ಕಮತಗಿ ಸಮೀಪದ ಬೇವೂರಿನ ಸರಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆಯ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಜಿಪಂ ಸಿಇಒ ಶಶಿಧರ ಕುರೇರ ಉದ್ಘಾಟಿಸಿದರು. ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಎಸ್. ಆರ್.ಮನಹಳ್ಳಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಜೀತ ಮನ್ನಿಕೇರಿ, ಜಿ.ವೈ.ಹೆರಕಲ್, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ರವಿಕುಮಾರ ತಳವಾರ, ಕ್ಷೇತ್ರ ಶಿಕ್ಷಣಾಕಾರಿ ಎಂ.ಎಸ್.ಬಡದಾನಿ, ಪ್ರಮೋದಿನಿ ಬಳೋಲಮಟ್ಟಿ, ಎಸ್.ವೈ.ಶಿರೂರ, ನಿಂಗಪ್ಪ ಮಾಗನೂರ, ಎಂ.ಎಸ್.ವೈಜಾಪುರ, ಕುಮಾರ ಬಿಂಜವಾಡಗಿ ಮತ್ತಿತರರಿದ್ದರು.
ಕಮತಗಿ: ಸರ್ಕಾರಿ ಶಾಲೆಗಳ ಸುಧಾರಣೆ ಮತ್ತು ಅಭಿವೃದ್ಧಿಗೆ ಸರ್ಕಾರದ ಸೌಲಭ್ಯಗಳ ಜತೆಗೆ ಸಾರ್ವಜನಿಕರ ಸಕ್ರಿಯ ಸಹಕಾರ ಅತ್ಯವಶ್ಯಕವಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕುರೇರ ಹೇಳಿದರು.
ಸಮೀಪದ ಬೇವೂರಿನ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ಇತ್ತೀಚಿಗೆ ನಡೆದ ವಾರ್ಷಿಕ ಸ್ನೇಹ ಸಮ್ಮಿಲನ ಹಾಗೂ ನಮ್ಮ ಶಾಲೆ-ನಮ್ಮ ಜವಾಬ್ದಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗಳ ಬೆಳವಣಿಗೆಗೆ ಊರಿನ ನಾಗರಿಕರು, ಹಳೆ ವಿದ್ಯಾರ್ಥಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿ ಅಳಿಲು ಸೇವೆ ಸಲ್ಲಿಸಬೇಕು. ಶಿಕ್ಷಣವೇ ವ್ಯಕ್ತಿಯ ಬೆಳವಣಿಗೆಗೆ ಮೂಲ ಆಧಾರವಾಗಿದ್ದು, ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸರ್ವರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ನಿವೃತ್ತ ನಿರ್ದೇಶಕ ಎಸ್.ಆರ್. ಮನಹಳ್ಳಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಶಾಲೆಗಳನ್ನು ಆಕರ್ಷಕವಾಗಿ ರೂಪಿಸದೇ ಹೋದರೆ ಅವುಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದರು. ಉಪನಿರ್ದೇಶಕ ಅಜೀತ ಮನ್ನಿಕೇರಿ ಮಾತನಾಡಿ, ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳೊಂದಿಗೆ ಸಮಾಜದ ಕಳಕಳಿ ಕೂಡ ಮುಖ್ಯವೆಂದರು.
ವೃತ್ತಿ ಶಿಕ್ಷಕಿ ಶೋಭಾ ಹಡಗಲಿ ಅವರ ಸಖಿ ಸಂಗಾತಿ ಕೃತಿ ಬಿಡುಗಡೆಗೊಳಿಸಲಾಯಿತು. ಜಿ.ವೈ. ಹೆರಕಲ್ ಸಾನ್ನಿಧ್ಯ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ರವಿಕುಮಾರ ತಳವಾರ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಬಡದಾನಿ, ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು, ಗಣ್ಯರು ಹಾಗೂ ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯಗುರು ಬಿ.ಆರ್. ಶೆಟ್ಟಿ ಸ್ವಾಗತಿಸಿ, ಅನ್ನಪೂರ್ಣಾ ಮಾಗನೂರ ವರದಿ ವಾಚಿಸಿದರು. ಸುನೀಲ ಪಾಟೀಲ ಮತ್ತು ಪಾಂಡುರಂಗ ಸನ್ನಪ್ಪನವರ ನಿರೂಪಿಸಿದರು.