ಜಮಖಂಡಿ ನಗರದಲ್ಲಿ ವೀರ ಸಿಂಧೂರ ಲಕ್ಷ್ಮಣ ಮಾರುಕಟ್ಟೆಯನ್ನು ಶಾಸಕ ನಾಡೋಜ ಜಗದೀಶ ಗುಡಗುಂಟಿ ಉದ್ಘಾಟಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಪೌರಾಯುಕ್ತ ಜ್ಯೋತಿ ಗಿರೀಶ, ಡಾ. ವಿಜಯಲಕ್ಷ್ಮೀ ತುಂಗಳ ಇದ್ದಾರೆ.
ಎಲ್ಲ ಬೀದಿ ಬದಿ ವ್ಯಾಪಾರಸ್ಥರು ಒಂದೆಡೆ ಕುಳಿತು ವ್ಯಾಪಾರ ನಡೆಸಲು ಸ್ಥಳಾವಕಾಶ ಕಲ್ಪಿಸಲಾಗಿದೆ.
ಜಮಖಂಡಿ : ನಗರದ ಸಮಗ್ರ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಅವುಗಳನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ಹಳೆಯ ಜೈಲು ಆವರಣದಲ್ಲಿ ನಗರಸಭೆ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೀರ ಸಿಂಧೂರ ಲಕ್ಷ್ಮಣ ಮಾರುಕಟ್ಟೆ ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ರಸ್ತೆ ಬದಿಗಳಲ್ಲಿ ಕುಳಿತು ವ್ಯಾಪಾರ ಮಾಡುವವರಿಗೆ ಬಹಳ ತೊಂದರೆಯಾಗುತ್ತಿತ್ತು. ಈಗ ಎಲ್ಲ ಬೀದಿ ಬದಿ ವ್ಯಾಪಾರಸ್ಥರು ಒಂದೆಡೆ ಕುಳಿತು ವ್ಯಾಪಾರ ನಡೆಸಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಜಾಗವನ್ನು ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗುವುದು ಎಂದರು.
ಈ ಹಿಂದೆ ಇಲ್ಲಿದ್ದ ಜೈಲಿನಲ್ಲಿ ಸಿಂಧೂರ ಲಕ್ಷ್ಮಣ ಅವರನ್ನು ಬಂಧಿಸಿ ಇಡಲಾಗಿತ್ತು. ಅವರ ಹೆಸರು ಅಳಿಸಿ ಹೋಗಬಾರದು ಎಂಬ ಉದ್ದೇಶದಿಂದ ಮಾರುಕಟ್ಟೆಗೆ ಅವರ ಹೆಸರನ್ನೇ ಇಡಲಾಗಿದೆ. ಮುಂದಿನ ದಿನಗಳಲ್ಲಿ ಅವರ ಸ್ಮರಣಾರ್ಥ ಗುರುತನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಪೌರಾಯುಕ್ತ ಜ್ಯೋತಿ ಗಿರೀಶ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಮಾರುಕಟ್ಟೆ ನಿರ್ಮಿಸಲಾಗಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಡಾ. ವಿಜಯಲಕ್ಷ್ಮೀ ತುಂಗಳ, ಅಜಯ ಕಡಪಟ್ಟಿ, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ನಬೀಸಾಬ ಮುಲ್ಲಾ ಇತರರಿದ್ದರು.