ಮಹಿಳೆಯರ ಗೌರವ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ

ಬಾಗಲಕೋಟೆ ಜಿಲ್ಲಾಡಳಿತ ಭವನದ ಸಭಾಭವನದಲ್ಲಿ ಗುರುವಾರ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಪೋಶ್-2013 ಅಧಿನಿಯಮ ಕುರಿತು ಕಾರ್ಯಾಗಾರವನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಗಜಾನನ ಬಾಲೆ, ಎಸ್ಪಿ ಸಿದ್ಧಾರ್ಥ ಗೋಯಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಟಿ.ಎಸ್. ಚಂದ್ರಿಕ ಇದ್ದರು.
ಬಾಗಲಕೋಟೆ ಜಿಲ್ಲಾಡಳಿತ ಭವನದ ಸಭಾಭವನದಲ್ಲಿ ಗುರುವಾರ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಪೋಶ್-2013 ಅಧಿನಿಯಮ ಕುರಿತು ಕಾರ್ಯಾಗಾರವನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಗಜಾನನ ಬಾಲೆ, ಎಸ್ಪಿ ಸಿದ್ಧಾರ್ಥ ಗೋಯಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಟಿ.ಎಸ್. ಚಂದ್ರಿಕ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿಕೆ
  • ಅಧಿಕಾರಿಗಳಿಗೆ ಕಾರ್ಯಾಗಾರ
ಬಾಗಲಕೋಟೆ : ಮಹಿಳೆಯರ ಮೇಲಿನ ಯಾವುದೇ ರೀತಿಯ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ತಾರತಮ್ಯಕ್ಕೆ ಸಮಾಜದಲ್ಲಿ ಅವಕಾಶ ಇರಬಾರದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಜಿಲ್ಲಾಡಳಿತ, ಜಿ.ಪಂ., ಕರ್ನಾಟಕ ರಾಜ್ಯ ಮಹಿಳಾ ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಮತ್ತು ಆಂತರಿಕ ದೂರು ನಿರ್ವಹಣಾ ಸಮಿತಿ ಅಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಕಾಯ್ದೆ 2013ರ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಘನತೆ ಮತ್ತು ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಸರ್ಕಾರಿ, ಖಾಸಗಿ, ಶೈಕ್ಷಣಿಕ ಹಾಗೂ ಇತರೆ ಉದ್ಯೋಗ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸುರಕ್ಷಿತ ಕೆಲಸದ ವಾತಾವರಣ ಕಲ್ಪಿಸುವುದು ಕಡ್ಡಾಯವಾಗಿದೆ. ಪ್ರತಿಯೊಂದು ಸಂಸ್ಥೆಯಲ್ಲೂ ಆಂತರಿಕ ದೂರು ಸಮಿತಿ ರಚಿಸಿ, ದೂರುಗಳನ್ನು ಗೌಪ್ಯವಾಗಿ ಹಾಗೂ ನ್ಯಾಯಯುತವಾಗಿ ಪರಿಶೀಲಿಸಬೇಕು. ನಮ್ಮ ದೇಶದಲ್ಲಿ ಹೆಣ್ಣನ್ನು ಪೂಜ್ಯ ಭಾವನೆಯಿಂದ ನೋಡುತ್ತಿದ್ದರೂ ಸಹ ಅವರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಇದು ನಿಲ್ಲಬೇಕು ಎಂದರು.
ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರು ಧೈರ್ಯದಿಂದ ದೂರು ಸಲ್ಲಿಸಬೇಕು. ಮಹಿಳೆಯರ ವಿರುದ್ಧ ನಡೆಯುವ ಯಾವುದೇ ರೀತಿಯ ದೌರ್ಜನ್ಯವನ್ನು ಸಮಾಜ ಸಹಿಸಬಾರದು. ಮಹಿಳೆಯರ ಗೌರವ ಮತ್ತು ಸಮಾನತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಮಹಿಳೆಯರ ಸುರಕ್ಷತೆ ತಮ್ಮ ಕೈಯಲ್ಲಿದೆ. ಇದನ್ನು ಅರಿತು ತಮ್ಮ ರಕ್ಷಣೆ ಮಾಡಿಕೊಳ್ಳಲು ಮುಂದಾಗಬೇಕು. ಪೋಶ್ ಎಂಬ ಕಾಯ್ದೆ ಜಾರಿಗೆ ಬರಲು ಕಾರಣರಾದವರ ಹೋರಾಟದ ಬಗೆಯನ್ನು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಮಹಿಳೆಯರನ್ನು ಗೌರವಿಸುವುದು ಕೇವಲ ಕಾನೂನಿನ ಪಾಲನೆಯಲ್ಲ, ಅದು ನಮ್ಮ ಸಂಸ್ಕಾರ, ನಮ್ಮ ಮಾನವೀಯತೆ ಮತ್ತು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ. ಪೋಶ್ ಅಧಿನಿಯಮದ ಮೂಲ ಆಶಯಗಳು ಮುಖ್ಯವಾಗಿ ತಡೆಗಟ್ಟುವಿಕೆ, ನಿಷೇಧ ಹಾಗೂ ಪರಿಹಾರ ಒಳಗೊಂಡಿದೆ. ಮಹಿಳೆಯರು ಆತ್ಮವಿಶ್ವಾಸದಿಂದ ಕೆಲಸ ಮಾಡಬೇಕು. ಮಹಿಳೆಯರಿಗೆ ಸುರಕ್ಷಿತ, ಗೌರವಯುತ ಮತ್ತು ಸಮಾನ ಅವಕಾಶಗಳನ್ನು ಒದಗಿಸುವ ಜಿಲ್ಲೆಯಾಗಿ ರೂಪಿಸುವ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಮಾತನಾಡಿ, ಮಹಿಳೆಯರಿಗೆ ಉಚಿತವಾಗಿ ಕಾನೂನು ಸೇವೆ ಒದಗಿಸಲಾಗುತ್ತಿದೆ. ಪೋಶ್-2013ರ ಕಾಯ್ದೆಯು ಮಹಿಳೆಯರಿಗೆ ಸುರಕ್ಷಿತ ಹಾಗೂ ಗೌರವಯುತ ಕೆಲಸದ ವಾತಾವರಣ ಕಲ್ಪಿಸುವ ಮಹತ್ವದ ಕಾನೂನಾಗಿದ್ದು, ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾದರೆ ಭಯಪಡದೆ ಕಾನೂನಿನ ನೆರವು ಪಡೆಯಬೇಕು ಎಂದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಿ.ಪಂ. ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಭಾಕರ ಕೆ., ಸಂಪನ್ಮೂಲ ವ್ಯಕ್ತಿ ಟಿ.ಎಸ್. ಚಂದ್ರಿಕ, ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ ಪರಸನ್ನವರ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net