ರಬಕವಿ ಮಹಿಷವಾಡಗಿ ಸೇತುವೆ ಕಾಮಗಾರಿ ವಿಳಂಬ ವಿರೋಧಿಸಿ ರಬಕವಿ ಶಂಕರಲಿಂಗ ದೇವಸ್ಥಾನ ಎದುರು ನಡೆಯುತ್ತಿರುವ ಹೋರಾಟ ಸ್ಥಳಕ್ಕೆ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಎಂಡಿ ಸುಶೀಲಮ್ಮ ಮಾತನಾಡಿದರು. ಡಾ. ರವಿ ಜಮಖಂಡಿ, ಡಾ. ಪದ್ಮಜೀತ ನಾಡಗೌಡ ಪಾಟೀಲ, ಸತೀಶ ಹಜಾರೆ, ಸಂಜು ತೆಗ್ಗಿ ಇದ್ದರು.
ರಬಕವಿ-ಬನಹಟ್ಟಿ: ರಬಕವಿ ಮಹಿಷವಾಡಗಿ ಸೇತುವೆ ಕಾಮಗಾರಿ ಕೂಡಲೇ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಆರಂಭವಾಗಿರುವ ಉಪವಾಸ ಸತ್ಯಾಗ್ರಹ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟ ಹಿಂಪಡೆಯುವಂತೆ ಅಧಿಕಾರಿಗಳು ಮನವೊಲಿಸಿದರು ಹೋರಾಟಗಾರರು ತಮ್ಮ ಪಟ್ಟು ಸಡಿಲಿಸಲಿಲ್ಲ.
ಇಲ್ಲಿನ ಶಂಕರಲಿಂಗ ದೇವಸ್ಥಾನ ಎದುರು ನಡೆಯುತ್ತಿರುವ ಹೋರಾಟ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಎಂ.ಡಿ. ಸುಶೀಲಮ್ಮ ಮಾತನಾಡಿ, ಸೇತುವೆ ಕಾಮಗಾರಿ ಕೂಡಲೇ ಪ್ರಾರಂಭಿಸಲು ಕೆಲವು ಕಾನೂನು ತೊಡಕುಗಳಿದ್ದವೂ, ಸತತ ಎರಡು ಗಂಟೆಗಳ ಕಾಲ ಕಾಮಗಾರಿ ನಡೆಯುವ ಸ್ಥಳ ಕೃಷ್ಣಾ ನದಿ ತೀರದಲ್ಲಿ ಸಭೆ ಸೇರಿ ಮಾತುಕತೆ ನಡೆಸಲಾಗಿದೆ. ಅದಕ್ಕೆ ರೈತರು ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರಿಗೆ ನೀಡಬೇಕಾದ ಪರಿಹಾರ ಧನ ಕೂಡಲೇ ನೀಡುವ ಭರವಸೆ ನೀಡಿದ್ದೇವೆ. ಇನ್ನೇರಡು ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಉಪವಾಸ ಸತ್ಯಾಗ್ರಹ ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಆದರೆ ಇದಕ್ಕೆ ಒಪ್ಪದ ಹೋರಾಟಗಾರ ಡಾ. ರವಿ ಜಮಖಂಡಿ ಮಾತನಾಡಿ, ಇಂತಹ ಭರವಸೆಗಳಿಂದ ಕಾಲಹರಣವಾಗಿದೆ. ಇದು ನನ್ನ ವೈಯಕ್ತಿಕ ಬೇಡಿಕೆ ಅಲ್ಲ. ಲಕ್ಷಾಂತರ ಜನರಿಗೆ ಅನುಕೂಲವಾಗುವ ಕಾಮಗಾರಿ. ಸರ್ಕಾರ ಕೋಟ್ಯಂತರ ರೂ. ಬಿಡುಗಡೆ ಮಾಡಿದರೂ ಪ್ರಯೋಜನವಿಲ್ಲ ಎಂದರೇ ಏನರ್ಥ? ಯಾವುದೇ ಕಾರಣಕ್ಕೂ ಹೋರಾಟ ಹಿಂಪಡೆಯುವುದಿಲ್ಲ. ಸಂಬಂಧಪಟ್ಟ ಸಚಿವರು ಖುದ್ದಾಗಿ ಆಗಮಿಸಿ ಲಿಖಿತ ಭರವಸೆ, ಕಾಲಮಿತಿ ಒಳಪಡಿಸಿ ಕಾಮಗಾರಿ ಆರಂಭಿಸಿದಾಗ ಮಾತ್ರ ಹೋರಾಟ ಹಿಂಪಡೆಯಲಾಗುವುದು ಎಂದು ಘೋಷಣೆ ಮಾಡಿದರು.
ಮುಖಂಡರಾದ ಅಶೋಕ ಮುಗ್ಗನ್ನವರ, ಅಭಯ ಮುಗ್ಗನ್ನವರ, ಪ್ರವೀಣ ಮುಗ್ಗನ್ನವರ, ಮಹಾವೀರ ಮುಗ್ಗನ್ನವರ, ಅಶೋಕ ಹಳಿಂಗಳಿ, ಜಿನ್ನಪ್ಪ ಶಿರಹಟ್ಟಿ, ಧನಪಾಲ ಮೊರಬ, ಪಾರಿಸ ಅಜ್ಜಪ್ಪಗೋಳ, ಕುಮಾರ ನಂದಗಾಂವ, ಭೀಮಸಿ ಮಗದುಮ್, ಸುರೇಶ ಚಿಂಡಕ, ರಾಜಶೇಖರ ಜಾಲಿಗಿಡದ ಇದ್ದರು.
ಡಾ. ರವಿ ಜಮಖಂಡಿಯವರ ಆರೋಗ್ಯದಲ್ಲಿ ಮತ್ತಷ್ಟು ಏರುಪೇರು ಕಂಡು ಬಂದಿದೆ. 72 ಗಂಟೆಗಳಿಂದ ಆಹಾರ ಸೇವಿಸದೆ ಕೇವಲ ನೀರು ಕುಡಿಯುತ್ತಾ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಮಠಾಧೀಶರ ಬೆಂಬಲ
ಡಾ. ರವಿ ಜಮಖಂಡಿ ನೇತೃತ್ವದ ಹೋರಾಟಕ್ಕೆ ರಬಕವಿ ಬನಹಟ್ಟಿ ಹೊಸೂರ, ರಾಂಪುರ, ಮಹಿಷವಾಡಗಿ ಭಾಗದ ರೈತರು ಹಾಗೂ ಕುರುಹಿನಶೆಟ್ಟಿ ಸಮುದಾಯದ ಮುಖಂಡರು, ಮಹಿಳಾ ಮಂಡಳ, ಮದನಮಟ್ಟಿ, ಮಹಿಷವಾಡಗಿ, ಚಿಮ್ಮಡ, ಮಹಾಲಿಂಗಪುರ, ಹನಗಂಡಿ, ತೇರದಾಳ ಭಾಗದ ಸಾರ್ವಜನಿಕರು ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
ಅಲ್ಲದೇ ರಬಕವಿ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು, ರಬಕವಿ ವಿರಕ್ತಮಠದ ಗುರುಮಹಾಂತ ಶರಣರು, ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನ ಮುನಿ ಆಚಾರ್ಯ 108 ಕುಲರತ್ನಭೂಷಣ ಮಹಾರಾಜರು ಬೆಂಬಲ ಸೂಚಿಸಿದ್ದಾರೆ.