ಜಮಖಂಡಿ ನಗರದ ತಾಲೂಕು ಆಡಳಿತ ಸೌಧದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು. ತಹಸೀಲ್ದಾರ ಅನೀಲ ಬಡಿಗೇರ ಮೂಲಕ ರಾಜ್ಯಪಾಲರಿಗೆ ಶಾಸಕ ನಾಡೋಜ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಅಜಯ ಕಡಪಟ್ಟಿ, ಡಾ. ವಿಜಯಲಕ್ಷ್ಮೀ ತುಂಗಳ ಇತರರಿದ್ದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಕಾನೂನು ಜಾರಿಗೆ ತರುವ ಹುನ್ನಾರ ನಡೆಸಿದೆ
ಜಮಖಂಡಿ : ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ, ಬಾಂಗ್ಲಾ ದೇಶದಲ್ಲಿನ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ನಗರದ ತಾಲೂಕು ಆಡಳಿತ ಸೌಧ ದ್ವಾರದ ಬಳಿ ಬಿಜೆಪಿ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ ಅನೀಲ ಬಡಿಗೇರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಕಾನೂನು ಜಾರಿಗೆ ತರುವ ಹುನ್ನಾರ ನಡೆಸಿದೆ. 1975ರ ತುರ್ತು ಪರಿಸ್ಥಿತಿಯನ್ನು ಜನವಿರೋಧಿ ಕಾನೂನಿನ ಅಡಿಯಲ್ಲಿ ಜಾರಿಗೊಳಿಸಿ ಸಾರ್ವಜನಿಕರು, ವಿಪಕ್ಷಗಳು, ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರೃ ಹತ್ತಿಕ್ಕುವ ಯತ್ನದಲ್ಲಿ ತೊಡಗಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025ನ್ನು ತರಾತುರಿಯಲ್ಲಿ ಜಾರಿಗೆ ತಂದು ಒಂದು ಕೋಮಿನವರನ್ನು ಎತ್ತಿಕಟ್ಟುವ ಹುನ್ನಾರ ನಡೆಸಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ ಅವರು ನೀಡದಿರುವ ಸಂವಿಧಾನದ 19 (1) ಪರಿಚ್ಛೇದ, (2) ಪರಿಚ್ಛೇದದಡಿ ವಾಕ್ ಅಥವಾ ಅಭಿವ್ಯಕ್ತಿ ಸ್ವಾತಂತ್ರೃದ ಉಲ್ಲಂಘನೆ ಆಗಿದೆ. ಸಂವಿಧಾನದಡಿ ನೀಡಿದ ಅಭಿವ್ಯಕ್ತಿ ಸ್ವಾತಂತ್ರೃವನ್ನು ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳಲು ಹೊರಟಿದೆ ಎಂದು ಕಿಡಿಕಾರಿದರು.
ಮಾಜಿ ಶಾಶಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾರೂ ಮಾತನಾಡದಂತೆ ತಡೆಯುವ, ಜನ ವಿರೋಧಿ ಕಾನೂನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಮಾಡುವುದು ಅಥವಾ ಸತ್ಯವನ್ನು ಹೇಳುವುದು ಕೂಡ ದ್ವೇಷ ಎಂದು ಪರಿಗಣಿಸುವ ಅಪಾಯವಿದೆ. ಜನರು ಭಯದಿಂದ ಮಾತನಾಡದೆ ಇರುವುದು ಸರ್ಕಾರದ ಉದ್ದೇಶವೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದರು.
ಮುಖಂಡರಾದ ಸಿ.ಟಿ. ಉಪಾಧ್ಯಾಯ ಮಾತನಾಡಿ, ಪ್ರಜಾಪ್ರಭುತ್ವದ ಮೂಲತತ್ವಕ್ಕೆ ಹಾನಿಮಾಡಿ ಕತ್ತು ಹಿಸುಕುವ ಯತ್ನ ನಡೆದಿದೆ. ಪೊಲೀಸರಿಗೆ ಮತ್ತು ಸರ್ಕಾರಕ್ಕೆ ನಿರಂಕುಶ ಅಧಿಕಾರ ನೀಡುವ ಕಾಯ್ದೆ ಇದಾಗಿದೆ. ಕಾಯ್ದೆ ಹೇಳುವಂತೆ ಇಲ್ಲಿನ ಅಪರಾಧಗಳಿಗೆ ಜಾಮೀನು ಇಲ್ಲ. ಜನಸಾಮಾನ್ಯರನ್ನು ಅಪರಾಧಿಗಳಾಗಿ ಮಾಡುವ ಈ ಕೀಳುಮಟ್ಟದ ಕಾಯಿದೆ ನಮಗೆ ಅವಶ್ಯವಿಲ್ಲ ಎಂದು ತಿಳಿಸಿದರು.