ಹುನಗುಂದ ತಾಲೂಕಿನ ಹಾವರಗಿ ಗ್ರಾಮದ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಶಾಸಕ ವಿಜಯಾನಂದ ಕಾಶಪ್ಪನವರ ಚಾಲನೆ ನೀಡಿದರು. ವೈ.ಎಚ್.ಪಾಟೀಲ, ಶರಣಪ್ಪ ಆಲೂರ, ಮಹಾಂತೇಶ ಕಾಶಪ್ಪನವರ, ಸಂಗಯ್ಯ ಶಿವಮೂರ್ತಿ, ಸುಭಾಷ್ ನಾಗರಾಳ ಇದ್ದರು.
ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ರಸ್ತೆಗಳ ಸುಧಾರಣೆಯಾಗಿರಲಿಲ್ಲ
ಹುನಗುಂದ: ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ರಸ್ತೆಗಳ ಸುಧಾರಣೆಯಾಗಿರಲಿಲ್ಲ. ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆ ಸೇರಿ 5 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ತಾಲೂಕಿನ ಹಾವರಗಿ ಗ್ರಾಮದಲ್ಲಿ ಪ್ರಸಕ್ತ 2025-26 ಸಾಲಿನ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಗ್ರಾಮೀಣ ರಸ್ತೆ, ಸೇತುವೆಗಳ ಭೂಮಿ ಪೂಜೆ ಶುಕ್ರವಾರ ನೆರವೇರಿಸಿ ಅವರು ಮಾತನಾಡಿದರು.
ಮುಖ್ಯ ರಸ್ತೆಗಳು ಆಗಿಲ್ಲ ಎನ್ನುವ ಕೂಗು ಇತ್ತು. ಗ್ರಾಮದ ಬೇಡಿಕೆಗಳಾದ ಸಿಸಿ ರಸ್ತೆ, ಗ್ರಾಮದಿಂದ ಕೃಷ್ಣ ನದಿಯ ವರೆಗೆ ರಸ್ತೆ ಸುಧಾರಣೆ, ಹಾವರಗಿ- ಜಾಲಕಮಲದಿನ್ನಿ ಸಂಪರ್ಕಿಸುವ ರಸ್ತೆ ಸುಧಾರಣೆ ಕಾಮಗಾರಿ ಮಾಡಲಾಗುವುದು ಎಂದರು.
ತಾಲೂಕಿನ 170 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕಾಮಗಾರಿ ಪ್ರಗತಿಯಲ್ಲಿದೆ. ಕೌಜಗನೂರ, ಇಂದವಾರ, ಮರೋಳ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ನಮ್ಮ ಸರ್ಕಾರ ಗ್ರಾಮೀಣ ಪ್ರದೇಶಗಳ ರಸ್ತೆ ಸೇರಿದಂತೆ ಇತರೆ ಸೌಕರ್ಯಗೆ ಹೆಚ್ಚಿನ ಆಧ್ಯತೆ ನೀಡುತ್ತಿದೆ. ನುಡಿದಂತೆ ನಡೆದ ನಮ್ಮ ಸರ್ಕಾರವಾಗಿದ್ದು, ಪಂಚ ಗ್ಯಾರಂಟಿ ಸಮರ್ಪಕವಾಗಿ ಮುಟ್ಟಿಸುವ ಕೆಲಸ ಮಾಡಿದೆ ಎಂದು ಹೇಳಿದರು.