ಬ್ಲಾಸ್ಟಿಂಗ್ ಸದ್ದಿಗೆ ನಡುಗುತ್ತಿರುವ ಮನೆಗಳು..!

 ಬೆಳೆ ಹಾಗೂ ಕೃಷಿ ಹೊಂಡದ ಮೇಲೆ ಬಿದ್ದ ಕಲುಷಿತ ಧೂಳು.
ಬೆಳೆ ಹಾಗೂ ಕೃಷಿ ಹೊಂಡದ ಮೇಲೆ ಬಿದ್ದ ಕಲುಷಿತ ಧೂಳು.
Published on

ಪ್ರಮುಖ ಮುಖ್ಯಾಂಶಗಳು

  • ಜೆ.ಕೆ. ಸಿಮೆಂಟ್ಸ್ ವಿಷ ಧೂಳಿನ ದರ್ಬಾರ್
  • ಇಂದಿನಿಂದ ಹೋರಾಟಕ್ಕೆ ಸಜ್ಜಾದ ರೈತರು
  • ನೆಲಕಚ್ಚಿದ ಮನೆಗಳು, ಆತಂಕದಲ್ಲಿ ಗ್ರಾಮಸ್ಥರು
ಮುಧೋಳ: ತಾಲೂಕಿನ ಮುದ್ದಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೆ.ಕೆ. ಸಿಮೆಂಟ್ಸ್ ಕಾರ್ಖಾನೆ ದರ್ಬಾರ್ ಮಿತಿ ಮೀರಿದೆ. ಕಾರ್ಖಾನೆಯ ಅವೈಜ್ಞಾನಿಕ ಬ್ಲಾಸ್ಟಿಂಗ್‌ಗೆ ರೋಸಿ ಹೋಗಿರುವ ರೈತರು ತಮ್ಮ ಮನೆಗಳನ್ನು ರಕ್ಷಿಸಿಕೊಳ್ಳಲು ಹೋರಾಟದ ಹಾದಿ ಹಿಡಿದಿದ್ದಾರೆ.

ನೆಲಕಚ್ಚಿದ ಮನೆಗಳು, ಆತಂಕದಲ್ಲಿ ಗ್ರಾಮಸ್ಥರು

ಕಾರ್ಖಾನೆಯ ಗಣಿ ವಲಯದಲ್ಲಿ ನಡೆಯುತ್ತಿರುವ ಬ್ಲಾಸ್ಟಿಂಗ್ ಸದ್ದು ಗ್ರಾಮಸ್ಥರ ನಿದ್ದೆಯನ್ನು ಕಸಿದುಕೊಳ್ಳುತ್ತಿದೆ. ಸ್ಫೋಟದ ಕಂಪನಕ್ಕೆ ಮನೆಗಳ ಗೋಡೆಗಳಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದು, ಕುಸಿದು ಬೀಳುವ ಭೀತಿಯಲ್ಲಿದೆ. ಹೀಗಾದರೆ ಹೇಗೆ ಮುಂದಿನ ಬದುಕು ಹೇಗೆ? ಎಂಬುದು ಗ್ರಾಮಸ್ಥರ ಅಳಲಾಗಿದೆ.

ಹೊಲದ ಮೇಲೆ ಬೂದಿ ಮಳೆ, ಕಮರಿದ ಬೆಳೆ

ಕಾರ್ಖಾನೆಯಿಂದ ಹೊರ ಬೀಳುವ ವಿಷಕಾರಿ ಧೂಳು ರೈತರ ಹೊಲಗಳಿಗೆ ಆವರಿಸುತ್ತಿದ್ದು, ಎಕರೆಗಟ್ಟಲೆ ಬೆಳೆ ನಾಶವಾಗುತ್ತಿದೆ. ಕೇವಲ ಬೆಳೆ ಮಾತ್ರವಲ್ಲ, ವಾಯು ಮಾಲಿನ್ಯದಿಂದ ಉಸಿರಾಟದ ಸಮಸ್ಯೆ ಕಾಡುತ್ತಿದೆ. ಅಂತರ್ಜಲ ಸಂಪೂರ್ಣ ಕಲುಷಿತಗೊಂಡಿದ್ದು, ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಯಮಗಳನ್ನು ಗಾಳಿಗೆ ತೂರಿರುವ ಆಡಳಿತ ಮಂಡಳಿ, ಇದೀಗ ಮತ್ತಷ್ಟು ವಿಸ್ತರಣಾ ಯೋಜನೆಗೆ ಕೈಹಾಕಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ಭೂಕುಸಿತದಿಂದ ಕಂಗಾಲು

ಕಳೆದ ಬಾರಿ ಕಾರ್ಖಾನೆಯ ಹತ್ತಿರ ರೈತರ ಹೊಲದಲ್ಲಿ ಹತ್ತು ಅಡಿ ಅಗಲ ಹಾಗೂ 20 ಅಡಿ ಉದ್ದದ ಭೂಕುಸಿತ ಬಿದ್ದಿದ್ದರ ಪರಿಣಾಮ ತಹಸೀಲ್ದಾರ ಡಾ. ಚಿಕ್ಕಪ್ಪ ನಾಯಕ ತಂಡ ಪರಿಶೀಲನೆ ಮಾಡಿದೆಯೇ ಹೊರತು ಯಾವುದೇ ಕ್ರಮ ಕೈಗೊಳ್ಳಲು ವಿಲವಾಗಿದ್ದಾರೆ ಎಂದು ಅನ್ನದಾತರು ಆರೋಪಿಸುತ್ತಿದ್ದಾರೆ.

ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲದು

ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಜೂ. 15ರಂದು ಕಾರ್ಖಾನೆ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದು, ಹೋರಾಟ ಕುರಿತು ಉತ್ತರ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಶಂಕರ ಗೌಡ ಹಿರೇಗೌಡ ಎಚ್ಚರಿಕೆ ನೀಡಿದ್ದು, ಕಾರ್ಖಾನೆಯ ಭ್ರಷ್ಟ ಆಡಳಿತ ಮತ್ತು ಪರಿಸರ ವಿನಾಶದ ವಿರುದ್ಧ ನಮ್ಮ ಹೋರಾಟ ಇದೀಗ ನಿರ್ಣಾಯಕ ಹಂತ ತಲುಪಿದೆ. ಮನೆಗಳ ಹಾನಿಗೆ ಪರಿಹಾರ ಸಿಗಬೇಕು ಮತ್ತು ಅಕ್ರಮ ಬ್ಲಾಸ್ಟಿಂಗ್‌ಗೆ ಶಾಶ್ವತ ಬ್ರೇಕ್ ಬೀಳಬೇಕು. ನಮ್ಮ ಬೇಡಿಕೆಗಳು ಈಡೇರುವವರೆಗೆ ಧರಣಿ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಬದುಕು ಮತ್ತು ಆಸ್ತಿಯ ರಕ್ಷಣೆಗಾಗಿ ರೈತರು ಹಮ್ಮಿಕೊಂಡಿರುವ ಈ ಹೋರಾಟಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು, ಸಂಘ-ಸಂಸ್ಥೆಗಳು ಬೆಂಬಲ ನೀಡಬೇಕೆಂದು ರೈತ ಮುಖಂಡರು ಮನವಿ ಮಾಡಿದ್ದಾರೆ.
ಮುದ್ದಾಪುರದ ರೈತರ ಈ ಕೂಗು ಸರ್ಕಾರದ ಕಿವಿಗೆ ತಲುಪುತ್ತದೆಯೋ? ಅಥವಾ ಜೆ.ಕೆ. ಸಿಮೆಂಟ್ಸ್ ತನ್ನ ದರ್ಬಾರ್ ಮುಂದುವರಿಸುತ್ತದೆಯೋ ಕಾದು ನೋಡಬೇಕು.
"

ಕಾರ್ಖಾನೆ ನಿರ್ಮಾಣವಾದ ನಂತರ ರೈತರ ಬದುಕು ದುಸ್ತರವಾಗಿದೆ. ವಿಷ ಧೂಳು ಬೆಳೆಗಳನ್ನು ಮಾತ್ರವಲ್ಲ ಗ್ರಾಮದಲ್ಲಿಯೂ ಬಿದ್ದು ಆರೋಗ್ಯ ಹದಗೆಡುತ್ತಿದೆ. ಬ್ಲಾಸ್ಟಿಂಗ್‌ಗೆ ಮನೆಗಳು ಬಿರುಕು ಬಿಟ್ಟಿವೆ. ಕೆಲವು ಮನೆಗಳು ಬಿದ್ದಿವೆ. ಇನ್ನು ಮುಂದಾದರೂ ವೈಜ್ಞಾನಿಕವಾಗಿ ಬ್ಲಾಸ್ಟಿಂಗ್ ಮಾಡಿ ಧೂಳು ಬರದಂತೆ ಎಚ್ಚರಿಕೆ ವಹಿಸದಿದ್ದರೆ ಜೂ. 15 ರಿಂದ ಪ್ರಾರಂಭವಾಗುವ ಪ್ರತಿಭಟನೆ ಉಗ್ರ ಸ್ವರೂಪ ಪಡೆಯುವುದರಲ್ಲಿ ಸಂದೇಹ ಇಲ್ಲ.
- ಸುರೇಶ ಕಿವಡಿ ನಿಂಗಾಪೂರ ಗ್ರಾಮಸ್ಥರು

"

ಅಲ್ಲಿನ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ರವಾನಿಸಲಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಜಂಟಿ ಪರಿಶೀಲನೆ ನಡೆಸಲಿದ್ದಾರೆ. ಕಾರ್ಖಾನೆಯವರು ನಿಯಮಗಳನ್ನು ಪಾಲಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ, ಲೋಪದೋಷಗಳು ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
- ಡಾ. ಚಿಕ್ಕಪ್ಪ ನಾಯಿಕ ತಹಸೀಲ್ದಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net