ಹೈಟೆಕ್ ಸಿಟಿಗಿಲ್ಲ ಮೂಲ ಸೌಕರ್ಯ..!

ಬಾಗಲಕೋಟೆ ನವನಗರದ ಯೂನಿಟ್-2 ಸೆಕ್ಟರ್ ನಂಬರ್ 66ರಲ್ಲಿ ಬಿಟಿಡಿಎ ನಿರ್ಮಿಸಿದ ಕಟ್ಟಡ.
ಬಾಗಲಕೋಟೆ ನವನಗರದ ಯೂನಿಟ್-2 ಸೆಕ್ಟರ್ ನಂಬರ್ 66ರಲ್ಲಿ ಬಿಟಿಡಿಎ ನಿರ್ಮಿಸಿದ ಕಟ್ಟಡ.
Published on

ಪ್ರಮುಖ ಮುಖ್ಯಾಂಶಗಳು

  • ನವನಗರದ ಯೂನಿಟ್ -2 ಸಮಸ್ಯೆಗಳ ಆಗರ
  • ಮುಗಿಯದ ಸಂತ್ರಸ್ತರ ಗೋಳು
  • ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ದೊಡ್ಡ ತ್ಯಾಗ ಮಾಡಿದ್ದಾರೆ
ಬಾಗಲಕೋಟೆ: ಬಸ್ ನಿಲ್ದಾಣ ಇದೆ, ಆದರೆ ಬಸ್ ಬರಲ್ಲ. ಸರ್ಕಾರಿ ಶಾಲೆ ಎಂದು ಹೆಸರು ಬರೆಯಲಾಗಿದೆ ಗಂಟೆ ಶಬ್ದ ಕೇಳಲ್ಲ. ಆರೋಗ್ಯ ಕೇಂದ್ರವಿದೆ ವೈದ್ಯರಿಲ್ಲ. ಹೇಳುವುದಕ್ಕೆ ಹೈಟೆಕ್ ಸಿಟಿ. ಆದರೆ ಮೂಲ ಸೌಕರ್ಯ ವಂಚಿತ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದೆ.
ಹೌದು. ಇದು ಜಿಲ್ಲಾ ಕೇಂದ್ರ ಬಾಗಲಕೋಟೆಯ ಮುಳುಗಡೆ ಸಂತ್ರಸ್ತರಿಗಾಗಿ ನಿರ್ಮಿಸಿದ ನವನಗರದ ಯೂನಿಟ್-2 ದುಸ್ಥಿತಿ. ಇಲ್ಲಿಯ ಜನತೆ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ದೊಡ್ಡ ತ್ಯಾಗ ಮಾಡಿದ್ದಾರೆ. ಅವರಿಗೆಲ್ಲ ಕಳೆದ ಒಂದು ದಶಕದಿಂದ ಹೈಟೆಕ್ ಸಿಟಿ ಎಂದು ಹೇಳಿ ಪುನರ್ವಸತಿ ಕಲ್ಪಿಸಲಾಗಿದೆ. ಆದರೆ ಎಲ್ಲದಕ್ಕೂ ಮೈಲಿ ದೂರ ನಡೆದುಕೊಂಡು ಹೋಗಬೇಕು ಎನ್ನುವುದೇ ದುರಂತ ಸಂಗತಿ.

45 ಸೆಕ್ಟರ್‌ಗಳಿಗಿಲ್ಲ ಸೌಲಭ್ಯ

ನವನಗರದ ಯೂನಿಟ್ ನಿರ್ಮಾಣಕ್ಕೆ ನೂರಾರು ಕೋಟಿ ರೂ. ವ್ಯಯಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ 519 ಮೀಟರ್ ನೀರು ನಿಲ್ಲಿಸಲಾಗಿದೆ. ಮಲೇರಿಯಾ ಪ್ರದೇಶ ಅಂತ ನೂರು ಮೀಟರ್ ಅಂತರ ೋಷಣೆ ಮಾಡಿ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. 2012-13 ಸಾಲಿನಿಂದ ಈ ವರೆಗೆ ಸಾವಿರಾರು ಸಂತ್ರಸ್ತರಿಗೆ ಹಕ್ಕು ಪತ್ರ ನೀಡಿ ಪುನರ್ವಸತಿ ಯೂನಿಟ್-2 ಕಲ್ಪಿಸಲಾಗಿದೆ. 45 ಸೆಕ್ಟರ್ ವ್ಯಾಪ್ತಿಯ ಈ ಪ್ರದೇಶದಲ್ಲಿ ಕನಿಷ್ಠ ಸೌಲಭ್ಯವೂ ಇಲ್ಲ ಎನ್ನುವುದೇ ಶೋಚನಿಯ ಸಂಗತಿ.
ಈ ಪ್ರದೇಶಕ್ಕೆ ಸರ್ಕಾರದಿಂದ ಒಂದೇ ಒಂದು ಬಸ್ ದಿನಕ್ಕೆ ಒಂದು ಸಾರಿಯೂ ಸಂಚರಿಸುವುದಿಲ್ಲ. ಕೋಟ್ಯಂತರ ರೂ. ಖರ್ಚುಮಾಡಿ ಪ್ರತಿ ಸೆಕ್ಟರ್‌ನಲ್ಲಿ ಬಸ್ ನಿಲ್ದಾಣ ನಿರ್ಮಿಸಿದ್ದರೂ ಸಹ ಉಪಯೋಗಕ್ಕೆ ಬಾರದಂತಾಗಿದೆ. ಕೆಲವು ಸೆಕ್ಟರ್‌ಗಳಲ್ಲಿ ಸರ್ಕಾರಿ ಶಾಲೆ ನಿರ್ಮಿಸಲಾಗಿದೆ. ಆದರೆ ಅಂಗನವಾಡಿಗಳು ಕೂಡಾ ಆರಂಭಿಸಿಲ್ಲ. ಆರೋಗ್ಯ ಕೇಂದ್ರಗಳು ಎಂದು ಬೋರ್ಡ್ ಇದ್ದರು ವೈದ್ಯರು, ಸಿಬ್ಬಂದಿಗಳು ಇಲ್ಲ. ಸ್ವಚ್ಛತೆ ನಿರ್ವಹಣೆ ದೇವರಿಗೇ ಪ್ರೀತಿ. ಎಲ್ಲೆಂದರಲ್ಲಿ ಕಸ ಬಿದ್ದಿದೆ. ರಸ್ತೆ ತುಂಬ ಮುಳ್ಳಿನ ಕಂಠಿ ಆವರಿಸಿದ್ದು, ಸಂಚರಿಸಲು ಕೂಡಾ ದುಸ್ತರ ಪರಿಸ್ಥಿತಿ ಎದುರಿಸುವಂತಾಗಿದೆ. ಇಲ್ಲಿ ವಾಸ ಮಾಡುವ ಸಂತ್ರಸ್ತರಿಗೆ ಅನಾಥ ಪ್ರಜ್ಞೆ ಕಾಡ ತೊಡಗಿದೆ.

ಅಧಿಕಾರಿಗಳ ನಿರ್ಲಕ್ಷೃ

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಎರಡು ವಿಭಾಗ, ಎಂಟು ಉಪ ವಿಭಾಗಗಳಿವೆ. ನವನಗರ ಯೂನಿಟ್-2 ನಿರ್ಲಕ್ಷ್ಯ ವಹಿಸಿದ್ದಾರೆ. ಕಸ ವಿಲೇವಾರಿ ಟೆಂಡರ್ ಕೂಡಾ ನೀಡುವುದಿಲ್ಲ. ಬಿಟಿಡಿಎ ಮುಖ್ಯ ಇಂಜಿನಿಯರ್ ಚಂದ್ರಹಾಸ ಬಂಡಿ ಸೇರಿ ಈ ವರೆಗೆ ಅಧಿಕಾರದಲ್ಲಿದ್ದ ಯಾವ ಮುಖ್ಯಸ್ಥರು ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಪತ್ರ ಬರೆದು ಬಸ್ ಸೌಕರ್ಯ, ಶಾಲೆ ಹಾಗೂ ಆಸ್ಪತ್ರೆ ಆರಂಭಕ್ಕೆ ಕೋರಿಲ್ಲ ಎನ್ನುವುದೇ ಬಹಳಷ್ಟು ನೋವಿನ ಸಂಗತಿ. ಸಂತ್ರಸ್ತರ ಬಗ್ಗೆ ಇಷ್ಟೊಂದು ಅಸಡ್ಡೆನಾ ? ಎನ್ನುವ ಪ್ರಶ್ನೆ ಕಾಡ ತೊಡಗಿದೆ.
"

ನವನಗರ ಯೂನಿಟ್-2 ಸಮಸ್ಯೆಗಳ ಬಗ್ಗೆ ಗಮನಕ್ಕೆ ಬಂದಿದೆ. ಸಾಕಷ್ಟು ಜನ ಸಂತ್ರಸ್ತರು ತಮ್ಮ ನೋವು ತೋಡಿಕೊಂಡಿದ್ದಾರೆ. ಸಂತ್ರಸ್ತರು ತ್ಯಾಗ ಜೀವಿಗಳು. ಬಸ್ ಸೌಕರ್ಯ, ಸರ್ಕಾರಿ ಶಾಳೆ, ಆಸ್ಪತ್ರೆ ಸೇರಿದಂತೆ ಕನಿಷ್ಠ ಸೌಲಭ್ಯ ಒದಗಿಸುವ ಕುರಿತು ಶೀಘ್ರಗತಿಯಲ್ಲಿ ಪ್ರಯತ್ನ ಮಾಡಲಾಗುವುದು.
-ಪ್ರಕಾಶ ತಪಶೆಟ್ಟಿ ಬಿಟಿಡಿಎ ಅಧ್ಯಕ್ಷ

"

ನವನಗರದ ಯೂನಿಟ್-2 ನಿವೇಶನ ಹಂಚಿಕೆ ಮಾಡಿದ ಬಳಿಕ ಸಂತ್ರಸ್ತರಿಗೆ ಕನಿಷ್ಠ ಸೌಲಭ್ಯಗಳು ದೊರೆಯುತ್ತಿಲ್ಲ. ಬಸ್, ಶಾಲೆ, ಆಸ್ಪತ್ರೆ ಯಾವುದೂ ಇಲ್ಲ. ಸ್ವಂತ ವಾಹನ ಮೇಲೆ ಅವಲಂಬನೆಯಾಗಬೇಕು. ಅದರಲ್ಲೂ ಮೈಲಿ ದೂರ ನಡೆದುಕೊಂಡು ಹೋಗಬೇಕು. ಬಿಟಿಡಿಎ ಅಧಿಕಾರಿಗಳು ಗಮನ ಹರಿಸಬೇಕು.
-ಸುರೇಶ ಮಜ್ಜಗಿ ಕಾರ್ಯದರ್ಶಿ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ, ಬಾಗಲಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net