ಜನಗಣತಿಯೇ ಇಲ್ಲದೇ ಕ್ಷೇತ್ರ ಮರು ವಿಂಗಡನೆ ಹೇಗೆ?

ಬಾಗಲಕೋಟೆ ನಗರದಲ್ಲಿ ಶನಿವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿದರು. ಸುಮಿತ್ರಾ ಗುಳಬಾಳ, ರೇಣುಕಾ ನ್ಯಾಮಗೌಡ, ಅನುರಾಧ ದೊಡ್ಡಮನಿ ಮತ್ತಿತರರಿದ್ದರು.
ಬಾಗಲಕೋಟೆ ನಗರದಲ್ಲಿ ಶನಿವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿದರು. ಸುಮಿತ್ರಾ ಗುಳಬಾಳ, ರೇಣುಕಾ ನ್ಯಾಮಗೌಡ, ಅನುರಾಧ ದೊಡ್ಡಮನಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಆಗ್ರಹ
  • ಇರುವ ಕ್ಷೇತ್ರಗಳಿಗೆ ಮಹಿಳಾ ಮೀಸಲಾತಿ ಜಾರಿಮಾಡಿ
ಬಾಗಲಕೋಟೆ ಮಹಿಳಾ ಸಬಲೀಕರಣದ ಬಗ್ಗೆ ನಿಮಗೆ ಆಸಕ್ತಿ ಇದ್ದರೆ, ಮಹಿಳೆಯರ ಬಗ್ಗೆ ನಿಜವಾಗಿಯೂ ಕಾಳಜಿ, ಗೌರವ ಹೊಂದಿದ್ದರೆ ಈಗ ಇರುವ ಲೋಕಸಭೆಯ 543 ಕ್ಷೇತ್ರಗಳಿಗೆ ಅನ್ವಯವಾಗುವಂತೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆಯಬೇಕು. ರಾಜಕೀಯವಾಗಿ ಮಹಿಳೆಯರಿಗೆ ಶಕ್ತಿ ತುಂಬುವ ಆಸಕ್ತಿ ಇದ್ದರೆ ಯಾವುದೇ ಷರತ್ತು ಇಲ್ಲದೇ ತಕ್ಷಣವೇ ಮೀಸಲಾತಿ ಅನುಷ್ಠಾನಕ್ಕೆ ತರಬೇಕು. ನಿಮ್ಮ ಮಹಿಳಾ ಕಾಳಜಿ ಬರೀ ಬಾಯಿ ಮಾತಿಗೆ ಸೀಮಿತವಾಗದಿರಲಿ ಎಂದು ಒತ್ತಾಯಿಸಿದರು.
ಹಿಂದೆ ರಾಜೀವ್ ಗಾಂಧಿ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಶೇ. 50ರಷ್ಟು ಮೀಸಲಾತಿ ಜಾರಿಗೆ ತಂದರು. ಅವರು ಅದಕ್ಕಾಗಿ ಯಾವುದನ್ನು ಥಳಕು ಹಾಕಲು ಹೋಗಿರಲಿಲ್ಲ. ಆದರೆ, ನೀವು ಉತ್ತರ ಭಾರತಕ್ಕೆ ಅನುಕೂಲ ಮಾಡಿಕೊಡುವ ಹಾಗೂ ದಕ್ಷಿಣ ಭಾರತಕ್ಕೆ ಅನ್ಯಾಯವಾಗುವ ಕ್ಷೇತ್ರ ಮರು ವಿಂಗಡನೆಯನ್ನು ಮಹಿಳಾ ಮೀಸಲಾತಿಗೆ ಥಳಕು ಹಾಕುವುದು ಏಕೆ? ಎಂದು ಪ್ರಶ್ನಿಸಿ, ಇದೇ ಕಾರಣಕ್ಕೆ ಬಿಲ್ ಪಾಸು ಆಗಲಿಲ್ಲ ವಿನಃ ಬೇರೆ ಕಾರಣಕ್ಕೆ ಅಲ್ಲ ಎಂದರು.
ಮಹಿಳಾ ಸಬಲೀಕರಣ ಹಾಗೂ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ವಿರೋಧ ಮಾಡಿಲ್ಲ. ಮಹಿಳಾ ಮೀಸಲಾತಿ ಪರವಾಗಿ ನಮ್ಮ ಪಕ್ಷ ಇದೆ. ನಿಮಗೂ ಸಹ ಮಹಿಳೆಯರು ರಾಜಕೀಯವಾಗಿ ಬೆಳೆಯಲಿ ಎನ್ನುವ ಸದುದ್ದೇಶ ಇದ್ದರೆ ಈಗ ಇರುವ ಸ್ಥಾನಗಳಿಗೆ ಮೀಸಲಾತಿ ಕಲ್ಪಿಸಿ, ಬರುವ 2028 ಮತ್ತು 2029ರ ಚುನಾವಣೆಗಳಲ್ಲಿ ಅದು ಅನುಷ್ಠಾನಕ್ಕೆ ಬರುವಂತೆ ಮಾಡಿ ಎಂದು ಹೇಳಿದರು.
ಕ್ಷೇತ್ರ ಮರು ವಿಂಗಡನೆ ಆಗಬೇಕಿದ್ದರೆ ಜನಗಣತಿ ಆಗಬೇಕು. ದೇಶದಲ್ಲಿ ಜನಗಣತಿಯೇ ಆಗಿಲ್ಲ. ಹೀಗಿದ್ದೂ ಕ್ಷೇತ್ರ ಮರುವಿಂಗಡನೆ ಹೇಗೆ ಮಾಡುತ್ತೀರಿ? ಕೇವಲ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಚುನಾವಣೆ ಗೆಲ್ಲುವ ಉದ್ದೇಶದಿಂದ ವಿಶೇಷ ಅಧಿವೇಶನ ಕರೆದು ಬೇರೆ ಬೇರೆ ವಿಷಯಗಳನ್ನು ಥಳಕು ಹಾಕಿ ಮಹಿಳಾ ಮೀಸಲಾತಿ ಬಿಲ್ ಪಾಸು ಮಾಡಲು ಬಂದಿದ್ದೀರಿ. ಯಾವುದೇ ಯೋಜನೆ ಆಗಲಿ ಅದು ಇಂದಿನ ಯೋಜನೆ ಇಂದೇ ಜಾರಿ ಆಗಬೇಕು. ಹೀಗಾಗಿ ಸದ್ಯ ಇರುವ ಕ್ಷೇತ್ರಗಳಿಗೆ ಮೀಸಲಾತಿ ಜಾರಿ ಮಾಡಿ ಎಂದು ಪುನರುಚ್ಛರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುಮಿತ್ರಾ ಗುಳಬಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ರೇಣುಕಾ ನ್ಯಾಮಗೌಡ, ಅನುರಾಧ ದೊಡ್ಡಮನಿ, ಮೇನಕಾ ಲಮಾಣಿ, ವಿಜಯಲಕ್ಷ್ಮೀ ಪೂಜಾರ ಇದ್ದರು.

ಚುನಾವಣೆ ಬಂದಾಗ ಹೇಳುವೆ

ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಆಯ್ಕೆ ಯಾವುದು ಎನ್ನುವ ಪ್ರಶ್ನೆಗೆ ಉತ್ತರಿಸಿದ ವೀಣಾ, ಈಗ ಅದಕ್ಕೆ ಸೂಕ್ತ ಸಮಯವಲ್ಲ. ಚುನಾವಣೆಗಳು ಬಂದಿಲ್ಲ. ಸದ್ಯ ಮಹಿಳಾ ಮೀಸಲಾತಿ ಜಾರಿಗಾಗಿ ನಮ್ಮ ಹೋರಾಟ. ಚುನಾವಣೆ ಬಂದಾಗ ಆ ಬಗ್ಗೆ ನನ್ನ ನಿರ್ಧಾರ ಪ್ರಕಟಿಸುವೆ. ಮುಂಬರುವ ವಿಧಾನಸಭೆ ಕ್ಷೇತ್ರದಲ್ಲಿ ಕಣದಲ್ಲಿ ಇರುವುದಂತೂ ಖಚಿತ. ಯಾವ ಕ್ಷೇತ್ರ? ಹೇಗೆ ಎನ್ನುವುದನ್ನು ಆ ಸಮಯದಲ್ಲಿ ಹೇಳುವೆ ಎಂದು ವೀಣಾ ಕಾಳಪ್ಪನವರ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net