ಮುಧೋಳ ತಾಲೂಕಿನ ಕಸಬಾಜಂಬಗಿ ಗ್ರಾಮದಲ್ಲಿ ಎಸ್.ಆರ್. ಕಂಠಿ ಪದವಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕಗಳ ಆಶ್ರಯದಲ್ಲಿ ನಡೆದ ವಾರ್ಷಿಕ ವಿಶೇಷ ಸೇವಾ ಶಿಬಿರದ ಸಮಾರೋಪದಲ್ಲಿ ಪ್ರಾಚಾರ್ಯ ಎಸ್.ಎಂ. ಹಾದಿಮನಿ ಮಾತನಾಡಿದರು. ಡಾ. ಎಂ.ಆರ್. ಜರಕುಂಟಿ, ಗುರಯ್ಯ ಕಲಾದಗಿಮಠ, ಎ.ಡಿ. ನದಾಫ್, ಸಿ.ಎಸ್. ಹಿರೇಮಠ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆ ಕೇವಲ ಏಳು ದಿನಗಳ ಶಿಬಿರಕ್ಕೆ ಸೀಮಿತವಲ್ಲ.
ಮುಧೋಳ: ರಾಷ್ಟ್ರೀಯ ಸೇವಾ ಯೋಜನೆ ಕೇವಲ ಏಳು ದಿನಗಳ ಶಿಬಿರಕ್ಕೆ ಸೀಮಿತವಲ್ಲ. ಅದು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ವ್ಯಕ್ತಿತ್ವ ನಿರ್ಮಾಣದ ಪಾಠಶಾಲೆಯಾಗಿದೆ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಸ್.ಎಂ. ಹಾದಿಮನಿ ಹೇಳಿದರು.
ತಾಲೂಕಿನ ಕಸಬಾಜಂಬಗಿ ಗ್ರಾಮದಲ್ಲಿ ಎಸ್.ಆರ್. ಕಂಠಿ ಪದವಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ-1 ಮತ್ತು 2ರ ಆಶ್ರಯದಲ್ಲಿ ನಡೆದ ಏಳು ದಿನಗಳ ವಾರ್ಷಿಕ ವಿಶೇಷ ಸೇವಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ. ವಿದ್ಯಾರ್ಥಿಗಳು ಇವುಗಳಿಂದ ದೂರವಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನಹರಿಸಬೇಕು ಎಂದರು.
ಗ್ರಾಮೀಣ ಭಾಗದ ಪ್ರತಿಭೆಗಳು ಐಎಎಸ್, ಕೆಎಎಸ್ ಸೇರಿ ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗ ಮಾತ್ರ ಜನಪರ ಆಡಳಿತ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಆರ್. ಜರಕುಂಟಿ ಮಾತನಾಡಿ, ದೊಡ್ಡ ಸ್ಥಾನಗಳನ್ನು ಗಳಿಸುವುದಕ್ಕಿಂತ ಉತ್ತಮ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸುಸಂಸ್ಕೃತ ನಾಗರಿಕರಾಗುವುದು ಮುಖ್ಯ ಎಂದು ಹೇಳಿದರು. ಶಿಬಿರದಲ್ಲಿ ಬೆಳೆಸಿಕೊಂಡ ಸೇವಾ ಮನೋಭಾವ ಜೀವನಪೂರ್ತಿ ಉಳಿಯಲಿ ಎಂದು ಆಶಿಸಿದರು.
ಸರ್ಕಾರಿ ಶಾಲೆ ಮುಖ್ಯೋಪಾಧ್ಯಾಯ ಎ.ಡಿ. ನದಾಫ್ ಹಾಗೂ ಬಸವೇಶ್ವರ ಪ್ರೌಢಶಾಲೆ ಶಿಕ್ಷಕ ಸಿ.ಎಸ್. ಹಿರೇಮಠ ಶಿಕ್ಷಣದ ಜತೆಗೆ ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ಜಂಟಿಯಾಗಿ ವಿವರಿಸಿದರು.
ಗುರಯ್ಯ ಕಲಾದಗಿಮಠ ಆಶೀರ್ವಚನ ನೀಡಿದರು. ಶಿಬಿರಕ್ಕೆ ಸಹಕರಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಮಲ್ಲಪ್ಪ ತೇಲಿ, ಆರ್.ಬಿ. ಜೋಶಿ, ಎಸ್.ಆರ್. ನಾಯಕ ಸೇರಿ ಇತರರು ಉಪಸ್ಥಿತರಿದ್ದರು.
ಪಿ.ಡಿ. ಕುಂಬಾರ ಸ್ವಾಗತಿಸಿದರು. ಪ್ರೊ. ಎ.ಎಚ್. ಹಿರೇಮಠ ವರದಿ ವಾಚಿಸಿದರು. ಡಾ. ಲೋಕೇಶ ರಾಠೋಡ ವಂದಿಸಿದರು.