ಘಟಪ್ರಭೆಗೆ ಮತ್ತೆ ವಿಷಪ್ರಾಶನ

ಮುಧೋಳ ನಗರದ ಯಾದವಾಡ ರಸ್ತೆಯ ಸಿದ್ಧೇಶ್ವರ ಬ್ಯಾರೇಜ್ ಬಳಿ ಸಮೀಪ ಘಟಪ್ರಭೆ ನದಿಗೆ ಸೇರುತ್ತಿರುವ ಕಲುಷಿತ ನೀರು ಹಾಗೂ ಕಾಣಿಸಿಕೊಂಡಿರುವ ರಾಸಾಯನಿಕ ನೊರೆ.
ಮುಧೋಳ ನಗರದ ಯಾದವಾಡ ರಸ್ತೆಯ ಸಿದ್ಧೇಶ್ವರ ಬ್ಯಾರೇಜ್ ಬಳಿ ಸಮೀಪ ಘಟಪ್ರಭೆ ನದಿಗೆ ಸೇರುತ್ತಿರುವ ಕಲುಷಿತ ನೀರು ಹಾಗೂ ಕಾಣಿಸಿಕೊಂಡಿರುವ ರಾಸಾಯನಿಕ ನೊರೆ.
Published on

ಪ್ರಮುಖ ಮುಖ್ಯಾಂಶಗಳು

  • ಮುಧೋಳದಲ್ಲಿ ಪರಿಸರ ಮಾಲಿನ್ಯದ 'ನೊರೆ' ಆಟಕ್ಕೆ ಬ್ರೇಕ್ ಯಾವಾಗ ?
  • ಶಾಶ್ವತ ಪರಿಹಾರಕ್ಕೆ ಆಗ್ರಹ
  • ಜನರಲ್ಲಿ ಆರೋಗ್ಯ ಆತಂಕ, ಅಧಿಕಾರಿಗಳಿಂದ ಭರವಸೆ
ಡಾ.ವೆಂಕಟೇಶ ಗುಡೆಪ್ಪನವರ ಮುಧೋಳ
ನಗರದ ಜೀವನಾಡಿಯಾಗಿರುವ ಘಟಪ್ರಭಾ ನದಿ, ಇಂದು ಮತ್ತೊಮ್ಮೆ ರಸಾಯನಿಕಯುಕ್ತ ವಿಷಕಾರಿ ನೊರೆಯ ಅಟ್ಟಹಾಸಕ್ಕೆ ತುತ್ತಾಗಿದೆ. ಯಾದವಾಡ ರಸ್ತೆಯ ಸಿದ್ಧೇಶ್ವರ ಬ್ರಿಜ್ ಹಾಗೂ ಬ್ಯಾರೇಜ್ ಬಳಿ ರಾಜಾರೋಷವಾಗಿ ಹರಿಯುತ್ತಿರುವ ರಾಸಾಯನಿಕ ಮಿಶ್ರಿತ ಕಲುಷಿತ ನೀರು, ನದಿ ತಟದ ಜನರಿಗೆ 'ನರಕಯಾತನೆ'ಯನ್ನು ಉಣಬಡಿಸುತ್ತಿದೆ.
ಆರು ತಿಂಗಳ ಹಿಂದೆಯಷ್ಟೇ ಇದೇ ಸಮಸ್ಯೆ ಉಲ್ಬಣಿಸಿ, ಸರ್ಕಾರದ ಕೊಟ್ಯಂತರ ರೂಪಾಯಿ ವೆಚ್ಚದಲ್ಲಿ ತಡೆಗಟ್ಟಲಾಗಿತ್ತು. ಆದರೆ, ಇಂದು ಅದೇ ಸಮಸ್ಯೆ ಮರುಕಳಿಸಿದ್ದು, ಅಽಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ಮಾರಕ ರೋಗಗಳ ಭೀತಿ

ನದಿಯಲ್ಲಿ ಹರಿಯುವ ಬಿಳಿ ಬಣ್ಣದ ದಟ್ಟವಾದ ನೊರೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಚರಂಡಿ ಪೈಪ್‌ಗಳ ಮೂಲಕ ಹಸಿರು ಮತ್ತು ಬಿಳಿ ಮಿಶ್ರಿತ ಕೆಮಿಕಲ್ ನೀರು ನೇರವಾಗಿ ನದಿಯನ್ನು ಸೇರುತ್ತಿದ್ದು, ಜಲಚರಗಳು ಸಾವನ್ನಪ್ಪುತ್ತಿವೆ. ಜಾನುವಾರುಗಳಿಗೆ ಹಾಗೂ ದೈನಂದಿನ ಬಳಕೆಗೆ ಇದೇ ನೀರನ್ನು ಅವಲಂಬಿಸಿರುವ ಜನರು, ಚರ್ಮವ್ಯಾಽ ಸೇರಿ ಮಾರಕ ರೋಗಗಳ ಭೀತಿಯಲ್ಲಿ ಬದುಕುವಂತಾಗಿದೆ.

ಅಧಿಕಾರಿಗಳ ಜಾಣಮೌನ

ಈ ಗಂಭೀರ ಸಮಸ್ಯೆಯ ಬಗ್ಗೆ ಸಾರ್ವಜನಿಕರು ಮತ್ತು ಪರಿಸರ ಪ್ರೇಮಿಗಳು ಹಲವು ಬಾರಿ ದೂರು ನೀಡಿದರೂ, ಮುಧೋಳ ಪೌರಾಯುಕ್ತರು ಮತ್ತು ಸ್ಥಳೀಯ ಜನಪ್ರತಿನಿಽಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಹೋರಾಟ

ಆರು ತಿಂಗಳ ಹಿಂದೆ ದೊಡ್ಡ ಮೊತ್ತದ ಹಣ ವ್ಯಯಿಸಿ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದರೂ, ಸಮಸ್ಯೆ ಮೂಲದಿಂದಲೇ ಬಗೆಹರಿಯದಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸರ್ಕಾರದ ಭರವಸೆಗಳು ಕೇವಲ ಕಾಗದದ ಮೇಲೆ ಉಳಿದರೆ ಮುಂಬರುವ ದಿನಗಳಲ್ಲಿ ನಗರಸಭೆ ಕಚೇರಿಯ ಮುಂದೆ ಉಗ್ರ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಳ್ಳುವರೇ? ಅಥವಾ ಘಟಪ್ರಭೆಯ ಮರಣಶಾಸನಕ್ಕೆ ಸಾಕ್ಷಿಯಾಗುವರೇ ಎಂಬುವುದು ಕಾದು ನೋಡಬೇಕಿದೆ.
"

ನಮ್ಮ ಹಿರಿಯರು ಇದೇ ನದಿ ನೀರನ್ನು ಮಡಿ-ಮಡಿಯಾಗಿ ಬಳಸುತ್ತಿದ್ದರು, ಇದೇ ನೀರನ್ನು ಕುಡಿದು ಆರೋಗ್ಯವಂತರಾಗಿ ಬದುಕಿದ್ದರು. ಆದರೆ ಇಂದು ಆ ಪರಿಸ್ಥಿತಿ ತಲೆಕೆಳಗಾಗಿದೆ. ನದಿ ತೀರದಲ್ಲಿ ನಿಂತರೆ ಸಾಕು, ಮೂಗು ಮುಚ್ಚಿಕೊಳ್ಳುವಷ್ಟು ದುರ್ವಾಸನೆ, ಕಣ್ಣೆದುರೇ ಹರಿಯುವ ಬಿಳಿ ನೊರೆಯ ವಿಷದ ದೃಶ್ಯಗಳು ಎದೆ ನಡುಗಿಸುತ್ತವೆ. ಇಂದಿನ ಸ್ಥಿತಿ ಹೇಗಾಗಿದೆ ಎಂದರೆ, ನದಿಯ ನೀರನ್ನು ಮುಟ್ಟಲು ಕೂಡ ಭಯವಾಗುವ ಮಟ್ಟಕ್ಕೆ ಅದು ಕಲುಷಿತಗೊಂಡಿದೆ. ಮನುಷ್ಯರೇ ಅಲ್ಲ, ಪ್ರಾಣಿ-ಪಕ್ಷಿಗಳು ಕೂಡ ಈ ನೀರು ಕುಡಿಯಲು ಹಿಂದೇಟು ಹಾಕುತ್ತಿವೆ. ಅಂದಿನ ಜೀವನಾಡಿ, ಇಂದಿನ ಮರಣಶಾಸನವಾಗಿ ಬದಲಾಗುತ್ತಿರುವುದು ನಮ್ಮ ದುರ್ದೈವ.

— | ರಮೇಶ ಪೂಜಾರಿ, ಸ್ಥಳೀಯ ನಿವಾಸಿ
"

ನದಿ ಮಾಲಿನ್ಯದ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಒಳಚರಂಡಿ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸುವ ಕುರಿತು ಇಂಜಿನಿಯರ್‌ಗಳೊಂದಿಗೆ ಚರ್ಚಿಸಿ ತುರ್ತು ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಸಣ್ಣ ಕೈಗಾರಿಕಾ ತ್ಯಾಜ್ಯ ನೇರವಾಗಿ ನದಿಗೆ ಸೇರುತ್ತಿದ್ದರೆ, ಅಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆಯಲಾಗುವುದು.

— | ಎಂ.ಬಿ. ಹೊಸುರ, ಎಇಇ ನಗರಸಭೆ, ಮುಧೋಳ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net