ತೇರದಾಳ ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಆಯೋಜಿಸಿದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಬನಹಟ್ಟಿ ದಿವಾನಿ ನ್ಯಾಯಾಧೀಶರಾದ ಸೌಮ್ಯ ಹೂಲಿ ಮಾತನಾಡಿದರು. ತಹಸೀಲ್ದಾರ ವಿಜಯಕುಮಾರ ಕಡಕೋಳ, ನ್ಯಾಯವಾದಿಗಳು ಇದ್ದರು.
ತೇರದಾಳ: ನ್ಯಾಯ ಸಮ್ಮತ ಇಲ್ಲದ ವಹಿವಾಟು ತಡೆಯಲು ಹಾಗೂ ಪಾರದರ್ಶಕ ವಹಿವಾಟು ನಡೆಸುವ ಉದ್ದೇಶದಿಂದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಬನಹಟ್ಟಿ ದಿವಾಣಿ ನ್ಯಾಯಾಧೀಶರಾದ ಸೌಮ್ಯ ಹೂಲಿ ಹೇಳಿದರು.
ಇಲ್ಲಿನ ಪುರಸಭೆ ಸಭಾ ಭವನದಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಹಕರಿಗೆ ನಡೆಯುವ ವಂಚನೆಯನ್ನು ಆಯಾ ಜಿಲ್ಲಾ ಗ್ರಾಹಕರ ನ್ಯಾಯಾಲಯಗಳಲ್ಲಿ ದೂರು ದಾಖಲಿಸಬಹುದು. ಆನ್‌ಲೈನ್‌ನಲ್ಲಿಯೂ ಅವಕಾಶ ಇದೆ. ಆದ್ದರಿಂದ ಗ್ರಾಹಕರಿಗೆ ಇರುವ ಹಕ್ಕುಗಳ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದರು.
ಅತಿಥಿ ಉಪನ್ಯಾಸಕ ಎ.ಎನ್. ಜಿಡ್ಡಿಮನಿ ಮಾತನಾಡಿ, 1986ರಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆ ಜಾರಿಗೆ ಬಂತು. ನಂತರದ ದಿನಗಳಲ್ಲಿ ಕೆಲ ಅಂಶಗಳನ್ನು ಬದಲಾವಣೆ ಮಾಡಿ 2019ರಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆ ಎಂದು ಮಾಡಲಾಗಿದೆ. ಮಾರಾಟಗಾರರು ಅಥವಾ ತಯಾರಕರಿಂದ ಒಂದು ಕೋಟಿ ರೂ. ವರೆಗೆ ಗ್ರಾಹಕರು ಅನ್ಯಾಯಕ್ಕೆ ಒಳಗಾಗಿದ್ದರೆ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಹಾಗೂ 1 ರಿಂದು 10 ಕೋಟಿ ರೂ. ವರೆಗೆ ರಾಜ್ಯ ಗ್ರಾಹಕರ ನ್ಯಾಯಾಲಯ ಹಾಗೂ 10 ಕೋಟಿ ರೂ. ಗಿಂತ ಹೆಚ್ಚು ಇದ್ದರೆ ರಾಷ್ಟ್ರ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಅವಕಾಶ ಇದೆ ಎಂದು ತಿಳಿಸಿದರು.