ತೇರದಾಳದ ಅಲ್ಲಮಪ್ರಭು ಸಮುದಾಯ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ತಾಲೂಕು ಸಮಿತಿ ಉದ್ಘಾಟನಾ ಸಮಾರಂಭವನ್ನು ಅಧ್ಯಕ್ಷ ಎಸ್.ಜಿ. ಕೋಟಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷೆ ಗೀತಾ ದಾನಶೆಟ್ಟಿ, ಪ್ರವೀಣ ನಾಡಗೌಡ ಎಸ್.ಆರ್. ರಾವಳ, ಮಾರುತಿ ಹೂಗಾರ ಇತರರಿದ್ದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲೂಕು ಸಮಿತಿ ಉದ್ಘಾಟನೆ
ಅಕ್ಷರಗಳೊಂದಿಗೆ ಸಂಬಂಧ ಬೆಳೆಸಲು ಈ ಪರಿಷತ್ ಸಹಾಯಕವಾಗಲಿದೆ
ತೇರದಾಳ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಭಾರತದ ಹಲವು ಭಾಷೆಗಳ ಬೆಳವಣಿಗೆಗೆ ಶ್ರಮಿಸಿ, ಭಾಷಿಕರನ್ನೆಲ್ಲ ಒಂದೂಗೂಡಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಜಿ. ಕೋಟಿ ಹೇಳಿದರು.
ಪಟ್ಟಣದ ಪ್ರಭುಲಿಂಗೇಶ್ವರ ಅನ್ನಪ್ರಸಾದ ಸಮಿತಿ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ತೇರದಾಳ ತಾಲೂಕು ಸಮಿತಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಭಾರತದಲ್ಲಿ ಹಲವು ಭಾಷೆಗಳಿರುವುದರಿಂದ ಅವುಗಳನ್ನು ಒಂದುಗೂಡಿಸಿ ರಾಷ್ಟ್ರಕಟ್ಟಲು ಅನುಕೂಲವಾಗಲು ಈ ಪರಿಷತ್ತನ್ನು ರಾಷ್ಟ್ರಮಟ್ಟದಲ್ಲಿ 1962ರಲ್ಲಿ, ರಾಜ್ಯದಲ್ಲಿ 2014ರಲ್ಲಿ, ಬಾಗಲಕೋಟೆ ಜಿಲ್ಲೆಯಲ್ಲಿ 2017ರಲ್ಲಿ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲಾಧ್ಯಕ್ಷೆ ಗೀತಾ ದಾನಶೆಟ್ಟಿ ಮಾತನಾಡಿ, ಅಕ್ಷರಗಳೊಂದಿಗೆ ಸಂಬಂಧ ಬೆಳೆಸಲು ಈ ಪರಿಷತ್ ಸಹಾಯಕವಾಗಲಿದೆ. ಭಾರತೀಯ ಸಾಹಿತ್ಯವೆಂದರೆ ಇಂಗ್ಲಿಷ್ ಹೊರತುಪಡಿಸಿ ದೇಶದ ಮುಖ್ಯ ಹಾಗೂ ಉಪಭಾಷೆಗಳನ್ನು ಅಲ್ಲಿನ ಸಾಹಿತ್ಯ ಅರಿಯುವ ಮೂಲಕ ವೈವಿಧ್ಯತೆಯಲ್ಲಿ ಏಕತೆ ಸೃಷ್ಟಿಸುವ ಕಾರ್ಯಕ್ಕೆ ಸನ್ನದ್ಧರಾಗಬೇಕಿದೆ ಎಂದರು.
ಪ್ರವೀಣ ನಾಡಗೌಡ ಮಾತನಾಡಿ, ನಮ್ಮಲ್ಲಿರುವ ಹಲವು ವಿಚಾರಗಳನ್ನು ಒಟ್ಟುಗೂಡಿಸಲು ಬೇರೆ ಬೇರೆ ಸಾಹಿತ್ಯ ಪರಿಷತ್ತುಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳ ಪದಾಧಿಕಾರಿಗಳ ಜೊತೆ ಸೇರಿ ಸಾಮಾನ್ಯರು ಕೆಲಸ ಮಾಡಬೇಕಿದೆ. ಸಾಹಿತ್ಯಿಕವಾಗಿ ಸಮಾಜ ಕಟ್ಟಬೇಕೆನ್ನುವ ಕನಸು ನನಸಾಗುವ ಕಾಲ ದೂರವಿಲ್ಲ ಎಂದರು.
ಶಿವಾನಂದ ನೇಗಿನಾಳ, ವಿಕ್ರಮ ಬಸನಗೌಡರ, ಅಶೋಕ ಮಹಾಲಿಂಗಪುರ ಮಾತನಾಡಿದರು. ತಾಲೂಕು ಘಟಕದ ಅಧ್ಯಕ್ಷ ಎಂ.ಸಿ. ಕುಂಚಗನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ಸಾಹಿತಿ ಎಸ್.ಆರ್. ರಾವಳ, ಮಾರುತಿ ಹೂಗಾರ, ಈಶ್ವರ ಯಲ್ಲಟ್ಟಿ, ಬಸಪರಯ್ಯ ಭಾಂವಿ, ಮಲ್ಲಪ್ಪ ಜಮಖಂಡಿ, ಭೀಮಗೊಂಡ ಸದಲಗಿ ಸೇರಿ ಪರಿಷತ್ತಿನ ನೂತನ ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.