ಆತಂಕವಿಲ್ಲದೇ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ

ಬಾಗಲಕೋಟೆ ನವನಗರದ ಅಲ್ಪಸಂಖ್ಯಾತರ ಎಂಡಿಆರ್‌ಎಸ್ ಶಾಲೆಗೆ ಜಿಲ್ಲಾಧಿಕಾರಿ ಸಂಗಪ್ಪ ಎಂ. ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಕಾಂಬಳೆ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಜಿ.ಮನ್ನಿಕೇರಿ ಇದ್ದರು.
ಬಾಗಲಕೋಟೆ ನವನಗರದ ಅಲ್ಪಸಂಖ್ಯಾತರ ಎಂಡಿಆರ್‌ಎಸ್ ಶಾಲೆಗೆ ಜಿಲ್ಲಾಧಿಕಾರಿ ಸಂಗಪ್ಪ ಎಂ. ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಕಾಂಬಳೆ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಜಿ.ಮನ್ನಿಕೇರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಸಂಗಪ್ಪ ಸಲಹೆ
  • ಧೈರ್ಯ, ಶಿಸ್ತು, ಸಮಯ ಪಾಲನೆ ಯಶಸ್ಸಿನ ಮಂತ್ರ
  • ಪಿಯುಸಿ ವಾರ್ಷಿಕ ಪರೀಕ್ಷೆ
ಬಾಗಲಕೋಟೆ: ಜಿಲ್ಲೆದಾದ್ಯಂತ ಫೆ.28ರಿಂದ ಆರಂಭವಾಗಲಿರುವ ಪಿಯುಸಿ ವಾರ್ಷಿಕ ಪರೀಕ್ಷೆಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಅವರು ನಗರದ ವಿವಿಧ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳಿಗೆ ಶುಕ್ರವಾರ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಆತ್ಮಸ್ತೈರ್ಯ ತುಂಬಿದರು.
ನವನಗರದ ಅಲ್ಪಸಂಖ್ಯಾತರ ಎಂಡಿಆರ್‌ಎಸ್ ಮತ್ತು ಎಪಿಜೆ ಅಬ್ದುಲ್ ಕಲಾಂ ಪದವಿ ಪೂರ್ವ ಕಾಲೇಜ ಮತ್ತು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆಗೆ ಆತ್ಮೀಯವಾಗಿ ಮಾತನಾಡಿದ ಜಿಲ್ಲಾಧಿಕಾರಿ ಪರೀಕ್ಷೆ ಜೀವನದ ಒಂದು ಭಾಗ ಮಾತ್ರ. ಯಾವುದೇ ಆತಂಕವಿಲ್ಲದೇ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ತಿಳಿಸಿದರು.
ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವದಕ್ಕಿಂತ ಧೈರ್ಯ ತುಂಬುವುದು ಮುಖ್ಯವಾಗಿದೆ. ವಿದ್ಯಾರ್ಥಿಗಳು ಕಾಟಾಚಾರಕ್ಕೆ ಓದದೇ ಇಷ್ಟಪಟ್ಟು ಅಭ್ಯಾಸ ಮಾಡಬೇಕು. ನಿಮ್ಮ ಈಗಿನ ಶ್ರಮ ಮುಂದಿನ ಗುರಿ ಸಾಧನೆಗೆ ಅನುಕೂಲವಾಗಲಿದೆ. ಉತ್ತಮ ಗುರಿ ಇಟ್ಟುಕೊಂಡು ಅದಕ್ಕೆ ತಕ್ಕಂತೆ ಶ್ರಮ ಕೂಡಾ ಅಂದರೆ ಅಭ್ಯಾಸ ಇರಬೇಕು. ಧೈರ್ಯ, ಶಿಸ್ತು ಹಾಗೂ ಸಮಯ ಪಾಲನೆ ಇವೇ ಯಶಸ್ಸಿನ ಮಂತ್ರಗಳಾಗಿದೆ ಎಂದು ಹೇಳಿದರು.
ಪರೀಕ್ಷೆಗಳು ಸುಗಮವಾಗಿ ಹಾಗೂ ಶಾಂತಿಯುತವಾಗಿ ನಡೆಯಲು ಜಿಲ್ಲಾಡಳಿತದಿಂದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ರೆಗ್ಯೂಲರ್ 24353, ಪುನರಾವರ್ತಿತ 1753 ಹಾಗೂ ಬಾಹ್ಯ 903 ಸೇರಿ ಒಟ್ಟು 27009 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಲಾ ವಿಭಾಗದಲ್ಲಿ 8992, ವಾಣಿಜ್ಯ ವಿಭಾಗದಲ್ಲಿ 5171 ಹಾಗೂ ವಿಜ್ಞಾನ ವಿಭಾಗದಲ್ಲಿ 10190 ವಿದ್ಯಾರ್ಥಿಗಳು ಇದ್ದಾರೆ. ಒಟ್ಟು 39 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳಿಗೆ ಸಿಸಿಟಿವಿ ಅಳವಡಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 8 ಜನರ ತಂಡವನ್ನು ಪರೀಕ್ಷಾ ಕಾರ್ಯ ಚಟುವಟಿಕೆಗಳಿಗೆ ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶದಲ್ಲಿ ಸೆಕ್ಷನ್ 163 ಜಾರಿಯಲ್ಲಿದ್ದು, ಈಗಾಗಲೇ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಝರಾಕ್ಸ ಅಂಗಡಿಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ. ಪರೀಕ್ಷೆಗೆ 39 ಮುಖ್ಯ ಅಧೀಕ್ಷಕರು, ಸಹ ಮುಖ್ಯ ಅಧೀಕ್ಷಕರು ಮತ್ತು ಜಾಗೃತದ ದಳದ ಸದಸ್ಯರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಕಾಂಬಳೆ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಜಿ.ಮನ್ನಿಕೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಂಕಜ ಸೇರಿ ಇತರೆ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net