ಬನಹಟ್ಟಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಆಗ್ರಹಿಸಿ ಕುಡಚಿ-ಜಮಖಂಡಿ ರಾಜ್ಯ ಹೆದ್ದಾರಿಯಲ್ಲಿ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದರು. ನಾಯಕಿ ಶಾಂತಾ ಸೊರಗಾಂವಿ, ಸಮಿತಿ ಅಧ್ಯಕ್ಷ ಶಂಕರ ಸೊರಗಾಂವಿ ಇತರರಿದ್ದರು.
ರಬಕವಿ/ಬನಹಟ್ಟಿ: ಬನಹಟ್ಟಿಯಲ್ಲಿಯೇ ಪ್ರಜಾಸೌಧ ನಿರ್ಮಿಸಬೇಕೆಂಬ ಆಗ್ರಹದೊಂದಿಗೆ ನಡೆಯುತ್ತಿರುವ ಸರದಿ ಸತ್ಯಾಗ್ರಹದಲ್ಲಿ ಬುಧವಾರ ಆರು ನೂರಕ್ಕೂ ಅಧಿಕ ಮಹಿಳೆಯರು ಬೃಹತ್ ಮೆರವಣಿಗೆ ನಡೆಸುವ ಮೂಲಕ ಹೋರಾಟಕ್ಕೆ ಬಲ ತುಂಬಿದರು.
ನಗರದ ಈಶ್ವರಲಿಂಗ ಮೈದಾನದಿಂದ ಬುಧವಾರ ಬೆಳಗ್ಗೆ 9 ಗಂಟೆಗೆ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿತು. ಘೋಷಣೆಗಳನ್ನು ಕೂಗುತ್ತಾ ಚನ್ನಮ್ಮ ವೃತ್ತದಲ್ಲಿರುವ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ, ಪ್ರಜಾಸೌಧ ಬನಹಟ್ಟಿಯಲ್ಲೇ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದರು.
ಮಹಿಳಾ ಸಂಘಟನೆಗಳ ನಾಯಕಿ ಶಾಂತಾ ಸೊರಗಾಂವಿ ಮಾತನಾಡಿ, ಪ್ರಜಾಸೌಧಕ್ಕಾಗಿ ನಡೆಯುತ್ತಿರುವ ಹೋರಾಟ ಇದೀಗ ಜನಾಂದೋಲನವಾಗಿ ರೂಪುಗೊಂಡಿದೆ. ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ರಸ್ತೆಯಲ್ಲೇ ಸಹ ಭೋಜನ
ಹೋರಾಟದ ನಡುವೆ ನೂರಾರು ಮಹಿಳೆಯರು ಕುಡಚಿ-ಜಮಖಂಡಿ ರಸ್ತೆಯಲ್ಲೇ ಕುಳಿತು ಅನ್ನ-ಸಾರು ಸೇವಿಸಿ ಸಹ ಭೋಜನ ನಡೆಸಿದರು. ಪ್ರತಿಭಟನೆಯ ಸಂಕಲ್ಪ ಹಾಗೂ ಒಗ್ಗಟ್ಟನ್ನು ಪ್ರದರ್ಶಿಸಿದ ಈ ದೃಶ್ಯ ಗಮನ ಸೆಳೆಯಿತು.
ಕಾಮಗಾರಿ ಚಟುವಟಿಕೆ ತಾತ್ಕಾಲಿಕ ಸ್ಥಗಿತ
ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ರಬಕವಿಯ ಸರ್ವೆ ನಂ. 80ರಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಸಂಬಂಧಿಸಿದ ಘಟನೋತ್ತರ ಅನುಮೋದನೆ ಆದೇಶದ ಹಿನ್ನೆಲೆಯಲ್ಲಿ ಸದ್ಯ ಯಾವುದೇ ಕಾಮಗಾರಿ ಚಟುವಟಿಕೆ ನಡೆಸುವುದಿಲ್ಲ ಎಂದು ತಿಳಿಸಿದರು. ಹೀಗಾಗಿ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು.
ಆದರೆ ಮನವಿಯನ್ನು ತಿರಸ್ಕರಿಸಿದ ಸತ್ಯಾಗ್ರಹ ವೇದಿಕೆ ಹಾಗೂ ಬನಹಟ್ಟಿ ನಗರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಂಕರ ಸೊರಗಾಂವಿ, ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು ತಮ್ಮ ಬೇಡಿಕೆಯಲ್ಲ. ಪ್ರಜಾಸೌಧವನ್ನು ಬನಹಟ್ಟಿಯಲ್ಲಿಯೇ ನಿರ್ಮಿಸುವ ಕುರಿತು ಅಂತಿಮ ಆದೇಶ ಹೊರಬರಬೇಕು ಎಂಬುದು ಹೋರಾಟಗಾರರ ಏಕೈಕ ಬೇಡಿಕೆ ಎಂದು ಸ್ಪಷ್ಟಪಡಿಸಿದರು.