ಜಮಖಂಡಿ ನಗರದ ಕಾನಿಪ ಪತ್ರಿಕಾ ಭವನದಲ್ಲಿ ಸ್ವಾತಂತ್ರ್ಯ ಸೇನಾನಿ ಪದ್ಮಾವತಿಬಾಯಿ ವಾಮನರಾಯ ದೇಸಾಯಿಯವರ ಭಾವಚಿತ್ರ ಮತ್ತು ತಾಮ್ರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಹಿರಿಯ ಸಾಹಿತಿ ಡಾ. ತಾತಾಸಾಹೇಬ ಬಾಂಗಿ, ಸಂತೋಷ ತಳಕೇರಿ, ಕ್ಯಾ. ಗಿರಿಮಲ್ಲಪ್ಪ ಹಂಚಿನಾಳ, ಬಸವರಾಜ ನಾಗಮೋತಿ ಮತ್ತಿತರರು ಉಪಸ್ಥಿತರಿದ್ದರು.
ಪದ್ಮಾವತಿಬಾಯಿ ವಾಮನರಾಯ ದೇಸಾಯಿ ಈ ನಾಡಿನ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಹೋರಾಟಗಾರ್ತಿ.
ಜಮಖಂಡಿ : ಇತಿಹಾಸದಲ್ಲಿ ತಕ್ಕ ಸ್ಥಾನ ಪಡೆಯಬೇಕಿದ್ದ ಪದ್ಮಾವತಿಬಾಯಿ ವಾಮನರಾಯ ದೇಸಾಯಿ ಅವರು ಇತಿಹಾಸಕಾರರ ಗಮನಕ್ಕೆ ಸರಿಯಾಗಿ ಬಾರದ ಕಾರಣ ಸ್ವಾತಂತ್ರ್ಯ ಸೇನಾನಿ ಎಂಬ ಗೌರವದಿಂದ ವಂಚಿತರಾಗಿದ್ದಾರೆ ಎಂದು ಹಿರಿಯ ಸಾಹಿತಿ ಡಾ. ತಾತಾಸಾಹೇಬ ಬಾಂಗಿ ಹೇಳಿದರು.
ನಗರದ ಕಾನಿಪ ಸಂಘದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮಖಂಡಿ ಮೂಲದ ಪದ್ಮಾವತಿಬಾಯಿ ವಾಮನರಾಯ ದೇಸಾಯಿ ಈ ನಾಡಿನ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಹೋರಾಟಗಾರ್ತಿ. ಅವರ ಜೀವನ ಸಾಧನೆಯನ್ನು ಸಮಾಜಕ್ಕೆ ಪರಿಚಯಿಸುವುದು ನಮ್ಮ ಕರ್ತವ್ಯವಾಗಿದ್ದು, ಈ ಉದ್ದೇಶದಿಂದ ಸಂಶೋಧನಾ ಕತಿ ರಚಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂತೋಷ ತಳಕೇರಿ ಮಾತನಾಡಿ, ನಗರದ ಬಸವ ಭವನದಲ್ಲಿ ಮಾ. 29ರಂದು ಬೆಳಗ್ಗೆ 10 ಗಂಟೆಗೆ ಹಿಂದೂಸ್ತಾನಿ ಸೇವಾದಳ ಟ್ರಸ್ಟ್ (ಬಾಗಲಕೋಟೆ), ಪದ್ಮಾವತಿಬಾಯಿ ಅಭಿಮಾನಿ ಬಳಗ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಡಾ. ತಾತಾಸಾಹೇಬ ಬಾಂಗಿ ಅವರ ಕತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಮೂಲಸಿದ್ಧೇಶ್ವರ ಸಿದ್ಧಕ್ಷೇತ್ರದ ಸಿದ್ಧಮುತ್ಯಾ ಸಾನ್ನಿಧ್ಯ ವಹಿಸಲಿದ್ದು, ಪದ್ಮಾವತಿಬಾಯಿ ದೇಸಾಯಿ ಅವರ ಮೊಮ್ಮಗ, ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಮನೋಜ ಪಾಟೀಲ ಉದ್ಘಾಟಿಸುವರು. ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನಿವತ್ತ ಕುಲಪತಿ ಪ್ರೋ. ಮೀನಾ ಚಂದಾವರಕರ ಕತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಸಾಹಿತಿ ಡಾ. ವೈ.ಎಂ. ಯಾಕೊಳ್ಳಿ ಕತಿ ಪರಿಚಯ ಮಾಡಿಕೊಡುವರು. ಡಾ. ಪ್ರಲ್ಹಾದ ದಾಮೋದರ ಹುಲ್ಯಾಳಕರ ಹಾಗೂ ಡಾ. ಪ್ರಕಾಶ ಬಾಳಾದಿಕ್ಷಿತ ಹೊನವಾಡ ಅವರನ್ನು ಗೌರವಿಸಲಾಗುವುದು.
ಮಹಾದೇವ ಬಸರಕೋಡ, ಸವಿತಾಲಕ್ಷ್ಮೀ ಬೆಳಗಲಿ, ಡಾ. ಎ.ಬಿ. ವಗ್ಗರ, ಕೆ. ಚನ್ನಬಸಪ್ಪ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕ್ಯಾ. ಗಿರಿಮಲ್ಲಪ್ಪ ಹಂಚಿನಾಳ, ಬಸವರಾಜ ನಾಗಮೋತಿ, ಶ್ರೀಪಾದ ಹೊನವಾಡ ಉಪಸ್ಥಿತರಿದ್ದರು.