ಕನ್ನಡ ನಮ್ಮ ಜಾತಿ, ಧರ್ಮವಾಗಲಿ

ಬಾಗಲಕೋಟೆ ಸರ್ಕಾರಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ಬಯಲಾಟ ಅಕಾಡೆಮಿ ಹಮ್ಮಿಕೊಂಡಿದ್ದ ದೊಡ್ಡಾಟ, ತೊಗಲು ಗೊಂಬೆಯಾಟಕ್ಕೆ ಜಾಜಿ ಮಲ್ಲಿಗೆ ಕವಿ ಖ್ಯಾತಿಯ ಡಾ. ಸತ್ಯಾನಂದ ಪಾತ್ರೋಟ ಚಾಲನೆ ನೀಡಿದರು. ಅಕಾಡೆಮಿ ಅಧ್ಯಕ್ಷ ಪ್ರೊ. ಕೆ.ಆರ್. ದುರ್ಗಾದಾಸ, ಡಾ. ಸರ್ಜಾಶಂಕರ ಹರಳಿಮಠ, ಶಿವಾನಂದ ಪಟ್ಟಣಶೆಟ್ಟಿ ಮತ್ತಿತರರು ಇದ್ದರು.
ಬಾಗಲಕೋಟೆ ಸರ್ಕಾರಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ಬಯಲಾಟ ಅಕಾಡೆಮಿ ಹಮ್ಮಿಕೊಂಡಿದ್ದ ದೊಡ್ಡಾಟ, ತೊಗಲು ಗೊಂಬೆಯಾಟಕ್ಕೆ ಜಾಜಿ ಮಲ್ಲಿಗೆ ಕವಿ ಖ್ಯಾತಿಯ ಡಾ. ಸತ್ಯಾನಂದ ಪಾತ್ರೋಟ ಚಾಲನೆ ನೀಡಿದರು. ಅಕಾಡೆಮಿ ಅಧ್ಯಕ್ಷ ಪ್ರೊ. ಕೆ.ಆರ್. ದುರ್ಗಾದಾಸ, ಡಾ. ಸರ್ಜಾಶಂಕರ ಹರಳಿಮಠ, ಶಿವಾನಂದ ಪಟ್ಟಣಶೆಟ್ಟಿ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ನಮ್ಮ ಬದುಕಿನ ಭಾಗವಾಗಬೇಕು
  • ಮಾತೃ ಭಾಷೆ ನೀಡಿದಷ್ಟು ಆತ್ಮ ವಿಶ್ವಾಸ ಅನ್ಯ ಭಾಷೆ ನೀಡಲಾರವು.
  • ದೊಡ್ಡಾಟ, ತೊಗಲು ಗೊಂಬೆಯಾಟ ಪ್ರದರ್ಶನ
ಬಾಗಲಕೋಟೆ: ಕನ್ನಡ ನಮ್ಮ ಬದುಕಿನ ಭಾಗವಾಗಬೇಕು. ಪ್ರಸ್ತುತ ದಿನಮಾನಗಳಲ್ಲಿ ಆಂಗ್ಲ ಭಾಷೆ ವ್ಯಾಮೋಹ ಎಲ್ಲ ಭಾಗದಲ್ಲೂ ಪಸರಿಸುತ್ತಿದೆ. ಆದರೆ ಮಾತೃ ಭಾಷೆ ನೀಡಿದಷ್ಟು ಆತ್ಮ ವಿಶ್ವಾಸ ಅನ್ಯ ಭಾಷೆ ನೀಡಲಾರವು. ಕನ್ನಡವಿದ್ದಾಗ ಮಾತ್ರ ನಾವು ಉಳಿಯಲು, ಬೆಳೆಯಲು ಸಾಧ್ಯವಾಗುತ್ತದೆ ಎಂದು ಜಾಜಿ ಮಲ್ಲಿಗೆ ಕವಿ ಡಾ. ಸತ್ಯಾನಂದ ಪಾತ್ರೋಟ ಹೇಳಿದರು.
ಕನ್ನಡ ರಾಜ್ಯೋತ್ಸವ 2025 ಅಂಗವಾಗಿ ಕರ್ನಾಟಕ ಬಯಲಾಟ ಅಕಾಡೆಮಿ ಹಾಗೂ ಸರ್ಕಾರಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜು ಸಹಯೋಗದಲ್ಲಿ ಶನಿವಾರ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ದೊಡ್ಡಾಟ, ತೊಗಲು ಗೊಂಬೆಯಾಟ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ದೊಡ್ಡಾಟದ ದೃಶ್ಯ.
ಉಪನ್ಯಾಸ ನೀಡಿದ ಸಂಸ್ಕೃತಿ ಚಿಂತಕ ಡಾ. ಸರ್ಜಾಶಂಕರ ಹರಳಿಮಠ, ಕನ್ನಡ ಸಾಹಿತ್ಯ ಎಂದರೆ ಅದು ಬದುಕಿನ ಭಾವನೆ. ಕನ್ನಡ ಸಾಹಿತ್ಯ ಕೇವಲ ಬರಹ ರೂಪಕ್ಕೆ ಸೀಮಿತವಾಗದೆ ಹೃದಯದ ಧ್ವನಿಯಾಗಿದೆ. ಶಿವರಾಂ ಕಾರಂತರ ಚೋಮನ ದುಡಿ ಕಾದಂಬರಿ ಮುಂದೆ ಉಳುವವನೇ ಭೂಮಿಯ ಒಡೆಯ ಕಾಯಿದೆ ಜಾರಿಗೆ ಪ್ರೇರಣೆಯಾಗಿದ್ದಿದೆ ಎಂದರು.
ಮಾತೃ ಭಾಷೆ ವ್ಯಕ್ತಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಜಾತಿ ವಲಯಗಳನ್ನು ಮೀರಿ ಮಾತೃಭಾಷೆಯನ್ನು ಪ್ರೀತಿಸಿ, ಕನ್ನಡವೇ ನಮ್ಮ ಜಾತಿ ಕನ್ನಡವೇ ನಮ್ಮ ಧರ್ಮ ಎನ್ನುವಂತಾಗಬೇಕಿದೆ. ಈ ನಾಡು ಸರ್ವ ಜನಾಂಗದ ಶಾಂತಿಯ ತೋಟ. ಸರ್ವ ಜನಾಂಗದವರ ಅಭಿವೃದ್ಧಿಯಾಗಬೇಕು. ಎಲ್ಲ ಸಮುದಾಯದವರು ಪರಸ್ಪರ ಪ್ರೀತಿಸುವಂತಿರಬೇಕು. ಅಲ್ಪಸಂಖ್ಯಾತರೊಂದಿಗೆ ಬಹುಸಂಖ್ಯಾತರು ಬೆರೆಯುವಂತಾಗಬೇಕು. ಕನ್ನಡ ಸಾಹಿತ್ಯಕ್ಕೆ ಅನ್ಯ ಧರ್ಮೀಯರು ಕೂಡ ಕೊಡುಗೆ ನೀಡಿದ್ದಾರೆ. ಇದಕ್ಕೆ ಸಂತ ಶಿಶುನಾಳ ಶರೀರು ಉತ್ತಮ ಉದಾಹರಣೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಕೆ.ಆರ್. ದುರ್ಗಾದಾಸ ಮಾತನಾಡಿ, ಕಲೆ ಸಾಹಿತ್ಯ ಕೇವಲ ಒಂದು ಜಾತಿಗೆ ಅಥವಾ ವರ್ಣಕ್ಕೆ ಸೀಮಿತವಾಗಿಲ್ಲ. ದೊಡ್ಡಾಟ, ಬಯಲಾಟಗಳೆಲ್ಲ ಸಂತ್ರಸ್ತರ ಧ್ವನಿಯಾಗಿದ್ದವು. ಆದರೆ, ಆಧುನಿಕತೆಯ ಭರಾಟೆಯಲ್ಲಿ ಕಲೆಗಳು ಮುಳುಗುತ್ತಿವೆ. ಇಂದು ಕನ್ನಡ ನಾಡಿನ ಕಲೆಗಳನ್ನು ಸಂರಕ್ಷಣೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ದೊಡ್ಡಾಟ, ಬಯಲಾಟ, ಪಾರಿಜಾತದಂತಹ ಕಲೆಗಳ ಪರಂಪರೆಯನ್ನು ಮುಂದಿನ ಪೀಳಿಗೆಯತ್ತ ಕೊಂಡೊಯ್ಯುತ್ತಿದೆ ಎಂದು ತಿಳಿಸಿದರು.
ಬಾದಾಮಿ ತಾಲೂಕಿನ ಕಾಕನೂರ ದುರ್ಗಾ ಶಕ್ತಿ ಕಲಾ ಸಂಘದ ಕಲಾವಿದರು ಪ್ರದರ್ಶಿಸಿದ ತೊಗಲು ಗೊಂಬೆಯಾಟ ಜನಮನ ಸೂರೆಗೊಂಡರೆ, ಹುಬ್ಬಳ್ಳಿ ಸಂಕಲ್ಪ ಪ್ರದರ್ಶಕ ಕಲೆಗಳ ಹಾಗೂ ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳಾದ ವರ್ಷಾ ಬೀಳಗಿ, ಸೌಮ್ಯಾ ಹರಿಶೆಟ್ಟರ, ವಿನುತ ಹಿರೇಮಠ, ಜಾನ್ವಿ ಅಚ್ನುರಮಠ, ಸುಷ್ಮಿತಾ ಸುರಪುರ, ಸ್ವಾತಿ ಬಡಿಗೇರ, ಸೌಜನ್ಯಾ ಅತಡ್ಕರ, ಪಾವನಿ ಪಾಟೀಲ, ದೃತಿ ಬಗಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರದರ್ಶಿಸಿದ ದೊಡ್ಡಾಟದ ಗಿರಿಜಾ ಕಲ್ಯಾಣ ಪ್ರಸಂಗವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಬಯಲಾಟ ಅಕಾಡೆಮಿ ರಿಜಿಸ್ಟ್ರಾರ್ ಕಸ್ತೂರಿ ಪಾಟೀಲ, ಸದಸ್ಯ ಲಕ್ಷ್ಮಣ ದೇಸಾರಟ್ಟಿ, ನವನಗರ ಸರ್ಕಾರಿ ಅಲ್ಪ ಸಂಖ್ಯಾತರ, ಮುರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜಿನ ಪ್ರಾಚಾರ್ಯ ಎಂ.ಎನ್. ಗರಗ, ಅಬ್ದುಲ್ ಕಲಾಂ ವಸತಿ ಶಾಲೆ ಪ್ರಾಚಾರ್ಯ ಆನಂದ ದದ್ದೂರ, ಇತಿಹಾಸ ಉಪನ್ಯಾಸಕ ಕೇಶವ ಸಾಲಮಂಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net