ಅದ್ದೂರಿ ಕಂಬಿ ಮಲ್ಲಯ್ಯ ಐದೇಶಿ ಉತ್ಸವ

ಮಹಾಲಿಂಗಪುರದಲ್ಲಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಕಂಬಿ ಮಲ್ಲಯ್ಯನಿಗೆ ಪೂಜೆ ಸಲ್ಲಿಸಿ ಬೆಲ್ಲ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಹಾಲಿಂಗಪುರದಲ್ಲಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಕಂಬಿ ಮಲ್ಲಯ್ಯನಿಗೆ ಪೂಜೆ ಸಲ್ಲಿಸಿ ಬೆಲ್ಲ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Published on
ಮಹಾಲಿಂಗಪುರ: ಬೆಲ್ಲದ ನಗರಿ ಮಹಾಲಿಂಗಪುರದಲ್ಲಿ ವಿಶಿಷ್ಟ ಧಾರ್ಮಿಕ ಆಚರಣೆಯಾದ ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಮಲ್ಲಯ್ಯ ಐದೇಶಿ ಉತ್ಸವ ಗುರುವಾರ ರಾತ್ರಿ ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ನೆರವೇರಿತು.
ಐದೇಶಿ ಉತ್ಸವ ಅಂಗವಾಗಿ ಪಟ್ಟಣದ ಜನರು ತಮ್ಮ ಮನೆಗಳನ್ನು ಶುಚಿಗೊಳಿಸಿ ಬಂಧು-ಬಳಗವನ್ನು ಆಹ್ವಾನಿಸಿ ಹಬ್ಬದ ವಾತಾವರಣ ಸೃಷ್ಟಿಸಿದರು. ಸಂಜೆ 5ರಿಂದ ರಾತ್ರಿ 11 ಗಂಟೆಯವರೆಗೆ ಭಕ್ತರು ಮಹಾಲಿಂಗೇಶ್ವರ ಹಾಗೂ ಮಲ್ಲಿಕಾರ್ಜುನ ದೇವಾಲಯಗಳಿಗೆ ಆಗಮಿಸಿ ಕಂಬಿ ಮಲ್ಲಯ್ಯನಿಗೆ ಬೆಲ್ಲ ಅರ್ಪಿಸಿ ಭಕ್ತಿ ಸಲ್ಲಿಸಿದರು. ಮಹಿಳೆಯರು ಆರತಿ ಸಮೇತ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದು ಗಮನಾರ್ಹವಾಗಿತ್ತು.
ದೇವಾಲಯಗಳನ್ನು ತಳಿರು ತೋರಣ ಮತ್ತು ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು. ವಿಶೇಷವಾಗಿ ಅಲಂಕರಿಸಿದ ಕಂಬಿ ಮಲ್ಲಯ್ಯನನ್ನು ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಶ್ರೀಶೈಲ ಪಾದಯಾತ್ರೆ ಪೂರ್ಣಗೊಳಿಸಿ ಬಂದ ಭಕ್ತರೊಂದಿಗೆ ಶ್ರೀಮಠದ ಗೋಮಾತೆಗೆ ಕೂಡ ಪೂಜೆ ನೆರವೇರಿಸಲಾಯಿತು. ಶ್ರೀಮಠದ ಪೀಠಾಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಪೂಜೆ ಸಲ್ಲಿಸಿ ಬೆಲ್ಲ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಐದೇಶಿ ದಿನ ಪಟ್ಟಣದಲ್ಲಿ ಹಬ್ಬದ ಸಂಭ್ರಮ ಕಂಗೊಳಿಸಿತು. ಹೋಳಿ ಹುಣ್ಣಿಮೆಯಿಂದ ಸ್ಥಗಿತಗೊಂಡಿದ್ದ ಶುಭಕಾರ್ಯಗಳು ಐದೇಶಿ ಉತ್ಸವದ ಮರುದಿನದಿಂದ ಆರಂಭಗೊಳ್ಳುವ ಸಂಪ್ರದಾಯವೂ ಇದೆ. ಈ ವಿಶಿಷ್ಟ ಆಚರಣೆ ಮಹಾಲಿಂಗಪುರದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ.
ಜಾತ್ರಾ ಕಮೀಟಿ ಅಧ್ಯಕ್ಷ ರವಿಗೌಡ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಶ್ರೀಮಠದ ಸೇವಕರಾದ ಕೃಷ್ಣಗೌಡ ಪಾಟೀಲ, ವಿಜಯ ಕುಳ್ಳೋಳ್ಳಿ, ಯಲ್ಲಪ್ಪ ಹಟ್ಟಿ, ಸುಭಾಸ ವಜ್ಜರಮಟ್ಟಿ, ಈಶ್ವರ ಮಠದ, ಶ್ರೀಶೈಲ, ಸಿದ್ದಯ್ಯಾ, ಬಸವರಾಜ ಮೇಟಿ, ಬ್ರಹ್ಮ ಕೋಟಿ, ಸಂತೋಷ ಶಿರೋಳ, ಅನೀಲ ಕಾಲತಿಪ್ಪಿ, ಶ್ರೀಧರ ಗಿಂಡೆ, ಪ್ರಮೋದ ಬಾಳಿಕಾಯಿ, ಶ್ರೀಶ ಬುದ್ನಿ, ಬಸವರಾಜ ಕಬ್ಬೂರ, ಸಂಜು ಅಂಗಡಿ ಸೇರಿ ಅನೇಕ ಭಕ್ತರು ಸೇವೆ ಸಲ್ಲಿಸಿದರು.

20 ಸಾವಿರ ಭಕ್ತರಿಂದ ದರ್ಶನ

ಗುರುವಾರ ಮುಂಜಾನೆಯಿಂದ ರಾತ್ರಿ 12 ಗಂಟೆವರೆಗೂ ಸುಮಾರು 20 ಸಾವಿರಕ್ಕೂ ಅಧಿಕ ಭಕ್ತರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದುಕೊಂಡು, ಕಂಬಿ ಮಲ್ಲಯ್ಯನಿಗೆ ಬೆಲ್ಲ ಅರ್ಪಿಸಿ ಭಕ್ತಿ ಮೆರೆದರು. ಶ್ರೀಶೈಲ ಪಾದಯಾತ್ರೆ ಮಾಡಿಕೊಂಡು ಬಂದವರಿಗೆ ಅವರ ಬೀಗರು, ಅಕ್ಕ ತಂಗಿಯರು ವಸ್ತçಗಳ ಕಾಣಿಕೆ ನೀಡಿದರು. ಹಾಗೂ ಕಂಬಿಯ ಪೂಜಾರಿಗಳಿಂದ ಮಲ್ಲಯ್ಯಾ ಮಲ್ಲಯ್ಯ ಗರಿ ಗರಿ ಮಲ್ಲಯ್ಯ ಹಾಗೂ ಪಂಚಾದಾರಿಗೆ ಮಂಗಲ, ಪಲ್ಲಾಧಾರಿಗೆ ಮಂಗಲ ಎಂಬ ದೇವರ ಬಿರುದಾವಳಿಯ ಹಾಕಿಸಿ, ಕಾಣಿಕೆ ಸಲ್ಲಿಸಿ ಕೃತಾರ್ಥರಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net