ಮುಧೋಳ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಚಿಂತನ ಸಿರಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕಳೆದ ಎರಡು ದಶಕಗಳ ವೈಚಾರಿಕ ಓಕುಳಿ ಕಾರ್ಯಕ್ರಮವನ್ನು ವಿ.ಡಿ.ಹಿರೇಮಠ ಉದ್ಘಾಟಿಸಿದರು. ಚಿಂತನಸಿರಿ ಗೌರವಾಧ್ಯಕ್ಷ ಡಾ. ಎಂ.ಆರ್.ದೇಸಾಯಿ, ತುಮಕೂರು ವಿವೇಕಸಿದ್ಧಿ ಆಶ್ರಮದ ದಯಾಶಂಕರ ಮಹಾಸ್ವಾಮಿಗಳು, ಚಿಂತನಸಿರಿ ಅಧ್ಯಕ್ಷ ಡಾ. ಶಿವಾನಂದ ಕುಬಸದ, ರನ್ನ ಪ್ರತಿಷ್ಠಾನದ ಸದಸ್ಯ ಎಸ್.ಎಸ್. ಸರಗಣಾಚಾರಿಮಠ ಇತರರಿದ್ದರು.
ಮುಧೋಳ: ಮನುಷ್ಯನನ್ನು ಆತ ಹುಟ್ಟಿದ ಜಾತಿಯಿಂದ ಅಳೆಯುವ ಬದಲಾಗಿ, ಆತನಲ್ಲಿರುವ ಜ್ಞಾನ ಮತ್ತು ವೈಚಾರಿಕತೆಯಿಂದ ಅಳೆಯುವ ಕಾರ್ಯವಾಗಬೇಕಿದೆ ಎಂದು ಧಾರವಾಡದ ಉಚ್ಚ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಹೇಳಿದರು.
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ 'ಚಿಂತನಸಿರಿ' ಮುಧೋಳ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕಳೆದ ಎರಡು ದಶಕಗಳ ವೈಚಾರಿಕ ಓಕುಳಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ತಾಂತ್ರಿಕ ಯುಗದಲ್ಲಿ ಮನುಷ್ಯ ಅತಿಯಾಗಿ ಮೊಬೈಲ್ ಮೇಲೆ ಅವಲಂಬಿತನಾಗುತ್ತಿರುವುದರಿಂದ ನಮ್ಮ ಜ್ಞಾಪಕ ಶಕ್ತಿ ಕುಂದುತ್ತಿದೆ. ಎಲ್ಲದಕ್ಕೂ ತಂತ್ರಜ್ಞಾನವನ್ನೇ ಆಶ್ರಯಿಸುತ್ತಿರುವುದರಿಂದ ನಮ್ಮಲ್ಲಿರಬೇಕಾದ ಸಹಜ ವೈಚಾರಿಕತೆ ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಚಿಂತನಸಿರಿಯು ನಿರಂತರವಾಗಿ ಚಿಂತನಶೀಲತೆಯೊಂದಿಗೆ ಪರಿವರ್ತನೆಯ ಹೊಸ ಗಾಳಿ ಬೀಸುತ್ತಿರುವುದು ಶ್ಲಾಘನೀಯ ಎಂದರು.
ಚಿಂತನಸಿರಿ ಗೌರವಾಧ್ಯಕ್ಷ ಡಾ. ಎಂ.ಆರ್.ದೇಸಾಯಿ, ತುಮಕೂರು ವಿವೇಕಸಿದ್ಧಿ ಆಶ್ರಮದ ದಯಾಶಂಕರ ಮಹಾಸ್ವಾಮಿಗಳು, ಚಿಂತನಸಿರಿ ಅಧ್ಯಕ್ಷ ಡಾ. ಶಿವಾನಂದ ಕುಬಸದ, ರನ್ನ ಪ್ರತಿಷ್ಠಾನದ ಸದಸ್ಯ ಎಸ್.ಎಸ್. ಸರಗಣಾಚಾರಿಮಠ ಇದ್ದರು.
ಗೋಷ್ಠಿಗಳಲ್ಲಿ ಅರಳಿದ ವೈಚಾರಿಕತೆ
ನಂತರ ನಡೆದ ವಿಚಾರದೋಕುಳಿಯ ವಿವಿಧ ಗೋಷ್ಠಿಗಳು ಸಾರ್ವಜನಿಕರ ಗಮನ ಸೆಳೆದವು. ಪ್ರಥಮ ಗೋಷ್ಠಿಯಲ್ಲಿ ಜಮಖಂಡಿಯ ಉಪವಿಭಾಗಾಧಿಕಾರಿ ಶ್ವೇತಾ ಮೋ. ಬೀಡಕರ ಅಧ್ಯಕ್ಷತೆಯಲ್ಲಿ ಸಾಹಿತಿ ಡಾ. ಅರ್ಚನಾ ಅಥಣಿ ಅವರು ಪ್ರಚಲಿತ ಸಮಾಜದಲ್ಲಿ ಸಂಬಂಧಗಳ ಮಹತ್ವ' ಕುರಿತು ಮಾತನಾಡಿ, ಇಂದಿನ ಯಾಂತ್ರಿಕ ಬದುಕಿನಲ್ಲಿ ಮಾನವೀಯ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿವೆ. ಕೌಟುಂಬಿಕ ಬಾಂಧವ್ಯ ಉಳಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಎರಡನೇ ಗೋಷ್ಠಿಯಲ್ಲಿ ಹುಬ್ಬಳ್ಳಿಯ ಉದ್ಯಮಿ ಶಶಿಕುಮಾರ ದೇಸಾಯಿ ಅಧ್ಯಕ್ಷತೆಯಲ್ಲಿ ಡಾ. ಸೈಯದ ಎಫ್.ಎಚ್. ಇನಾಮದಾರ ಅವರು 'ನೆಲದ ಋಣ ಮತ್ತು ಮಾನವ ಜನ್ಮ' ಕುರಿತು ಮಾರ್ಮಿಕವಾಗಿ ಉಪನ್ಯಾಸ ನೀಡಿದರು. ಹುಟ್ಟಿದ ನೆಲ ಮತ್ತು ಸಂಸ್ಕೃತಿಯನ್ನು ಮರೆಯಬಾರದು. ನಾವು ಪಡೆದ ಜನ್ಮ ಸಾರ್ಥಕವಾಗಬೇಕಾದರೆ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎಂದು ಪ್ರತಿಪಾದಿಸಿದರು.
ಮೂರನೇ ಗೋಷ್ಠಿಯಲ್ಲಿ ಬನಹಟ್ಟಿಯ ಜಾನಪದ ವಿದ್ವಾಂಸ ಪ್ರೊ. ಬಿ.ಆರ್.ಪೊಲೀಸ್ ಪಾಟೀಲ ಅಧ್ಯಕ್ಷತೆಯಲ್ಲಿ 'ಜಾನಪದ ಉತ್ಸವ' ಕುರಿತು ಚರ್ಚೆ ನಡೆಯಿತು. ಗ್ರಾಮೀಣ ಕಲೆ ಮತ್ತು ಜಾನಪದ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ವಿವರಿಸಿದರು.
ಚಿಂತನೆಗಳಿಂದ ವ್ಯಕ್ತಿತ್ವ ವಿಕಸನ
ಚಿಂತನಸಿರಿಯ ಗೌರವಾಧ್ಯಕ್ಷ ಎಂ.ಆರ್. ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿ ಕೇವಲ ಹಣ ಮತ್ತು ಅಧಿಕಾರದ ಹಿಂದೆ ಹೋದವರು ಎಂದಿಗೂ ದೊಡ್ಡವರಾಗಲು ಸಾಧ್ಯವಿಲ್ಲ. ಬದಲಾಗಿ ವೈಚಾರಿಕತೆಯಿಂದ ಉದಾತ್ತ ಭಾವನೆಗಳನ್ನು ಬೆಳೆಸಿಕೊಳ್ಳುವ ವ್ಯಕ್ತಿಯೇ ನಿಜವಾದ ದೊಡ್ಡ ಮನುಷ್ಯನಾಗಲು ಸಾಧ್ಯ. ವ್ಯಕ್ತಿಯಲ್ಲಿನ ವ್ಯಕ್ತಿತ್ವ ವೃದ್ಧಿಸುವುದೇ ಈ ಓಕುಳಿಯ ಮುಖ್ಯ ಉದ್ದೇಶ ಎಂದರು.
ತುಮಕೂರಿನ ವಿವೇಕಸಿದ್ಧಿ ಆಶ್ರಮದ ದಯಾಶಂಕರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಖ್ಯಾತ ಜಾನಪದ ತಜ್ಞ ಶ್ರೀಕಾಂತ ಕೆಂದೋಳಿ ಅವರಿಗೆ 'ಕಲಾಶ್ರೀ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿಂತನಸಿರಿ ಅಧ್ಯಕ್ಷ ಡಾ. ಶಿವಾನಂದ ಕುಬಸದ ಪ್ರಾಸ್ತಾವಿಕವಾಗಿ ಮಾತನಾಡಿದರು.
ರನ್ನ ಪ್ರತಿಷ್ಠಾನದ ಸದಸ್ಯ ಎಸ್.ಎಸ್. ಸರಗಣಾಚಾರಿಮಠ, ಸುಲೋಚನಾ ಜವಳಗಿ ಎಲ್.ಕೆ. ಕಾಮಾ, ಪತ್ರಕರ್ತ ಬಿ.ಎಚ್.ಬೀಳಗಿ, ಸವಿತಾ ಅಂಗಡಿ, ಸುನೀಲ ಬಿರಾದಾರ ಹಾಗೂ ಆರ್.ಎಸ್.ಪಾಟೀಲ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು