ಪ್ರಶ್ನೆ ಪತ್ರಿಕೆಗಳ ಲೀಕ್ ಬಗ್ಗೆ ಪಿಎಂ ಬಾಯಿ ಬಿಡಲಿ

ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಎನ್.ಬಿ.ಗಸ್ತಿ ಮಾತನಾಡಿದರು. ವಕೀಲ ಸಂತೋಷ ಬಗಲಿದೇಸಾಯಿ, ಎನ್‌ಎಸ್‌ಯುಐ ಮುಖಂಡ ವಿಜಯಕುಮಾರ ತಿಪ್ಪರಡ್ಡಿ, ಪ್ರಭುಗೌಡ ಹಳ್ಳೂರ ಮತ್ತಿತರರಿದ್ದರು.
ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಎನ್.ಬಿ.ಗಸ್ತಿ ಮಾತನಾಡಿದರು. ವಕೀಲ ಸಂತೋಷ ಬಗಲಿದೇಸಾಯಿ, ಎನ್‌ಎಸ್‌ಯುಐ ಮುಖಂಡ ವಿಜಯಕುಮಾರ ತಿಪ್ಪರಡ್ಡಿ, ಪ್ರಭುಗೌಡ ಹಳ್ಳೂರ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಹುಲ್ ಗಾಂಧಿ ನೇತೃತ್ವದಲ್ಲಿ ವಿದ್ಯಾರ್ಥಿ ಗರ್ಜನೆ ಅಭಿಯಾನ
  • ಆಗಸ್ಟ್ 9ಕ್ಕೆ ಸಂಸತ್ತಿಗೆ ಮುತ್ತಿಗೆ
  • ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಬಾಗಲಕೋಟೆ: ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್, ರಾಮನ ಹುಂಡಿ ಹಣಕ್ಕೆ ಕನ್ನ, ಉದ್ಯೋಗಕ್ಕಾಗಿ ನಡೆಯುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆ ಇಷ್ಟೆಲ್ಲ ಅದ್ವಾನಗಳು ನಡೆದರೂ ಸಹ ಈ ಬಗ್ಗೆ ಪ್ರಧಾನಮಂತ್ರಿ, ಗೃಹಮಂತ್ರಿಗಳು ಸೇರಿ ಬಿಜೆಪಿ ನಾಯಕರು ಬಾಯಿ ಬಿಡದೇ ಮೌನ ವಹಿಸುತ್ತಾರೆ. ಈ ಬಗ್ಗೆ ಪಿಎಂ ಮಾತನಾಡಬೇಕು. ಜನರು ಅವರನ್ನು ಪ್ರಶ್ನಿಸಬೇಕು ಎಂದು ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಜಿಲ್ಲಾ ಅಧ್ಯಕ್ಷ ಎನ್.ಬಿ.ಗಸ್ತಿ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸಲಾಗದೇ ವಿದ್ಯಾರ್ಥಿಗಳು ಮತ್ತು ಉದ್ಯೋಗ ಆಕಾಂಕ್ಷಿಗಳ ಬದುಕಿನ ಜೊತೆಗೆ ಚಲ್ಲಾಟವಾಡುತ್ತಿದೆ. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿ ಮರು ಪರೀಕ್ಷೆ ನಡೆಯಿತು. ಈ ನಡುವೆ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಗಳು ಬೀದಿಪಾಲಾಗಿವೆ. ಆ ಕುಟುಂಬಗಳಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವಿಚಾರವಾಗಿ ರಾಹುಲ್ ಗಾಂಧಿ ಅವರು ಈಗಾಗಲೇ ವಿದ್ಯಾರ್ಥಿಗಳ ಗರ್ಜನೆ ಅಭಿಯಾನ ಆರಂಭಿಸಿದ್ದು, ದೇಶದ 28 ನಗರಗಳಲ್ಲಿ ಅಭಿಯಾನ ನಡೆಯಲಿದ್ದು, ಆಗಸ್ಟ್ 9ರಂದು ಸಂಸತ್ತು ಮುತ್ತಿಗೆ ಹಾಕಲಿದ್ದಾರೆ. ಇದಕ್ಕೆ ಇಡೀ ದೇಶಾದ್ಯಂತ ಜನಜಾಗೃತಿ ಮೂಡಿಸುವುದು ಹಾಗೂ ವಿದ್ಯಾರ್ಥಿಗಳ ಬದುಕಿನ ಜೊತೆ ಚಲ್ಲಾಟ ಆಡುತ್ತಿರುವ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಲಿದ್ದೇವೆ ಎಂದರು.
ಇನ್ನು ಎಸ್‌ಐಆರ್ ಬಗ್ಗೆ ಕಾಂಗ್ರೆಸ್ ವಿರೋಧ ಮಾಡಿಲ್ಲ. ಆದರೆ, ಸದ್ಯ ಚುನಾವಣೆ ಆಯೋಗ ಮಾಡುತ್ತಿರುವ ರೀತಿಯ ಬಗ್ಗೆ ನಮಗೆ ಆತಂಕ ಇದೆ. 13 ರಾಜ್ಯಗಳಲ್ಲಿ 6.5 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಇದು ಯಾವ ನ್ಯಾಯ? ಮುಖ್ಯವಾಗಿ ಬಿಜೆಪಿ ಅಧಿಕಾರದಾಹಕ್ಕಾಗಿ ತಮ್ಮನ್ನು ವಿರೋಧಿಸುವ ಮತದಾರರನ್ನು ಕೈಬಿಡುವ ಹುನ್ನಾರ ನಡೆಸಿದೆ. ಮುಖ್ಯವಾಗಿ ಅಲ್ಪಸಂಖ್ಯಾತರು, ದಲಿತರು, ದೀನರು, ಅನಕ್ಷರಸ್ಥರನ್ನು ಹೊರಗಿಡುವ ಕೆಲಸ ಮಾಡುತ್ತಿದೆ. ಆಧಾರ, ಪಡಿತರ, ಮತದಾರರ ಚೀಟಿಗಳನ್ನು ಪರಿಗಣಿಸದೇ ಬಹುತೇಕ ಜನರ ಬಳಿ ಇರಲಾರದ 11 ದಾಖಲೆಗಳನ್ನು ಕೇಳುತ್ತಿರುವುದು ಸಾಕಷ್ಟು ಅನುಮಾನ ಮೂಡಿಸುತ್ತಿದೆ ಎಂದರು.
ವಕೀಲ ಸಂತೋಷ ಬಗಲಿದೇಸಾಯಿ ಮಾತನಾಡಿ, ಸಿಕಂದರ ಅಥಣಿ, ರಾಜು ಮನ್ನಿಕೇರಿ ಮಾತನಾಡಿ, ಬಿಜೆಪಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆದಿರುವ 64 ಪರೀಕ್ಷೆಗಳ ಪೈಕಿ 45 ಸಲ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿವೆ ಎಂದು ಹೇಳಲಾಗುತ್ತಿದೆ. ಇದೇ ವರ್ಷ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಯಿತು. ಆಡಳಿತ ಈ ವೈಪಲ್ಯಗಳ ಬಗ್ಗೆ ಪ್ರಶ್ನೆ ಮಾಡಬಾರದೇ ಎಂದು ಪ್ರಶ್ನಿಸಿದರು. ಆಗಸ್ಟ್ 9ರಂದು ನಡೆಯುವ ಸಂಸತ್ ಮುತ್ತಿಗೆಗೆ ಬಾಗಲಕೋಟೆ ಜಿಲ್ಲೆಯಿಂದಲೂ ತೆರಳಲಿದ್ದೇವೆ ಎಂದು ಹೇಳಿದರು.
ಇನ್ನು ಎಸ್‌ಐಆರ್ ಬಗ್ಗೆ ನುಸುಳುಕೋರರನ್ನು ಹೊರಹಾಕುತ್ತೇವೆ ಎನ್ನುತ್ತಾರೆ. ಈಗ 13 ರಾಜ್ಯಗಳಲ್ಲಿ 6.5 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರಲ್ಲ ಅವರೆಲ್ಲ ನುಸುಳುಕೋರರೆ? ಅದನ್ನು ಬಹಿರಂಗ ಪಡಿಸಬೇಕು. ಹತ್ತು ವರ್ಷಗಳಿಗೊಮ್ಮೆ ಎಸ್‌ಐಆರ್ ಆಗುತ್ತದೆ. ಆದರೆ, ಈಗ ಮಾಡುತ್ತಿರುವ ಬಗ್ಗೆ ಎಲ್ಲರಿಗೂ ಅನುಮಾನಗಳು ಇವೆ ಎಂದು ತಿಳಿಸಿದರು.
ಎನ್‌ಎಸ್‌ಯುಐ ಮುಖಂಡ ವಿಜಯಕುಮಾರ ತಿಪ್ಪರಡ್ಡಿ, ಪದವಿಧರ ವಿಭಾಗದ ಜಿಲ್ಲಾ ಅಧ್ಯಕ್ಷ ಪ್ರಭುಗೌಡ ಹಳ್ಳೂರ, ನಗರ ಬ್ಲಾಕ್ ಕಾಂಗ್ರೆಸ್ ಅಕ್ಬರ್ ಮುಲ್ಲಾ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net