ಕ್ರಾಂತಿಕಾರಿ ಶರಣರ ವಚನಗಳ ಆಶಯ ಪಾಲಿಸಿ

 ಮುಧೋಳದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಉದ್ಘಾಟಿಸಿದರು. ಸಂಸದ ಪಿ.ಸಿ. ಗದ್ದಿಗೌಡರ, ಬಸವಲಿಂಗ ಮಹಾಸ್ವಾಮಿಗಳು, ಸದಾಶಿವ ಹೊಸಮನಿ ಇತರರಿದ್ದರು.
ಮುಧೋಳದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಉದ್ಘಾಟಿಸಿದರು. ಸಂಸದ ಪಿ.ಸಿ. ಗದ್ದಿಗೌಡರ, ಬಸವಲಿಂಗ ಮಹಾಸ್ವಾಮಿಗಳು, ಸದಾಶಿವ ಹೊಸಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿಕೆ
  • ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಶರಣ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು
  • ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ
ಮುಧೋಳ: ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಶರಣ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ಇಂದಿನ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಶಕ್ತಿ ಹೊಂದಿವೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ನಗರದ ಶಿವಶರಣ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬಿಗರ ಚೌಡಯ್ಯನವರು ನೇರ ಮತ್ತು ನಿಷ್ಠೂರ ನಡೆ-ನುಡಿಗೆ ಹೆಸರಾದವರು. ಅವರ ವಚನಗಳು ಕೇವಲ ಸಾಹಿತ್ಯವಲ್ಲ. ಅವು ಸಮಾನತೆಯ ಸಮಾಜ ನಿರ್ಮಾಣದ ದಾರಿದೀಪಗಳು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಗೌರವಯುತ ಜೀವನ ನಡೆಸಬೇಕೆಂಬ ಆಶಯ ಶರಣರದಾಗಿತ್ತು. ಸರ್ಕಾರವು ಕೂಡ ಗಂಗಾಮತಸ್ಥ ಸಮುದಾಯದ ಅಭಿವೃದ್ಧಿಗೆ ಬದ್ಧವಾಗಿದ್ದು, ಅಂಬಿಗರ ಚೌಡಯ್ಯ ನಿಗಮದ ಮೂಲಕ ವಿವಿಧ ಸೌಲಭ್ಯಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದೆ ಎಂದರು.
ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಸಮಾಜದ ಅಭಿವೃದ್ಧಿ ಕೇವಲ ಆಚರಣೆಗಳಿಂದ ಸಾಧ್ಯವಿಲ್ಲ, ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಸಮಾಜದ ಯುವಜನತೆ ಕಾಯಕಯೋಗಿ ಅಂಬಿಗರ ಚೌಡಯ್ಯನವರ ಸ್ಫೂರ್ತಿ ಪಡೆದು ಶೈಕ್ಷಣಿಕ, ಆರ್ಥಿಕವಾಗಿ ಸದೃಢರಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಸಮಾಜವು ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.
ಸಮಾಜದ ಅಧ್ಯಕ್ಷ ಸದಾಶಿವ ಹೊಸಮನಿ ಮಾತನಾಡಿ, ಮುಧೋಳ ತಾಲೂಕಿನಲ್ಲಿ ಗಂಗಾಮತಸ್ಥ ಸಮಾಜವು ಸಂಘಟಿತವಾಗಿ ಬೆಳೆಯುತ್ತಿದೆ. ಸಮಾಜದ ಶೈಕ್ಷಣಿಕ ಉನ್ನತಿಗಾಗಿ ಸಮುದಾಯ ಭವನದ ಮೇಲ್ದರ್ಜೆಗೆ ಏರಿಸಲು ಹಾಗೂ ವಿದ್ಯಾರ್ಥಿ ನಿಲಯದ ನಿರ್ಮಾಣಕ್ಕೆ ಸರ್ಕಾರವು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಶಿರೂರು ಚಿತ್ತರಗಿ ವಿಜಯ ಮಹಾಂತೇಶ್ವರ ತೀರ್ಥದ ಡಾ. ಬಸವಲಿಂಗ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಸಮಾಜದ ಅಧ್ಯಕ್ಷ ಸದಾಶಿವ ಹೊಸಮನಿ, ಸರ್ಕಾರಿ ಅಂಬಿಗರ ಸಮಾಜದ ಅಧ್ಯಕ್ಷ ಪುಂಡಲೀಕ ಕರೇಣಿ, ನಾಗಪ್ಪ ಅಂಬಿ, ಮುದಕಣ್ಣ ಅಂಬಿಗೇರ, ಚಿನ್ನು ಅಂಬಿ, ಸದುಗೌಡ ಪಾಟೀಲ, ಅಶೋಕ ಕಿವಡಿ, ಭೀಮಸಿ ಹುನ್ನೂರ, ಸಾವಿತ್ರಿ ಮೂಲಿಮನಿ, ಗೋವಿಂದ ರಾಠೋಡ, ಎಚ್.ಎಂ.ಪಾಟೀಲ, ರಮೇಶ ನಿಡೋಣಿ, ಕೃಷ್ಣಾ ಕಟ್ಟಿಮನಿ, ಮಲ್ಲಿಕಾರ್ಜುನ ಅಂಬಿಗೇರ ಇತರರಿದ್ದರು.

ಮೆರವಣಿಗೆಯ ವೈಭವ

ಕಾರ್ಯಕ್ರಮಕ್ಕೂ ಮುನ್ನ ನಗರದ ಆರ್.ಎಂ.ಜಿ. ಕಾಲೇಜು ಮೈದಾನದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಅಂಬಿಗರ ಚೌಡಯ್ಯನವರ ಹಾಗೂ ಗಂಗಾಮಾತೆಯ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಕಲಾತಂಡಗಳ ಪ್ರದರ್ಶನ ಮೆರವಣಿಗೆಗೆ ಕಳೆ ತಂದಿತ್ತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net