ಕಾಯಕವೇ ಕೈಲಾಸದ ಮೂಲಕ ಮಹತ್ತರ ಸಂದೇಶ

ಬಸವೇಶ್ವರ ಜಯಂತಿ ಅಂಗವಾಗಿ ಬಾಗಲಕೋಟೆ ನಗರದ ಬಿವಿವಿ ಸಂಘ, ವೀರಶೈವ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ಭವ್ಯ ಮೆರವಣಿಗೆ ಸೋಮವಾರ ಜರುಗಿತು.
ಬಸವೇಶ್ವರ ಜಯಂತಿ ಅಂಗವಾಗಿ ಬಾಗಲಕೋಟೆ ನಗರದ ಬಿವಿವಿ ಸಂಘ, ವೀರಶೈವ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ಭವ್ಯ ಮೆರವಣಿಗೆ ಸೋಮವಾರ ಜರುಗಿತು.
Published on
ಬಾಗಲಕೋಟೆ: ಕಾಯಕವೇ ಕೈಲಾಸ ಹಾಗೂ ದಾಸೋಹ ಪರಂಪರೆ ಮನುಕುಲಕ್ಕೆ ಸಾರಿದ ವಿಶ್ವಗುರು ಬಸವಣ್ಣನವರ ತತ್ವ ಆದರ್ಶಗಳು, ಚಿಂತನೆಗಳು ಇಂದಿಗೂ ಮಾನವ ಕುಲಕ್ಕೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿವೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ನಗರದಲ್ಲಿ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಕಣವಿ ವೀರಭದ್ರೇಶ್ವರ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಗಜ್ಯೋತಿ ಮಹಾತ್ಮ ಬಸವಣ್ಣನವರ ಜಯಂತಿ ಉತ್ಸವದ ಮೆರವಣಿಗೆ ಚಾಲನೆ ನೀಡಿ ಅವರು ಮಾತನಾಡಿದರು.
೧೨ ನೇ ಶತಮಾನದಲ್ಲಿ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ಅನಿಷ್ಠ ಪದ್ಧತಿಗಳು ಆಚರಣೆಯಲ್ಲಿದ್ದ ಕಾಲದಲ್ಲಿ ತಮ್ಮ ಸರಳ ವಚನಗಳ ಮೂಲಕ ಸಮಾಜದಲ್ಲಿ ಸುಧಾರಣೆ ತಂದವರು ಬಸವಣ್ಣನವರು. ಕಾಯಕವೇ ಕೈಲಾಸ ಎಂದು ಕಲಿಸುಕೊಟ್ಟ ದಾಸೋಹ ಪರಂಪರೆ ಜಗತ್ತಿಗೆ ಸಾರಿ ವಿಶ್ವಗುರುವಾದರು ಎಂದರು.
ಬಸವಣ್ಣನವರ ತತ್ವ ಆದರ್ಶಗಳು, ಚಿಂತನೆಗಳು ಇಂದಿಗೂ ಮಾನವ ಕುಲಕ್ಕೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿವೆ. ಧಯವೇ ಧರ್ಮದ ಮೂಲವಯ್ಯ, ದಯವಿಲ್ಲದ ಧರ್ಮ ಯಾವುದಯ್ಯ ದಯೆ ಬೇಕು ಸಕಲ ಪ್ರಾಣಿಗಳೆಲ್ಲರಲಿ ದಯವೇ ಧರ್ಮದ ಮೂಲವಯ್ಯ ಎಂದು ಜ್ಞಾನದ ಬೆಳಕು ಚೆಲ್ಲಿ ಕ್ರಾಂತಿಯ ಬೀಜ ಬಿತ್ತಿದವರು ಬಸವಣ್ಣನವರು ಎಂದು ಬಣ್ಣಿಸಿದರು.
ಟೀಕಿನಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕಳಬೇಡ, ಕೋಲಬೇಡ. ಹುಸಿಯ ನುಡಿಯಲೂ ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಇದೇ ಅಂತರAಗ ಶುದ್ಧಿ ಇದೇ ಬಹಿರಂಗ ಶುದ್ದಿ ಎಂದು ತಮ್ಮ ವಚನಗಳಲ್ಲಿ ಬದುಕಿನ ಸಾರವನ್ನು ತಿಳಿಸಿದವರು ಬಸವಣ್ಣನವರು. ಕರ್ನಾಟಕದ ಪಾಲಿಗೆ ಹನ್ನೆರಡನೇ ಶತಮಾನ ಎಂಬುದು ಬಹಳ ಮಹತ್ವದ್ದು, ಸಮಾಜದಲ್ಲಿ ಹೊಸ ಚಿಂತನೆ ರೂಪಗೊಂಡ ಕಾಲವದು, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ವಿಶಿಷ್ಟವಾದ ಕಾಲಘಟ್ಟವಿದು, ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ ಕೂಡಲ ಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯಾ ಇದು ಈ ಕಾಲಕ್ಕೂ ಪ್ರಸ್ತುತವಾಗಿದೆ ಎಂದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ. ಕಣವಿ ವೀರಭದ್ರೇಶ್ವರ ಟ್ರಸ್ಟ್ ಅಧ್ಯಕ್ಷ ಪ್ರಕಾಶ ರೇವಡಿಗಾರ, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕುಮಾರಸ್ವಾಮಿ ಹಿರೇಮಠ(ಚಿತ್ತರಗಿ), ಬಸವರಾಜ ಇಂಡಿ, ಬಸವರಾಜು ಮುಕುಪಿ, ಮಲ್ಲಿಕಾರ್ಜುನ ಮಠ. ಸಂಗಣ್ಣ ಶಿರೂರ, ರಾಮಣ್ಣ ಜುಮನಾಳ, ಮಹೇಶ ಕಕರೆಡ್ಡಿ, ಮಲ್ಲಿಕಾರ್ಜುನ ಹಂಡಿ, ಚಂದ್ರಶೇಖರ ಶೆಟ್ಟರ, ವಿರೇಶ ಉಪ್ಪಿನ, ಗುರುಬಸವ ಸೂಳಿಬಾವಿ, ರಾಜು ಪಾಟೀಲ, ಮಹಾಂತೇಶ ಶೆಟ್ಟರ, ವಿಜಯಕುಮಾರ ಅಂಗಡಿ, ಅಶೋಕ ಕರಡಿ, ಶಿವಾನಂದ ಶಹಬಾದಿ, ವೀರಣ್ಣ ಹಲಕುರ್ಕಿ, ಸುರೇಶಬಾಬು ನಿಡಗುಂದಿ, ರವಿ ಸರದೇಸಾಯಿ, ಪ್ರಭುಸ್ವಾಮಿ ಸರಗಣಾಚಾರಿ ಸೇರಿದಂತೆ ಅಕ್ಕನ ಬಳಗದ ಅಧ್ಯಕ್ಷರು ಸದಸ್ಯರು ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net