ನಕಲಿ ಬಾಡಿಗೆದಾರರಿಗೆ ಉಚಿತ ನಿವೇಶನ ಹಂಚಿಕೆ..!

 ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಆರ್‌ಒ ಕಾರ್ಯಾಲಯದ ಮೇಲೆ ಗುರುವಾರ ದಾಳಿ ನಡೆಸಿದ ಲೋಕಾ ಅಧಿಕಾರಿಗಳು ನಕಲಿ ಬಾಡಿಗೆದಾರರಿಗೆ ಉಚಿತ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ ದಾಖಲೆ ಪರಿಶೀಲಿಸುತ್ತಿರುವುದು.
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಆರ್‌ಒ ಕಾರ್ಯಾಲಯದ ಮೇಲೆ ಗುರುವಾರ ದಾಳಿ ನಡೆಸಿದ ಲೋಕಾ ಅಧಿಕಾರಿಗಳು ನಕಲಿ ಬಾಡಿಗೆದಾರರಿಗೆ ಉಚಿತ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ ದಾಖಲೆ ಪರಿಶೀಲಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬಿಟಿಡಿಎ ಸಿಇ, ಆರ್‌ಒ ಕಚೇರಿ ಮೇಲೆ ಲೋಕಾ ದಾಳಿ
  • ಬೆಳಕಿಗೆ ಬಂತು ಬಿಟಿಡಿಎ ಕರ್ಮಕಾಂಡ
  • 2011 ರಿಂದ 2017ರ ಅವಧಿಯಲ್ಲಿ ನಡೆದಿದ್ದ ಘಟನೆ
ಬಾಗಲಕೋಟೆ: ಮುಳುಗಡೆಯ ಬಾಗಲಕೋಟೆ ಪಟ್ಟಣದಲ್ಲಿ ಬಾಡಿಗೆದಾರರು ಅಲ್ಲದಿದ್ದರೂ ಬಾಡಿಗೆದಾರರಂದು ದಾಖಲೆ ಸೃಷ್ಟಿಸಿ ಬಿಟಿಡಿಎಯಿಂದ ಉಚಿತ ನಿವೇಶನ ಹಂಚಿಕೆ ಮಾಡಲಾಗಿದೆ ಎನ್ನುವ ಆರೋಪಗಳಿಗೆ ಕೇಳಿ ಬರುತ್ತಲೇ ಇದ್ದವು.
ಇದಕ್ಕೆ ಸಂಬಂಧಿಸಿದಂತೆ ಗುರುವಾರ ಬಾಗಲಕೋಟೆ ಲೋಕಾಯುಕ್ತರು ಬಿಟಿಡಿಎ ಸಿಇ ಮತ್ತು ಆರ್‌ಒ ಕಚೇರಿ ಮೇಲೆ ದಾಳಿ ನಡೆಸಿ, ದಾಖಲೆ ಪರಿಶೀಲಿಸಿದಾಗ 13 ಜನ ನಕಲಿ ಬಾಡಿಗೆದಾರರಿಗೆ ಉಚಿತ ನಿವೇಶನ ಹಂಚಿಕೆ ಮಾಡಿರುವ ದಾಖಲೆಗಳನ್ನು ಪತ್ತೆ ಮಾಡಿದ್ದಾರೆ.
ಆರ್‌ಒ ಮತ್ತು ಸಿಇ ಕಚೇರಿಯಲ್ಲಿ 50ಕ್ಕೂ ಹೆಚ್ಚು ಫೈಲ್‌ಗಳನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತರು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ನಕಲಿ ಬಾಡಿಗೆದಾರರಿಗೆ ಉಚಿತ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ ತನಿಖೆಯನ್ನು ಕೈಗೊಂಡಿದ್ದಾರೆ.

17 ನಕಲಿ ಬಾಡಿಗೆದಾರರ ಬಗ್ಗೆ ದೂರು

ಆಲಮಟ್ಟಿ ಜಲಾಶಯದ ಹಿನ್ನೀರಿಗೆ 521 ಮೀ. ನಿಂದ 523 ಮೀಟರ್ ವರೆಗೆ ಮುಳುಗಡೆ ಆಗುವ ಬಾಗಲಕೋಟೆ ಪಟ್ಟಣ ಪ್ರದೇಶಕ್ಕೆ ಸಂಬಂಧಿಸಿದಂತೆ 2011 ರಿಂದ 2017 ರ ಅವಧಿಯಲ್ಲಿ ಬಾಡಿಗೆದಾರರು ಅಲ್ಲದಿದ್ದರೂ 17 ಜನ ನಕಲಿ ಬಾಡಿಗೆದಾರರಿಗೆ ಬಿಟಿಡಿಎ ವತಿಯಿಂದ ಸಂತ್ರಸ್ತರಿಗೆ ಹಂಚಿಕೆ ಮಾಡುವ ಉಚಿತ ನಿವೇಶನಗಳನ್ನು ವಿತರಿಸಿದ್ದಾರೆ. ಇದರಿಂದ ಸರ್ಕಾರಕ್ಕೆ 1,44,77000 ರೂ. ಗಳ ನಷ್ಟು ಉಂಟು ಮಾಡಿದ್ದಾರೆಂದು ಸಂತೋಷಕುಮಾರ ಹುಡೇದ ಎನ್ನುವವರು ದೂರು ಸಲ್ಲಿಸಿದ್ದರು.
ದೂರಿಗೆ ಸಂಬಂಧಿಸಿದಂತೆ ಬಾಗಲಕೋಟೆ ಲೋಕಾ ಅಧಿಕಾರಿಗಳು ಬಿಟಿಡಿಎಇ ಮುಖ್ಯ ಅಭಿಯಂತರರ ಕಾರ್ಯಾಲಯ ಮತ್ತು ಪುನರ್ವಸತಿ ಅಧಿಕಾರಿಗಳ ಕಾರ್ಯಾಲಯ ಶೋಧನೆ ಮಾಡಲು ಪ್ರಧಾನ ಜಿಲ್ಲಾ ಸತ್ರ ಹಾಗೂ ವಿಶೇಷ ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದುಕೊಂಡು ಗುರುವಾರ ಲೋಕಾಯುಕ್ತ ಡಿಎಸ್ಪಿ ಸುರೇಶ ರೆಡ್ಡಿ ಹಾಗೂ ಮೂವರು ಪೊಲೀಸ್ ನಿರೀಕ್ಷಕರ ತಂಡವೂ ಬಿಟಿಡಿಎ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪತ್ತೆ ಮಾಡಿದ್ದಾರೆ. ದಾಳಿಯಲ್ಲಿ ಬಾಗಲಕೋಟೆ ಮತ್ತು ವಿಜಯಪುರ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net