ಗ್ಯಾಸ್‌ಟ್ರಬಲ್ ಸೌದೆ ಒಲೆಗೆ ಮೊರೆ...!

 ಕಲಾದಗಿಯಲ್ಲಿರುವ ಶ್ರೀಸಾಯಿ ಮಂದಿರ ಹೋಟೆಲ್‌ನಲ್ಲಿ ಸೌದೆ ಒಲೆ ಬಳಕೆ ಮಾಡುತ್ತಿರುವುದು.
ಕಲಾದಗಿಯಲ್ಲಿರುವ ಶ್ರೀಸಾಯಿ ಮಂದಿರ ಹೋಟೆಲ್‌ನಲ್ಲಿ ಸೌದೆ ಒಲೆ ಬಳಕೆ ಮಾಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ವಾಣಿಜ್ಯ ಬಳಕೆ ಸಿಲಿಂಡರ್ ವಿತರಣೆಯಲ್ಲಿ ವ್ಯತ್ಯಯ
  • ಹೋಟೆಲ್ ನಡೆಸುವುದೇ ಕಷ್ಟ ತಿಂಡಿಗಳ ಲಿಸ್ಟ್‌ಗೆ ಕತ್ತರಿ
  • ಪ್ಯಾನಿಕ್ ಆದ ಗ್ರಾಹಕರು
ಕಲಾದಗಿ: ಸೌದೆ ಒಲೆಯತ್ತ ಒಲವು ತೋರುತ್ತಿರುವ ಹೋಟೆಲ್‌ನವರು, ಸಿಲಿಂಡರ್ ವಿತರಣಾ ಕೇಂದ್ರಕ್ಕೆ ಮುಗಿಬಿದ್ದ ಗ್ರಾಹಕರು, ಹೋಟೆಲ್‌ಗಳಲ್ಲಿ ರಾರಾಜಿಸುತ್ತಿರುವ ಮನವಿ ಲಕಗಳು, ಮೊದಲಿನಂತೆ ಸಿಗುತ್ತಿಲ್ಲಾ ನಿಮಿಗಿಷ್ಟವಾದ ತಿಂಡಿ ತಿನಿಸುಗಳು, ಪರಿಸ್ಥಿತಿ ಯಾವಾಗ ಸರಿಯಾಗುತ್ತದೆ ಎಂದು ತಲೆ ಮೇಲೆ ಕೈ ಹೊತ್ತು ಕುಳಿತ ಹೋಟೆಲ್ ಮಾಲೀಕರು...!
ಇದು ಕಲಾದಗಿ ಗ್ರಾಮ, ಗದ್ದನಕೇರಿ ಕ್ರಾಸ್ ಸೇರಿ ಆಸುಪಾಸಿನ ಊರುಗಳಲ್ಲಿ ಕಾಣುತ್ತಿರುವ ‘ಗ್ಯಾಸ್ ಟ್ರಬಲ್’ನ ನಾನಾ ಮುಖಗಳು.
ಯುದ್ಧದಿಂದ ತಟ್ಟಿದ ಮನೆ ಬಳಕೆಯ ಹಾಗೂ ಕಮರ್ಷಿಯಲ್ ಬಳಕೆ ಸಿಲಿಂಡರ್‌ಗಳ ಅಭಾವ ಮೆಲ್ಲಗೆ ಈ ಭಾಗವನ್ನು ಆವರಿಸಿಕೊಳ್ಳುತ್ತಿದೆ. ಗ್ರಾಮದಲ್ಲಿರುವ ಶೆಟ್ಟರ್ ಇಂಡಿಯಲ್ ಸಿಲಿಂಡರ್ ವಿತರಣಾ ಕೇಂದ್ರದವರು ಮನೆಗಳ ಗ್ರಾಹಕರಿಗೆ ಸಿಲಿಂಡರ್‌ಗಳನ್ನು ವಿತರಿಸಲು ಹೈರಾಣಾಗುತ್ತಿರುವುದು ಕಳೆದೆರೆಡು ದಿನಗಳಿಂದ ಕಂಡು ಬಂದಿದೆ. ಇನ್ನು ಕಮರ್ಷಿಯಲ್ ಸಿಲಿಂಡರ್ ಸಿಗದೆ ಹೋಟೆಲ್‌ನವರು ಸೌದೆ ಒಲೆಗಳನ್ನು ಬಳಸಲು ಮುಂದಾಗಿದ್ದಾರೆ.

ಪ್ಯಾನಿಕ್ ಆದ ಗ್ರಾಹಕರು

ಗ್ರಾಮದಲ್ಲಿರುವ ಸಿಲಿಂಡರ್ ವಿತರಣಾ ಕೇಂದ್ರದಲ್ಲಿ ಮನೆ ಬಳಕೆಯ ಸಿಲಿಂಡರ್ ವಿತರಣೆಗೆ ಸಮಸ್ಯೆಯೇನೂ ಇಲ್ಲ. ಆದರೂ ಬರುವ ದಿನಗಳಲ್ಲಿ ಸಿಲಿಂಡರ್ ಸಿಗುತ್ತೋ? ಇಲ್ಲವೋ? ಎಂದು ಪ್ಯಾನಿಕ್ ಆಗಿರುವ ಗ್ರಾಹಕರು ಖಾಲಿ ಸಿಲಿಂಡರ್‌ನೊಂದಿಗೆ ವಿತರಣಾ ಕೇಂದ್ರಕ್ಕೆ ಮುಗಿಬೀಳುತ್ತಿದ್ದಾರೆ. ಸಿಲಿಂಡರ್ ಬುಕ್ಕಿಂಗ್ ಗಡುವನ್ನು 45 ದಿನ ಮಾಡಿರುವುದು, ಬುಕ್ಕಿಂಗ್‌ಗೆ ಸರ್ವರ್ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿರುವುದು ಗ್ರಾಹಕರಿಗೆ ತಲೆ ಬಿಸಿಯಾಗಿದೆ.

ತಿನಿಸುಗಳ ಲೀಸ್ಟ್ ಕಟ್ಟ್

ಕಮರ್ಷಿಯಲ್ ಸಿಲಿಂಡರ್‌ಗಳನ್ನು ವಿತರಣಾ ಕೇಂದ್ರದಲ್ಲಿ ಕೊಡುತ್ತಿಲ್ಲ. ಆದ್ದರಿಂದ ಒಂದಿಷ್ಟು ಹೋಟೆಲ್ ಮಾಲೀಕರು ಹೆಚ್ಚಿಗೆ ಹಣ ಕೊಟ್ಟು ಕಮರ್ಷಿಯಲ್ ಸಿಲಿಂಡರ್ ತರುವ ಅನಿವಾರ್ಯತೆಗೆ ಒಳಗಾಗಿದ್ದರೆ, ಇನ್ನು ಕೆಲವು ಮಾಲೀಕರು ಸೌದೆ ಹಾಗೂ ವಿದ್ಯುತ್ ಒಲೆಗಳ ಬಳಕೆಗೆ ಮುಂದಾಗಿದ್ದಾರೆ.
ಜೊತೆಗೆ ತಮ್ಮಲ್ಲಿ ಸಿಗುತ್ತಿದ್ದ ತಿನಿಸುಗಳ ಲಿಸ್ಟ್‌ಗೆ ಹೋಟೆಲ್‌ನವರು ಕತ್ತರಿ ಹಾಕಿದ್ದು, ಮೂರ‌್ನಾಲ್ಕು ತಿನಿಸುಗಳನ್ನು ಹಾಗೂ ಟೀ, ಕಾಫಿ ಮಾಡುವುದಕ್ಕಷ್ಟೇ ಸೀಮಿತವಾಗಿಸಿದ್ದಾರೆ. ‘ಗ್ಯಾಸ್ ಸಮಸ್ಯೆಇದೆ ಸಹಕರಿಸಿ’ ಎಂಬ ಮನವಿಯ ಲಕಗಳು ಹೋಟೆಲ್‌ಗಳಲ್ಲಿ ರಾರಾಜಿಸುತ್ತಿವೆ.
ಈಗ ಬರುತ್ತಿರುವ ಸುದ್ದಿಗಳನ್ನು ಗಮನಿಸುತ್ತಿದ್ದರೆ ಯುದ್ಧ ನಿಲ್ಲುವ ಲಕ್ಷಣಗಳಿಲ್ಲ ಎಂಬುದೇ ಎಲ್ಲರ ತಲೆ ಬಿಸಿಯಾಗಿದ್ದು, ಮುಂದೆ ಈ ಸಿಲಿಂಡರ್ ಸಮಸ್ಯೆ ತಂದೊಡ್ಡುತ್ತದೆಯೋ? ಎಂಬ ಚಿಂತೆ ಜನರನ್ನು ಸೇರಿ ಹೋಟೆಲ್‌ಗಳ ಮಾಲೀಕರ ನಿದ್ದೆಗೆಡಿಸಿದೆ.
"

ಕಮರ್ಷಿಯಲ್ ಸಿಲಿಂಡರ್ ಸಿಗದಿರುವುದರಿಂದ ನಮ್ಮೆಲ್ಲಾ ಹೋಟೆಲ್‌ಗಳಿಂದ ನಿತ್ಯ 30 ಸಾವಿರದಷ್ಟು ನಷ್ಟವಾಗುತ್ತಿದೆ. ಗ್ರಾಹಕರು ಕೇಳಿದ ಎಲ್ಲ ತಿನಿಸುಗಳನ್ನು ಮೊದಲಿನಂತೆ ಕೊಡಲಾಗುತ್ತಿಲ್ಲ. ಮೂರ‌್ನಾಲ್ಕು ತಿನಿಸುಗಳನ್ನು ಹಾಗೂ ಟಿ, ಕಾಫಿಯನ್ನಷ್ಟೇ ಮಾಡುವುದು ಅನಿವಾರ್ಯ. ಬಹುತೇಕ ಹೋಟೆಲ್‌ನವರ ಸ್ಥಿತಿ ಇದಕ್ಕಿಂತೇನು ಹೊರತಾಗಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಹೋಟೆಲ್‌ಗಳನ್ನು ಪರಿಸ್ಥಿತಿ ಸರಿಯಾಗುವವರೆಗೂ ಮುಚ್ಚುವುದು ಅನಿವಾರ್ಯವಾಗುತ್ತದೆ.-ಪವನ ಸಿಮೀಕೇರಿ, ಪಕ್ವಾನ ಹೋಟೆಲ್ ಮಾಲೀಕರು, ಬಾಗಲಕೋಟೆ

"

ಗ್ರಾಹಕರು ಬರುವ ದಿನಗಳಲ್ಲಿ ಸಿಲಿಂಡರ್ ಸಿಗುತ್ತೋ ಇಲ್ಲವೋ ಎಂದು ಪ್ಯಾನಿಕ್ ಆಗಿದ್ದರಿಂದ ಸಿಲಿಂಡರ್ ಒಯ್ಯಲು ಮುಗಿಬೀಳುತ್ತಿದ್ದಾರೆ. ಮೊದಲು ಬರುತ್ತಿದ್ದ ಸಿಲಿಂಡರ್‌ಗಳ ಪ್ರಮಾಣದಲ್ಲಿ ಅರ್ಧದಷ್ಟು ಪ್ರಮಾಣದ ಸಿಲಿಂಡರ್‌ಗಳು ಬರುತ್ತಿದ್ದು ಅಂತಹ ಸಮಸ್ಯೆ ಸದ್ಯಕ್ಕಿಲ್ಲ. ಕಮರ್ಷಿಯಲ್ ಸಿಲಿಂಡರ್ ಪರಿಸ್ಥಿತಿ ಸರಿಯಿಲ್ಲ. ಗೃಹ ಬಳಕೆ ಸಿಲಿಂಡರ್ ಗ್ರಾಹಕರು ಪ್ಯಾನಿಕ್ ಆಗಬಾರದಾಗಿ ಮನವಿ.
-ಎಂ.ಪಿ. ಶೆಟ್ಟರ್, ಮಾಲೀಕರು, ಇಂಡಿಯನ್ ಸಿಲಿಂಡರ್ ವಿತರಣಾ ಕೇಂದ್ರ, ಕಲಾದಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net