ಜಮಖಂಡಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಜಿಲ್ಲಾಧಿಕಾರಿ ಸಂಗಪ್ಪ ಭೆಟ್ಟಿ ನೀಡಿ ಪರಿಶಿಲಿಸಿದರು. ಎಸಿ ಶ್ವೇತಾ ಬೀಡಿಕರ, ತಹಸೀಲ್ದಾರ ಅನೀಲ ಬಡಿಗೇರ, ಡಾ. ವಾಸಣ್ಣ ಮುದಿಗೌಡರ, ಡಾ. ರಾಕೇಶ ಬಗಲಿ ಇತರರು ಇದ್ದರು.
ಜಮಖಂಡಿ: ನಗರದ ಸರ್ಕಾರಿ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬುಧವಾರ ಜಿಲ್ಲಾಧಿಕಾರಿ ಸಂಗಪ್ಪ ಎಂ. ಅವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ವೈದ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯ ದುಸ್ಥಿತಿಗೆ ಆಕ್ರೋಶ ವ್ಯಕ್ತಪಡಿಸಿ ಸರ್ಕಾರಿ ಆಸ್ಪತ್ರೆಗೆ ಬಡವರೇ ಹೆಚ್ಚಾಗಿ ಬರುತ್ತಾರೆ. ಅವರು ನಿಮ್ಮನ್ನು ದೇವರು ಎಂದು ನಂಬಿರುತ್ತಾರೆ, ನೀವು ರಾಕ್ಷಸರಾಗಬೇಡಿ. ರೋಗಿಗಳಿಗೆ ಉತ್ತಮ ಸೇವೆ ನೀಡಿ. ಸರ್ಕಾರ ನಿಮಗೆ ಉತ್ತಮ ವೇತನ ನೀಡುತ್ತಿದೆ. ಅದಕ್ಕೆ ತಕ್ಕಂತೆ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.
ಆಸ್ಪತ್ರೆ ಆವರಣದಲ್ಲಿನ ಅಶುಚಿತ್ವ ಹಾಗೂ ಸಾರ್ವಜನಿಕ ಶೌಚ ಗೃಹಗಳು ಭರ್ತಿಯಾಗಿರುವುದನ್ನು ಕಂಡು ಕೆರಳಿದ ಜಿಲ್ಲಾಧಿಕಾರಿಗಳು, ಸಂಬಂಧಪಟ್ಟವರಿಗೆ ಕೂಡಲೇ ನೋಟಿಸ್ ನೀಡಿ. ಇಲ್ಲದಿದ್ದರೆ ನಾನು ನಿಮಗೆ (ಮುಖ್ಯ ವೈದ್ಯಾಧಿಕಾರಿಗಳಿಗೆ) ನೋಟಿಸ್ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಹೆರಿಗೆ ಆಸ್ಪತ್ರೆಯ ಕೊಠಡಿಯಲ್ಲಿ ಸೂಕ್ತ ನಿಯಮಗಳ ಪಾಲನಾ ಲಕಗಳನ್ನು ಅಳವಡಿಸಲು ಸೂಚಿಸಿದರು.
ಗರ್ಭಿಣಿಯರಿಗೆ ಆಸ್ಪತ್ರೆಯಲ್ಲೇ ಸ್ಕಾೃನಿಂಗ್ ಸೌಲಭ್ಯ ಒದಗಿಸಬೇಕು. ಹೊರಗಡೆ ಸ್ಕಾೃನಿಂಗ್‌ಗೆ ಏಕೆ ಬರೆದು ಕಳುಹಿಸುತ್ತೀರಿ? ಎಂದು ಪ್ರಶ್ನಿಸಿದ ಅವರು, ಆಸ್ಪತ್ರೆಗೆ ಅಗತ್ಯವಿರುವ ಸ್ಕಾೃನಿಂಗ್ ಯಂತ್ರಗಳ ಬಗ್ಗೆ ಮಾಹಿತಿ ನೀಡಿದರೆ ಸರ್ಕಾರದಿಂದ ತರಿಸಿಕೊಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಜನರಿಕ್ ಔಷಧಿಗಳ ವಿತರಣೆಯಲ್ಲಿನ ಲೋಪಗಳ ಬಗ್ಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆ ಮುಖ್ಯದ್ವಾರದಲ್ಲಿ ಎಬಿಆರ್‌ಕೆ ಸಿಬ್ಬಂದಿಯನ್ನು ನೇಮಿಸಿ, ರೋಗಿಗಳಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು. ವಯೋವೃದ್ಧರು ನೆಲದ ಮೇಲೆ ಕುಳಿತಿರುವುದನ್ನು ಕಂಡು ಅಸಮಾಧಾನಗೊಂಡ ಡಿಸಿ, ರೋಗಿಗಳಿಗೆ ಆಸನ ಹಾಗೂ ಬಿಸಿಲು-ಮಳೆಯಿಂದ ರಕ್ಷಣೆ ಪಡೆಯಲು ಸೂರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಆಸ್ಪತ್ರೆ ಅವ್ಯವಸ್ಥೆಯ ನಡುವೆಯೂ 24 ಗಂಟೆಗಳ ಕಾಲ ರೋಗಿಗಳಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ಲ್ಯಾಬ್ ಟೆಕ್ನಿಷಿಯನ್ ವಿರೂಪಾಕ್ಷಯ್ಯ ವಿ. ಅವರ ಕರ್ತವ್ಯ ನಿಷ್ಠೆ ಡಿಸಿ ಶ್ಲಾಸಿದರು.
ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ್ ಅನೀಲ ಬಡಿಗೇರ, ಮುಖ್ಯ ವೈದ್ಯಾಧಿಕಾರಿ ಡಾ. ವಾಸಣ್ಣ ಮುದಿಗೌಡರ, ಡಾ. ರಾಕೇಶ ಬಗಲಿ, ಡಾ. ಕೃಷ್ಣಾ ಬಣ್ಣದ, ಡಾ. ಗಂಗಾಧರ, ಅಬುಬಕರ ಕುಡಚಿ ಉಪಸ್ಥಿತರಿದ್ದರು.