

ರಬಕವಿ/ಬನಹಟ್ಟಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ಕಂಡ ಶ್ರೇಷ್ಠ ಪ್ರಧಾನಿಯಾಗಿದ್ದು, ಅವರ ಸ್ವಚ್ಛ ಭಾರತ ಅಭಿಯಾನದಿಂದ ಅನೇಕರಲ್ಲಿ ಸೇವಾ ಮನೋಭಾವ ಬೆಳೆದಿದೆ ಎಂದು ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ನಗರದ ಕೃಷ್ಣಾ ನದಿ ತೀರದಲ್ಲಿ ತೇರದಾಳ ಮತ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿರುವ ವಾರಪೂರ್ತಿ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಭಾನುವಾರ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನದಿ, ಜಲಮೂಲಗಳು ಹಾಗೂ ಅವುಗಳ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿ. ಸಾರ್ವಜನಿಕರು ಸ್ವಚ್ಛತಾ ಕಾರ್ಯಗಳಲ್ಲಿ ಕೈಜೋಡಿಸುವ ಮೂಲಕ ಪರಿಸರ ಸಂರಕ್ಷಣೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕರ್ತರು ನದಿ ತೀರದಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಕಸ ಹಾಗೂ ಇತರ ಅಶುಚಿತ್ವವನ್ನು ತೆರವುಗೊಳಿಸಿದರು. ಕ್ಷೇತ್ರದಾದ್ಯಂತ ವಾರಪೂರ್ತಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಸಂಘಟಕರು ತಿಳಿಸಿದರು.
ಶ್ರೀಶೈಲ ಬೀಳಗಿ, ಸುರೇಶ ಅಕ್ಕಿವಾಟ, ಧರೆಪ್ಪ ಉಳ್ಳಾಗಡ್ಡಿ, ಮಹಾದೇವ ಕೋಟ್ಯಾಳ, ಆನಂದ ಕಂಪು, ರವಿ ಕೊತೀನ, ಅರುಣ ಬುದ್ನಿ, ರಾಜು ಕಡಮ, ಪರಶುರಾಮ ಕಾಖಂಡಕಿ, ವಿಠ್ಠಲ ತಟ್ಟಿ, ಶಂಕರ ಹುನ್ನೂರ, ಬಾಬಾಗೌಡ ಪಾಟೀಲ, ಪ್ರವೀಣ ದಬಾಡಿ ಸೇರಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.