ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ

ಬಾಗಲಕೋಟೆ ತಹಸೀಲ್ದಾರ ಕಚೇರಿಗೆ ಸೋಮವಾರ ಜಿಲ್ಲಾಧಿಕಾರಿ ಸಂಗಪ್ಪ ಅವರು ಕಚೇರಿಯ ವಿವಿಧ ಶಾಖೆಗಳಿಗೆ ಭೇಟಿ ನೀಡಿ, ಕೆಲಸದ ಪ್ರಕ್ರಿಯೆ ಪರಿಶೀಲಿಸಿದರು.
ಬಾಗಲಕೋಟೆ ತಹಸೀಲ್ದಾರ ಕಚೇರಿಗೆ ಸೋಮವಾರ ಜಿಲ್ಲಾಧಿಕಾರಿ ಸಂಗಪ್ಪ ಅವರು ಕಚೇರಿಯ ವಿವಿಧ ಶಾಖೆಗಳಿಗೆ ಭೇಟಿ ನೀಡಿ, ಕೆಲಸದ ಪ್ರಕ್ರಿಯೆ ಪರಿಶೀಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಂದಾಯ ಅಧಿಕಾರಿಗಳಿಗೆ ಡಿಸಿ ಸಂಗಪ್ಪ ಸೂಚನೆ
  • ತಹಸೀಲ್ದಾರ ಕಚೇರಿಗೆ ಅನಿರೀಕ್ಷಿತ ಭೇಟಿ
ಬಾಗಲಕೋಟೆ: ಕಚೇರಿಗಳಿಗೆ ಬರುವ ಸಾರ್ವಜನಿಕರ ಜೊತೆಗೆ ಸೌಜನ್ಯದಿಂದ ವರ್ತಿಸಬೇಕು. ಯಾವುದೇ ರೀತಿಯಲ್ಲಿ ಅನಗತ್ಯ ವಿಳಂಬ, ತೊಂದರೆ ಉಂಟಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಅವರು ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದರು.
ಬಾಗಲಕೋಟೆ ತಹಸೀಲ್ದಾರ ಕಚೇರಿಗೆ ಸೋಮವಾರ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾಧಿಕಾರಿ ಸಂಗಪ್ಪ ಅವರು, ಭೂಮಿ ಕೇಂದ್ರ ಹಾಗೂ ಇತರೆ ವಿಭಾಗದ ಕಾರ್ಯವೈಖರಿಯನ್ನು ಪರಿಶೀಲಿಸಿ ಮಾತನಾಡಿದರು.
ಭೂಮಿ ಕೇಂದ್ರದಲ್ಲಿ ರೈತರು ಹಾಗೂ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಪಹಣಿ, ಮ್ಯುಟೇಷನ್, ದಾಖಲೆಗಳ ತಿದ್ದುಪಡಿ ಸೇರಿ ವಿವಿಧ ಕಂದಾಯ ಸೇವೆಗಳ ಕುರಿತು ಮಾಹಿತಿ ಪಡೆದರು. ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಿ ಸಾರ್ವಜನಿಕರಿಗೆ ವಿಳಂಬವಿಲ್ಲದೇ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಚೇರಿಯ ವಿವಿಧ ಶಾಖೆಗಳಿಗೆ ಭೇಟಿ ನೀಡಿ ಕಡತಗಳ ನಿರ್ವಹಣೆ, ಸಾರ್ವಜನಿಕರ ಅಹವಾಲುಗಳ ಸ್ವೀಕಾರ ಮತ್ತು ವಿಲೇವಾರಿ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಸರ್ಕಾರದ ಜನಪರ ಸೇವೆಗಳನ್ನು ಪಾರದರ್ಶಕವಾಗಿ ಹಾಗೂ ಸಮಯಬದ್ಧವಾಗಿ ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಕಚೇರಿಯಲ್ಲಿ ಶಿಸ್ತು, ಸ್ವಚ್ಛತೆ ಹಾಗೂ ದಾಖಲೆಗಳ ಸಮರ್ಪಕ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ತಹಸೀಲ್ದಾರ ವಾಸುದೇವ ಸ್ವಾಮಿ ಸೇರಿ ಕಂದಾಯ ಇಲಾಖೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದು, ವಿವಿಧ ಸೇವೆಗಳ ಅನುಷ್ಠಾನ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಭೇಟಿ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ಚುನಾವಣಾ ವಿಭಾಗದ ಮಹೇಶ ಪಾಂಡವ ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net