಯುವಶಕ್ತಿ ಸುಭದ್ರ ಸಮಾಜದ ಶಕ್ತಿ ಎಂಬ ಸಂದೇಶದೊಂದಿಗೆ ವಿದ್ಯಾರ್ಥಿಗಳಿಗೆ ವ್ಯಸನಮುಕ್ತ ಪ್ರತಿಜ್ಞಾವಿಧಿ ಬೋಧಿಸಿದರು.
ಬಳಿಕ ಎನ್‌ಎಸ್‌ಎಸ್ ಘಟಕ-1ರ ಕಾರ್ಯಕ್ರಮಾಧಿಕಾರಿ ಬಿ.ಕೆ. ಕಟ್ಟಿಮನಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿ, ದುಶ್ಚಟಗಳ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಪ್ರಾಚಾರ್ಯ ಡಾ. ಎ.ಎ. ತೋಪಲಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಎಸ್.ಹೆಚ್. ಸಂಕನಗೌಡರ, ಎನ್.ಬಿ. ಸೋಮನಕಟ್ಟಿ, ಕ್ರೀಡಾ ವಿಭಾಗದ ಮುಖ್ಯಸ್ಥ ಎಫ್.ಎಂ. ಬಾಗವಾನ, ಸ್ಕೌಟ್ಸ್ ಅಂಡ್ ಗೈಡ್ಸ್ ಅಧಿಕಾರಿ ಎಂ.ಬಿ. ದೊಡ್ಡಮನಿ, ಎಸ್.ಎಸ್. ಈರಗೌಡ, ಎಸ್.ಎಸ್. ಆಳಂದ, ಎಸ್.ಎಸ್. ಪಾಟೀಲ್, ಎಸ್.ಎಸ್. ತಿಪ್ಪಶೆಟ್ಟಿ, ಬಿ.ಸಿ. ಪೂಜಾರಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.