ಸತ್ಯಾಗ್ರಹದ ಬಳಿಕವೂ ಸ್ಪಂದಿಸದ ಸರ್ಕಾರ

 ಬನಹಟ್ಟಿಯಲ್ಲಿ ನಡೆಯುತ್ತಿರುವ ಆಮರಣ ಉಪವಾಸ ಸತ್ಯಾಗ್ರಹದ ಎರಡನೇ ದಿನ ಸರದಿ ಉಪವಾಸದಲ್ಲಿ ಪಾಲ್ಗೊಂಡ ಜನರು. ಶಂಕರ ಸೊರಗಾವಿ, ಮಲ್ಲಿಕಾರ್ಜುನ ತುಂಗಳ ಇದ್ದರು.
ಬನಹಟ್ಟಿಯಲ್ಲಿ ನಡೆಯುತ್ತಿರುವ ಆಮರಣ ಉಪವಾಸ ಸತ್ಯಾಗ್ರಹದ ಎರಡನೇ ದಿನ ಸರದಿ ಉಪವಾಸದಲ್ಲಿ ಪಾಲ್ಗೊಂಡ ಜನರು. ಶಂಕರ ಸೊರಗಾವಿ, ಮಲ್ಲಿಕಾರ್ಜುನ ತುಂಗಳ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತರು, ನೇಕಾರರು, ಕಾರ್ಮಿಕರು, ವ್ಯಾಪಾರಿಗಳು, ಮಹಿಳೆಯರ ಬೆಂಬಲ
  • ಪ್ರತಿದಿನ ಏಳು ಮಂದಿ ಸತ್ಯಾಗ್ರಹಿಗಳು ಆಮರಣ ಉಪವಾಸದಲ್ಲಿ ಪಾಲ್ಗೊಳ್ಳುತ್ತಿದ್ದು, ಅವರ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.
  • 35 ದಿನಗಳ ಹೋರಾಟದ ಬಳಿಕವೂ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಆಮರಣ ಉಪವಾಸ ಅನಿವಾರ್ಯವಾಗಿದೆ ಎಂದು ಸತ್ಯಾಗ್ರಹಿ ಶಂಕರ ಸೊರಗಾವಿ ಹೇಳಿದರು.
ರಬಕವಿ/ ಬನಹಟ್ಟಿ : ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಿಸಬೇಕೆಂಬ ಬೇಡಿಕೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ 35 ದಿನ ಪೂರೈಸಿದರೂ ಸರ್ಕಾರದಿಂದ ಸ್ಪಷ್ಟ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಆರಂಭಿಸಿರುವ ಆಮರಣ ಉಪವಾಸ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಪ್ರಜಾಸೌಧಕ್ಕಾಗಿ ಪಾದಯಾತ್ರೆ, ಸತ್ಯಾಗ್ರಹ, ಅಹೋರಾತ್ರಿ ಧರಣಿ ಸೇರಿ ವಿವಿಧ ಹಂತಗಳಲ್ಲಿ ನಡೆದ ಹೋರಾಟಕ್ಕೆ ರೈತರು, ನೇಕಾರರು, ಕಾರ್ಮಿಕರು, ವ್ಯಾಪಾರಿಗಳು ಹಾಗೂ ಮಹಿಳೆಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳ ಜನರೂ ಲಿಖಿತ ಬೆಂಬಲ ನೀಡಿರುವುದು ಹೋರಾಟಕ್ಕೆ ವ್ಯಾಪಕ ಜನ ಬೆಂಬಲ ದೊರೆತಿರುವುದನ್ನು ತೋರಿಸಿದೆ.

ಏಳು ಮಂದಿ ಆಮರಣ ಉಪವಾಸ

ಪ್ರತಿದಿನ ಏಳು ಮಂದಿ ಸತ್ಯಾಗ್ರಹಿಗಳು ಆಮರಣ ಉಪವಾಸದಲ್ಲಿ ಪಾಲ್ಗೊಳ್ಳುತ್ತಿದ್ದು, ಅವರ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಉಪವಾಸ ಮುಂದುವರಿದಂತೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
35 ದಿನಗಳ ಹೋರಾಟದ ಬಳಿಕವೂ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಆಮರಣ ಉಪವಾಸ ಅನಿವಾರ್ಯವಾಗಿದೆ ಎಂದು ಸತ್ಯಾಗ್ರಹಿ ಶಂಕರ ಸೊರಗಾವಿ ಹೇಳಿದರು. ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಾಣವಾಗಬೇಕೆಂಬ ಬೇಡಿಕೆ ಪಕ್ಷ, ಜಾತಿ, ಧರ್ಮದ ಭೇದವಿಲ್ಲದೆ ಜನರ ಒಗ್ಗಟ್ಟಿನ ಹೋರಾಟವಾಗಿ ರೂಪುಗೊಂಡಿದೆ ಎಂದು ಅವರು ತಿಳಿಸಿದರು.
ಸತ್ಯಾಗ್ರಹಿಗಳ ಆರೋಗ್ಯ ಹದಗೆಟ್ಟ ಬಳಿಕ ಕ್ರಮ ಕೈಗೊಳ್ಳುವ ಬದಲು, ಸರ್ಕಾರ ಕೂಡಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಆ ಮೂಲಕ ಹೋರಾಟವನ್ನು ಅಂತ್ಯಗೊಳಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net