ನದಿ ತೀರದ ಎಡಭಾಗದಲ್ಲಿ ಪ್ಲಾಸ್ಟಿಕ್ ಚೀಲಗಳು, ಹೋಟೆಲ್ ಹಾಗೂ ಆಸ್ಪತ್ರೆ ತ್ಯಾಜ್ಯ ಹಾಗೂ ಮನೆ ಕಸವನ್ನು ಚೀಲಗಳಲ್ಲಿ ತುಂಬಿ ಅವ್ಯಾಹತವಾಗಿ ಸುರಿಯಲಾಗುತ್ತಿದೆ. ಗಾಳಿ ಬೀಸಿದಾಗ ಈ ಹಗುರವಾದ ಪ್ಲಾಸ್ಟಿಕ್ ತ್ಯಾಜ್ಯಗಳು ಹಾರಿ ನೇರವಾಗಿ ನದಿ ನೀರನ್ನು ಸೇರುತ್ತಿವೆ. ಅಷ್ಟೇ ಅಲ್ಲದೆ ಮಳೆಯಾದ ಸಂದರ್ಭದಲ್ಲಿ ತೀರದಲ್ಲಿ ರಾಶಿ ಬಿದ್ದಿರುವ ಕೊಳಕು ಕಸವೆಲ್ಲವೂ ನೀರಿನ ರಭಸಕ್ಕೆ ನದಿಯ ಒಡಲಿಗೆ ಕೊಚ್ಚಿ ಹೋಗುತ್ತಿದೆ. ಇದರಿಂದಾಗಿ ನದಿಯ ಪವಿತ್ರ ನೀರು ಕಲುಷಿತಗೊಳ್ಳುತ್ತಿರುವುದಲ್ಲದೆ, ಜಲಚರಗಳ ಜೀವಕ್ಕೂ ಕುತ್ತು ಬಂದೊದಗಿದೆ.