ಬನಹಟ್ಟಿ ಕಾಡಸಿದ್ದೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಜಂಗಿ ನಿಖಾಲಿ ಕುಸ್ತಿಗಳ ಪ್ರಚಾರ ಸಾಮಗ್ರಿಗಳನ್ನು ಹಿರಿಯರು ಬಿಡುಗಡೆಗೊಳಿಸಿದರು. ಕಾಂಗ್ರೆಸ್ ಮುಖಂಡ ಕೀರ್ತಿ ಗಣೇಶ, ಚನ್ನಪ್ಪ ಹಾದಿಮನಿ, ರವಿ ಬಾಡಗಿ ಸೇರಿ ಇತರರಿದ್ದರು.
ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ
ರಬಕವಿ/ಬನಹಟ್ಟಿ: ಯುವಕರಲ್ಲಿ ದೈಹಿಕ ಸಾಮರ್ಥ್ಯ ಹಾಗೂ ಶಿಸ್ತು ರೂಢಿಸುವಲ್ಲಿ ದೇಶದ ಪಾರಂಪರಿಕ ಕ್ರೀಡೆಗಳಲ್ಲೊಂದಾದ ಕುಸ್ತಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಧ್ಯಕ್ಷ ಕೀರ್ತಿ ಗಣೇಶ ಹೇಳಿದರು.
ಭಾನುವಾರ ಬನಹಟ್ಟಿಯ ಕಾಡಸಿದ್ದೇಶ್ವರ ಸಮುದಾಯ ಭವನದಲ್ಲಿ ಡಿ.ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಎನ್‌ಎಸ್‌ಯುಐ ಸಹಯೋಗದಲ್ಲಿ ಹಿರಿಯ ಕುಸ್ತಿ ಪಟು ಕಾಡಪ್ಪ ಜಿಡ್ಡಿಮನಿಯವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ೆ.22 ರಂದು ನಡೆಯುವ ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಹಿರಿಯ ಕುಸ್ತಿ ಉಸ್ತಾದರಾದ ಜಿಡ್ಡಿಮನಿ ಹುಟ್ಟು ಹಬ್ಬದ ನಿಮಿತ್ತ ಕುಸ್ತಿ ಆಯೋಜಿಸಿರುವುದು ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿದೆ. ಕುಸ್ತಿ ಪಟು ವಸ್ತಾದ ಕಾಡಪ್ಪ ಜಿಡ್ಡಿಮನಿ ತಮ್ಮ ಜೀವನವನ್ನು ಕುಸ್ತಿಗೆ ಸಮರ್ಪಣೆ ಮಾಡಿ, ಅನೇಕ ಶಿಷ್ಯರನ್ನು ರೂಪಿಸಿ, ಕ್ರೀಡೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಶ್ಲಾಸಿದರು. ಗ್ರಾಮೀಣ ಹಾಗೂ ಸಾಂಪ್ರದಾಯಿಕ ಕ್ರೀಡೆಗಳಿಗೆ ಉತ್ತೇಜನ ನೀಡುವ ಜೊತೆಗೆ ಕ್ರೀಡೆಗಳತ್ತ ಯುವ ಜನತೆ ಆಸಕ್ತಿ ಹೊಂದಿದಾಗ ಮಾತ್ರ ಕ್ರೀಡೆಗಳು ಬೆಳಕಿಗೆ ಬರುತ್ತವೆ. ವಿವಿಧ ರಾಜ್ಯಗಳಿಂದ ಕುಸ್ತಿ ಪಟುಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಭದ್ರನವರ ಮಾತನಾಡಿ, ಕುಸ್ತಿಯು ಗ್ರಾಮೀಣ ಭಾಗದಲ್ಲಿ ವಿಶೇಷ ಸ್ಥಾನ ಹೊಂದಿದ್ದು, ಇಂತಹ ಕ್ರೀಡೆಗಳಿಗೆ ಹಾಗೂ ಕುಸ್ತಿ ಪಟುಗಳಿಗೆ ನಾವೆಲ್ಲರೂ ಸಹಕಾರ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.