ಮುಧೋಳದ ರನ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಿಮೋಗ್ಲೋಬಿನ್ ತಪಾಸಣಾ ಕಾರ್ಯಕ್ರಮವನ್ನು ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಉದ್ಘಾಟಿಸಿದರು. ಎಚ್.ಎಂ. ಪಾಟೀಲ, ಲಿಂಬಾಜಿ ಬಿ. ವಾಡ್ಕರ, ಮಲ್ಲಿಕಾರ್ಜುನ ಜಂಬಗಿ, ಮಹೇಶ ದೇಮಶೆಟ್ಟಿ ಇತರರಿದ್ದರು.
ಮುಧೋಳ : ತಾಲೂಕಿನಲ್ಲಿ ರಕ್ತಹೀನತೆ (ಅನೀಮಿಯಾ) ಸಮಸ್ಯೆ ನಿಯಂತ್ರಿಸಿ ಅನೀಮಿಯಾ ಮುಕ್ತ ತಾಲೂಕನ್ನಾಗಿಸಲು ಆರೋಗ್ಯ ಇಲಾಖೆ ಜತೆಗೆ ಸಾರ್ವಜನಿಕರು, ಶಾಲೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಸಕ್ರಿಯವಾಗಿ ಕೈಜೋಡಿಸಬೇಕು ಎಂದು ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಹೇಳಿದರು.
ನಗರದ ರನ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿಮೋಗ್ಲೋಬಿನ್ ತಪಾಸಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು, ಕಿಶೋರಿಯರು ಹಾಗೂ ಮಹಿಳೆಯರಲ್ಲಿ ರಕ್ತಹೀನತೆ ತಡೆಗೆ ಪೌಷ್ಟಿಕ ಆಹಾರ ಸೇವನೆ ಮತ್ತು ನಿಯಮಿತ ಆರೋಗ್ಯ ತಪಾಸಣೆ ಮುಖ್ಯ. ಜಂಕ್‌ಫುಡ್ ಹಾಗೂ ಅತಿಯಾಗಿ ಕರಿದ ಪದಾರ್ಥಗಳ ಸೇವನೆ ಕಡಿಮೆ ಮಾಡಿ, ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ವೈ. ಕಳ್ಳಿಮನಿ ಮಾತನಾಡಿ, ಆರೋಗ್ಯವಂತ ವ್ಯಕ್ತಿಗಳಿಂದಲೇ ಆರೋಗ್ಯಕರ ಕುಟುಂಬ ಹಾಗೂ ಸಮಾಜ ನಿರ್ಮಾಣ ಸಾಧ್ಯ ಎಂದರು.
ಅಂತ್ಯೋದಯ ಸಂಸ್ಥೆ ನಿರ್ದೇಶಕ ಡಾ. ಆಂತೋನಿ ಸಿ. ಅವರು ಹಿಮೋಗ್ಲೋಬಿನ್‌ನ ಮಹತ್ವ ಮತ್ತು ರಕ್ತಹೀನತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
ಶಿಶು ಅಭಿವೃದ್ಧಿ ಯೋಜನಾದಿಕಾರಿ ಟಿ.ಜೆ. ಶಂಕರಮೂರ್ತಿ ಬಾಲ್ಯವಿವಾಹದಿಂದ ಉಂಟಾಗುವ ದೈಹಿಕ ಹಾಗೂ ಮಾನಸಿಕ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿ ಒಟ್ಟು 260 ಮಂದಿಯ ಹಿಮೋಗ್ಲೋಬಿನ್ ಮಟ್ಟ ಪರೀಕ್ಷಿಸಲಾಯಿತು. ತಪಾಸಣೆಯ ಬಳಿಕ ಪೌಷ್ಟಿಕ ಆಹಾರ ಹಾಗೂ ರಕ್ತಹೀನತೆ ನಿಯಂತ್ರಣದ ಕುರಿತು ಮಾರ್ಗದರ್ಶನ ನೀಡಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಎಚ್.ಎಂ. ಪಾಟೀಲ, ಲಿಂಬಾಜಿ ಬಿ. ವಾಡ್ಕರ, ಮಲ್ಲಿಕಾರ್ಜುನ ಜಂಬಗಿ, ಮಹೇಶ ದೇಮಶೆಟ್ಟಿ, ಎಸ್.ಎಂ. ತುಂಗಳ, ಡಾ. ಸುರೇಶ ಎಸ್. ಕೆಳಗಡೆ, ಸಿಆರ್‌ಪಿ ಮಲ್ಲಿಕಾರ್ಜುನ ಹುಣಸೂರ, ದ್ರಾಕ್ಷಾಯಣಿ ಎಸ್. ಕರಡಿಮಠ, ಹಲವರು ಉಪಸ್ಥಿತರಿದ್ದರು.