ಇಳಕಲ್ಲ: ವಿಜಯದಶಮಿಯ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಪಥ ಸಂಚಲನವು ಗುರುವಾರ ನಗರದಲ್ಲಿ ಅತ್ಯಂತ ವೈಭವ ಹಾಗೂ ಶಿಸ್ತುಬದ್ಧತೆಯಿಂದ ಜರುಗಿತು.
ಬಿಳಿ ಅಂಗಿ, ಖಾಕಿ ಪ್ಯಾಂಟ್, ಕಪ್ಪು ಟೋಪಿ ಧರಿಸಿದ ಸಾವಿರಾರು ಗಣವೇಷಧಾರಿ ಸ್ವಯಂ ಸೇವಕರ ಹೆಜ್ಜೆಗೆ ಹೆಜ್ಜೆ ಬೆರೆಸಿದ ಕವಾಯತು ನಗರದ ನಾಗರಿಕರ ಕಣ್ಮನ ಸೆಳೆಯಿತು.
ನಗರದ ಗೌಳೇರ ಗುಡಿಯ ಶ್ರೀರಾಮಕೃಷ್ಣ ವನ ಆವರಣದಲ್ಲಿ ಸಂಘದ ಧ್ವಜಾರೋಹಣ ನೆರವೇರಿಸಿದ ಬಳಿಕ ಪಥ ಸಂಚಲನಕ್ಕೆ ಚಾಲನೆ ದೊರೆಯಿತು. ಘೋಷ್ ನಾದದ ಲಯಬದ್ಧ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಸ್ವಯಂ ಸೇವಕರ ಪಥ ಸಂಚಲನವು ಗೌಳೇರಗುಡಿಯಿಂದ ಹೊರಟು ನಗರದ ಪ್ರಮುಖ ರಸ್ತೆಗಳು, ವಾಣಿಜ್ಯ ಮಾರುಕಟ್ಟೆ ಹಾಗೂ ಪ್ರಮುಖ ವೃತ್ತಗಳ ಮೂಲಕ ಸಾಗಿ ಅಂತಿಮವಾಗಿ ಆರ್. ವೀರಮಣಿ ಕ್ರೀಡಾಂಗಣ ತಲುಪಿತು. ಪಥ ಸಂಚಲನ ಸಾಗಿದ ಮಾರ್ಗದುದ್ದಕ್ಕೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕರು ಹಾಗೂ ಮಹಿಳೆಯರು ತಮ್ಮ ಮನೆಗಳ ಮುಂದೆ ಬಣ್ಣಬಣ್ಣದ ಚಿತ್ತಾರದ ರಂಗೋಲಿ ಬಿಡಿಸಿ, ತಳಿರು-ತೋರಣ ಕಟ್ಟಿ ಸಂಭ್ರಮಿಸಿದರು. ಮೆರವಣಿಗೆ ಸಾಗುತ್ತಿದ್ದಂತೆ ಸಾರ್ವಜನಿಕರು ಭಾರತ ಮಾತಾ ಕೀ ಜೈ ಘೋಷಣೆ ಕೂಗುತ್ತಾ, ಭಗವಾ ಧ್ವಜ ಮತ್ತು ಸ್ವಯಂ ಸೇವಕರ ಮೇಲೆ ಪುಷ್ಪ ವೃಷ್ಟಿಗೈದು ನಮನ ಸಲ್ಲಿಸಿದರು.
ಛತ್ರಪತಿ ಶಿವಾಜಿ ಮಹಾರಾಜ್, ಸ್ವಾಮಿ ವಿವೇಕಾನಂದ, ಡಾ. ಬಿ.ಆರ್. ಅಂಬೇಡ್ಕರ್ ಸೇರಿ ದೇಶದ ಮಹಾಪುರುಷರ ಭಾವಚಿತ್ರ ಇರಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಮಕ್ಕಳು ವೀರ ಸಾವರ್ಕರ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚನ್ನಮ್ಮ ಹಾಗೂ ಸುಭಾಷ್ ಚಂದ್ರ ಬೋಸ್ ಅವರಂತಹ ರಾಷ್ಟ್ರ ನಾಯಕರ ವೇಷಭೂಷಣ ಧರಿಸಿ ಗಮನ ಸೆಳೆದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅರವಿಂದ ಮಂಗಳೂರು, ಪ್ರಮುಖರಾದ ವಿಜಯ ಗಿರಡ್ಡಿ, ಪ್ರದೀಪ ಅಮರಣ್ಣನವರ, ಪರಶುರಾಮ ಬಿಸಲದಿನ್ನಿ ಇದ್ದರು. ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಕ್ರೀಡಾಂಗಣದಲ್ಲಿ ಧ್ವಜಾವರೋಹಣ ಹಾಗೂ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು.