ಬಿಸಿಲಿನ ತಾಪಕ್ಕೆ ಹಿಪ್ಪರಗಿ ಬ್ಯಾರೇಜ್ ದಿನಂಪ್ರತಿ ಖಾಲಿ

ರಬಕವಿ-ಬನಹಟ್ಟಿ ಸಮೀಪದ ಹಿಪ್ಪರಗಿ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ಕುಸಿದಿರುವ ದೃಶ್ಯ.
ರಬಕವಿ-ಬನಹಟ್ಟಿ ಸಮೀಪದ ಹಿಪ್ಪರಗಿ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ಕುಸಿದಿರುವ ದೃಶ್ಯ.
Published on

ಪ್ರಮುಖ ಮುಖ್ಯಾಂಶಗಳು

  • ಮೇ ಮಧ್ಯಂತರಕ್ಕೆ ನೀರಿನ ಆತಂಕ
  • ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಿದ್ಧತೆ
ರಬಕವಿ/ಬನಹಟ್ಟಿ: ಸಮೀಪದ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಬೇಸಿಗೆಯ ಬಿರುಬಿಸಿಲಿನ ಪರಿಣಾಮ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಮೇ ಮಧ್ಯಂತರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.
ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಸಂಜೀವನಿಯಾಗಿರುವ ಹಿಪ್ಪರಗಿ ಜಲಾಶಯದಲ್ಲಿನ ನೀರು ಬೇಸಿಗೆಯ ಬಾಷ್ಪೀಕರಣ ಹೊಡೆತಕ್ಕೆ ಸಂಗ್ರಹದಲ್ಲಿ ಭಾರಿ ಕುಸಿತಕ್ಕೆ ಕಾರಣವಾಗಿದೆ. ದಿನಂಪ್ರತಿ 0.7 ಟಿಎಂಸಿಯಷ್ಟು ನೀರು ಖಾಲಿಯಾಗುತ್ತಿದೆ. ಇತ್ತ ಜನತೆ ಬಳಕೆಗೆ ಕಾರಣವಾದರೆ, ಮತ್ತೊಂದೆಡೆ ಬಿರುಬಿಸಿಲಿನ ತಾಪಕ್ಕೆ ನೀರು ತೀವ್ರ ಕಡಿಮೆಯಾಗುತ್ತಿದೆ.
ನೀರಿನ ಮಟ್ಟ ಕೆಲ ದಿನಗಳಲ್ಲಿ ದಿಢೀರ್ ಆಗಿ ಭಾರಿ ಕುಸಿತ ಕಂಡ ಹಿನ್ನೆಲೆಯಲ್ಲಿ ಜನರಿಗೆ ಬೇಸಿಗೆಯ ಆತಂಕ ಶುರುವಾಗಿದೆ. ನೀರಿನ ಸಮರ್ಪಕ ಬಳಕೆಯಿಂದ ಬೇಸಿಗೆ ದಿನಗಳನ್ನು ಸಂಪೂರ್ಣ ನಿರಾಯಾಸವಾಗಿ ಕಳೆಯಬಹುದಾಗಿದೆ.

ತಾಲೂಕಾಡಳಿತದಿಂದ ಪೂರ್ವ ತಯಾರಿ

ಎಲ್ಲ ಗ್ರಾಮಗಳಲ್ಲಿ ನೀರಿನ ಅಭಾವವಾಗದ ರೀತಿಯಲ್ಲಿ ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ, ಅಗತ್ಯವಿದ್ದಲ್ಲಿ ಪರ್ಯಾಯ ನೀರಿನ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆಸಿದೆ.

ನೀರು ಬಿಡುಗಡೆಯಾಗದಿದ್ದರೆ ನಿರಾಳ

ಪ್ರತಿ ವರ್ಷ ಬೇಸಿಗೆ ಸಂದರ್ಭ ಹಿಪ್ಪರಗಿ ಜಲಾಶಯದಿಂದ ಮುಂಭಾಗಕ್ಕೆ ಅಂದಾಜು ಸುಮಾರು 0.5 ಟಿಎಂಸಿಯಷ್ಟು ನೀರನ್ನು ಜಮಖಂಡಿ ಭಾಗಕ್ಕೆ ಕುಡಿಯುವ ನೀರಿನ ಸಲುವಾಗಿ ಬಿಡುಗಡೆಗೊಳಿಸುತ್ತಿದ್ದರು. ಕಳೆದ ಅವಽಯಲ್ಲಿ ಗೇಟ್ ನಂ.22ರಲ್ಲಿ ಸಂಭವಿಸಿದ ಅವಘಡದಿಂದ ಸುಮಾರು 2 ಟಿಎಂಸಿ ನೀರು ನಷ್ಟವಾಗಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಬೇಸಿಗೆ ಮುಗಿಯುವವರೆಗೂ ಇದೇ ನೀರು ನಿಯಂತ್ರಣದಲ್ಲಿದ್ದರೆ ಮಾತ್ರ ಮೇ ಮದ್ಯದವರೆಗೆ ಅನುಕೂಲವಾಗುವದು.
"

ಪ್ರಸ್ತುತ ಯಾವುದೇ ಪ್ರದೇಶದಲ್ಲಿ ನೀರಿನ ಅಭಾವ ಇಲ್ಲ. ಅಧಿಕಾರಿಗಳ ನೇತೃತ್ವದಲ್ಲಿ ಪದೆ ಪದೆ ಸಭೆಗಳನ್ನು ನಡೆಸಲಾಗಿದೆ. ಆದರೆ ಮೇ ಮಧ್ಯಂತರದ ನಂತರ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇದ್ದು, ಕೊಳವೆಬಾವಿಗಳೇ ಪ್ರಮುಖ ಆಧಾರವಾಗಲಿವೆ.

— | ಗಿರೀಶ ಸ್ವಾದಿ, ತಹಸೀಲ್ದಾರ್‌, ರಬಕವಿ-ಬನಹಟ್ಟಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net