ಮಳೆಯಲ್ಲೂ ಮುಂದುವರಿದ ರೈತರ ಹೋರಾಟ

ಮುಧೋಳ ತಾಲೂಕಿನ ಮುದ್ದಾಪುರದಲ್ಲಿ ಜೆಕೆ ಸಿಮೆಂಟ್ ಕಾರ್ಖಾನೆಯ ಅಕ್ರಮ ಗಣಿಗಾರಿಕೆ ಮತ್ತು ಕಲ್ಲು ಸಾಗಾಟ ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಶಂಕರಗೌಡ ಹಿರೇಗೌಡ, ಸುರೇಶ ಕಿವಡಿ ಹನುಮಂತ ಕಿವಡಿ, ಸೇರಿ ಹಲವಾರು ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.
ಮುಧೋಳ ತಾಲೂಕಿನ ಮುದ್ದಾಪುರದಲ್ಲಿ ಜೆಕೆ ಸಿಮೆಂಟ್ ಕಾರ್ಖಾನೆಯ ಅಕ್ರಮ ಗಣಿಗಾರಿಕೆ ಮತ್ತು ಕಲ್ಲು ಸಾಗಾಟ ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಶಂಕರಗೌಡ ಹಿರೇಗೌಡ, ಸುರೇಶ ಕಿವಡಿ ಹನುಮಂತ ಕಿವಡಿ, ಸೇರಿ ಹಲವಾರು ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಕೆ ಸಿಮೆಂಟ್ ವಿರುದ್ಧ ಆಕ್ರೋಶ,
  • ಅಕ್ರಮ ಗಣಿಗಾರಿಕೆ ಆರೋಪ,
  • ರೈತರೊಂದಿಗೆ ಮಾತುಕತೆ ನಡೆಸಿ ಮನವೊಲಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ.
ಮುಧೋಳ: ತಾಲೂಕಿನ ಮುದ್ದಾಪುರದಲ್ಲಿರುವ ಜೆಕೆ ಸಿಮೆಂಟ್ ಕಾರ್ಖಾನೆಯ ಅಕ್ರಮ ಗಣಿಗಾರಿಕೆ ಹಾಗೂ ನಿಯಮಬಾಹಿರ ಕಲ್ಲು ಸಾಗಾಟವನ್ನು ವಿರೋಧಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಸೋಮವಾರ 11ನೇ ದಿನಕ್ಕೆ ಕಾಲಿಟ್ಟಿದ್ದು, ಮಳೆಯ ನಡುವೆಯೂ ಹೋರಾಟ ಮುಂದುವರಿಯಿತು.
ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ್ ಅವರು ರೈತರೊಂದಿಗೆ ಮಾತುಕತೆ ನಡೆಸಿ ಮನವೊಲಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ.
ಉತ್ತರ ಕರ್ನಾಟಕ ರೈತ ಸಂಘದ ಅಧ್ಯಕ್ಷ ಶಂಕರಗೌಡ ಹಿರೇಗೌಡ ಮಾತನಾಡಿ, ಕಾರ್ಖಾನೆಯ ಗಣಿಗಾರಿಕೆ ಚಟುವಟಿಕೆಗಳಲ್ಲಿ ಹಲವು ನಿಯಮ ಉಲ್ಲಂಘನೆಗಳು ನಡೆಯುತ್ತಿವೆ ಎಂದು ಆರೋಪಿಸಿದರು. 12 ಚಕ್ರದ ವಾಹನಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಲ್ಲು ಸಾಗಿಸಲಾಗುತ್ತಿದ್ದು, ಇದರಿಂದ ರಸ್ತೆ ಸುರಕ್ಷತೆಗೆ ಧಕ್ಕೆಯಾಗುತ್ತಿದೆ ಎಂದು ಹೇಳಿದರು.
ಮೈನಿಂಗ್‌ನಿಂದ ಹೊರಬರುವ ವಾಹನಗಳಿಗೆ ಕಡ್ಡಾಯವಾಗಿ ಇರಬೇಕಾದ ರಾಯಲ್ಟಿ ಮತ್ತು ಪರ್ಮಿಟ್ ಇಲ್ಲದೆ ಕಲ್ಲುಗಳನ್ನು ಸಾಗಾಟ ಮಾಡಲಾಗುತ್ತಿದ್ದು, ಇದರಿಂದ ಅನಾಹುತಗಳು ಸಂಭವಿಸಿದರೆ ಹೊಣೆ ಯಾರು? ಎಂದು ಪ್ರಶ್ನಿಸಿದರು. ಅಕ್ರಮಗಳ ಕುರಿತು ಪ್ರಶ್ನಿಸುವ ರೈತರನ್ನು ಬೆದರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ದೂರಿದರು. ಬಾಗಲಕೋಟೆ ಜಿಲ್ಲೆಯ ಆರ್‌ಟಿಒ ಮತ್ತು ಗಣಿಗಾರಿಕೆ ಇಲಾಖೆ ಅಧಿಕಾರಿಗಳು ಈ ವಿಷಯದಲ್ಲಿ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗಣಿಗಾರಿಕೆ ಇಲಾಖೆ ಕಳೆದ 20 ವರ್ಷಗಳಲ್ಲಿ ಇಂತಹ ಪ್ರಕರಣಗಳೇ ನಡೆದಿಲ್ಲ ಎನ್ನುತ್ತಿದ್ದರೆ, ಆರ್‌ಟಿಒ ಅಧಿಕಾರಿಗಳು ಕೇವಲ ಒಂದು ತಿಂಗಳಲ್ಲಿ 10-15 ಪ್ರಕರಣಗಳು ದಾಖಲಾಗಿವೆ ಎನ್ನುವ ಮೂಲಕ ಅಧಿಕಾರಿಗಳ ಹೇಳಿಕೆಯಲ್ಲಿನ ವೈರುಧ್ಯವನ್ನು ಎತ್ತಿ ತೋರಿಸಿದರು. ಇನ್ನು ಮುಂದೆಯಾದರೂ ಪ್ರತಿ ವಾಹನವನ್ನು ತೂಕದ ಯಂತ್ರದಲ್ಲಿ ಪರೀಕ್ಷಿಸಿ ನಿಯಮಾನುಸಾರ ಸಾಗಾಟ ಮಾಡಬೇಕು, ಇಲ್ಲವಾದರೆ ರೈತರು ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸುರೇಶ ಕಿವಡಿ, ಮಹಾದೇವ ಹೊಸಟ್ಟಿ, ರಂಗಪ್ಪ ತುಳಸಿಗೇರಿ, ಶೈಲೇಶ ಹಂಪಿಹೊಳಿ, ವಿಠ್ಠಲ ಗಂಟೋಟಿ, ಹನುಮಂತ ಕಿವಡಿ, ವಿಷ್ಣು ತುಳಸಿಗೇರಿ ಸೇರಿ ಹಲವಾರು ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net