ವಿದ್ಯುತ್ ಖಾಸಗೀಕರಣ ಅನ್ನದಾತರ ಪಾಲಿಗೆ ಮರಣ ಶಾಸನ

 ಮುಧೋಳದಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತರಿಂದ ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಿಕ ಅವರಿಗೆ ಮನವಿ ಸಲ್ಲಿಸಿದರು. ಸಂಗನಬಸವ ಸ್ವಾಮೀಜಿ, ಬಸವಂತ ಕಾಂಬಳೆ, ರಾಜು ಯಡಹಳ್ಳಿ, ದುಂಡಪ್ಪ ಯರಗಟ್ಟಿ, ಈರಪ್ಪ ಹಂಚನಾಳ ಇತರರಿದ್ದರು.
ಮುಧೋಳದಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತರಿಂದ ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಿಕ ಅವರಿಗೆ ಮನವಿ ಸಲ್ಲಿಸಿದರು. ಸಂಗನಬಸವ ಸ್ವಾಮೀಜಿ, ಬಸವಂತ ಕಾಂಬಳೆ, ರಾಜು ಯಡಹಳ್ಳಿ, ದುಂಡಪ್ಪ ಯರಗಟ್ಟಿ, ಈರಪ್ಪ ಹಂಚನಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೂರಾರು ರೈತರು ಸೇರಿ ಬೃಹತ್ ಪ್ರತಿಭಟನೆ
  • ಸರ್ಕಾರದ ವಿರುದ್ಧ ಸಮರ
  • ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹೆಸ್ಕಾಂ ಕಚೇರಿಯವರೆಗೆ ಬೈಕ್ ರ‌್ಯಾಲಿ
ಮುಧೋಳ : ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಗಾಗಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ, ನೂರಾರು ರೈತರು ಸೇರಿ ಬೃಹತ್ ಪ್ರತಿಭಟನೆ ನಡೆಸಿದರು.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹೆಸ್ಕಾಂ ಕಚೇರಿಯವರೆಗೆ ಬೈಕ್ ರ‌್ಯಾಲಿ ನಡೆಸಿದ ಅನ್ನದಾತರು, ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದರು.
ರೈತರ ಬಾಕಿ ಹಣ ಪಾವತಿಸುವುದನ್ನು ಬಿಟ್ಟು ಕಾರ್ಪೊರೇಟ್ ಪರವಾಗಿ ಕೆಲಸ ಮಾಡುತ್ತಿರುವ ಸರ್ಕಾರದ ಹಠಮಾರಿ ಧೋರಣೆ ಸರಿಯಲ್ಲ. ರೈತರು ವಿದ್ಯುತ್ ಬಳಸುತ್ತಿರುವುದು ಸ್ವಾರ್ಥಕ್ಕಾಗಿ ಅಲ್ಲ, ದೇಶದ ಜನರಿಗೆ ಅನ್ನ ಹಾಕಲು. ಅನ್ನದಾತರನ್ನು ಕೆಣಕಿದರೆ ಸರ್ಕಾರ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
2000 ಇಸವಿಯಿಂದ ಶಿರೋಳ ಗ್ರಾಮದ ರೈತರು ವಿದ್ಯುತ್ ದರ ಪಾವತಿಸಿಲ್ಲ, ವಿದ್ಯುತ್ ಸಂಪರ್ಕವನ್ನೂ ಬಿಟ್ಟುಕೊಟ್ಟಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ನೇರ ಎಚ್ಚರಿಕೆ ನೀಡಿದರು.
ಹುಣಶ್ಯಾಳದ ಸಂಗನಬಸವ ಸ್ವಾಮೀಜಿ, ರಾಜ್ಯದಲ್ಲಿ ಮಳೆ ಕೈ ಕೊಟ್ಟಿದ್ದು, ಬಿತ್ತಿದ ಬೀಜಗಳು ಮೊಳಕೆಯೊಡೆಯದೆ ಮಣ್ಣಿನಲ್ಲೇ ಬತ್ತಿ ಹೋಗುತ್ತಿವೆ. ಇಂತಹ ಭೀಕರ ಬರಗಾಲದ ಸಂದರ್ಭದಲ್ಲಿ ವಿದ್ಯುತ್ ಖಾಸಗೀಕರಣ ರೈತರ ಪಾಲಿಗೆ ಮರಣ ಶಾಸನವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈರಪ್ಪ ಹಂಚಿನಾಳ ಮಾತನಾಡಿ, ವಿದ್ಯುತ್ ಯಾರಪ್ಪನ ಸ್ವತ್ತೂ ಅಲ್ಲ, ಇದು ಜನರ ಸಂಪತ್ತು. ಅಂಬಾನಿ, ಅದಾನಿ, ಟಾಟಾ, ಬಿರ್ಲಾ ಅಂತಹ ಕಾರ್ಪೊರೇಟ್ ದಿಗ್ಗಜರ ಹಿತ ಕಾಯಲು ಹೊರಟಿರುವ ಸರ್ಕಾರ, ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಮರೆತಿದೆ. ರೈತರ ಹಕ್ಕುಗಳನ್ನು ಕಂಪನಿಗಳಿಗೆ ಅಡವಿಡಲು ಹೊರಟಿರುವುದು ಖಂಡನೀಯ ಎಂದರು.
ಬಿಜೆಪಿ ಮುಖಂಡ ರಾಜು ಯಡಹಳ್ಳಿ ಮಾತನಾಡಿ, ರೈತರನ್ನು ದೇಶದ ಬೆನ್ನೆಲುಬು ಎಂದು ಕರೆಯುವ ಸರ್ಕಾರವೇ ಅವರ ಬದುಕನ್ನು ಕಸಿದುಕೊಳ್ಳಲು ಮುಂದಾಗಿದೆ. ಇಡೀ ಜನಸಾಮಾನ್ಯರು ಒಗ್ಗೂಡಿ ಖಾಸಗೀಕರಣ ವಿರೋಧ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರೊ. ಎಂ.ಡಿ. ನಂಜುಂಡಸ್ವಾಮಿ ಮತ್ತು ರಮೇಶ ಗಡದಣ್ಣವರ ಅವರ ನಾಯಕತ್ವದಲ್ಲಿ ನಡೆದ ಹಿಂದಿನ ಹೋರಾಟಗಳನ್ನು ನೆನಪಿಸಿಕೊಳ್ಳಲಾಯಿತು. ನಂತರ ಪ್ರತಿಭಟನಾ ನಿರತ ರೈತರು ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಅವರಿಗೆ ಮನವಿ ಸಲ್ಲಿಸಿದರು.
ಸಂಗನಬಸವ ಸ್ವಾಮೀಜಿ, ಬಸವಂತ ಕಾಂಬಳೆ, ರಾಜು ಯಡಹಳ್ಳಿ, ದುಂಡಪ್ಪ ಯರಗಟ್ಟಿ, ಈರಪ್ಪ ಹಂಚನಾಳ ನೂರಾರು ರೈತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net