ಬಿಸಿಲಿನ ಧಗೆಗೆ ಕುಡಿಯುವ ನೀರಿಗೂ ತತ್ವಾರ

ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ತ್ರಿವೇಣಿಗಳ ನದಿಗಳ ಸದ್ಯದ ಪರಿಸ್ಥಿತಿ
ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ತ್ರಿವೇಣಿಗಳ ನದಿಗಳ ಸದ್ಯದ ಪರಿಸ್ಥಿತಿ
Published on

ಪ್ರಮುಖ ಮುಖ್ಯಾಂಶಗಳು

  • ಏಪ್ರಿಲ್ ಕೊನೇ ವಾರ, ಮೇ ನಲ್ಲಿ ತೀವ್ರ ಸಮಸ್ಯೆ
  • ಸೂರ್ಯನ ತಾಪಕ್ಕೆ ಹೆಚ್ಚಿದ ಆವಿ ಪ್ರಮಾಣ
  • ಜನ, ಜಾನುವಾರು ಬೇವರಿನ ಮಜ್ಜನಕ್ಕೆ ತತ್ತರಿಸಿವೆ.
ಬಾಗಲಕೋಟೆ: ಮಳೆಗಾಲ, ಚಳಿಗಾಲದಲ್ಲಿ ಮೈತುಂಬಿ ಹರಿಯುವ ಜಿಲ್ಲೆಯ ಮೂರು ಜೀವನ ನದಿಗಳು, ಬೇಸಿಗೆ ಆರಂಭವಾಗುತ್ತಿದ್ದಂತೆ ಬಿಸಿಲಿನ ಧಗೆಯಿಂದ ಬಳಲಿವೆ. ಜನ, ಜಾನುವಾರು ಬೇವರಿನ ಮಜ್ಜನಕ್ಕೆ ತತ್ತರಿಸಿವೆ.
ನದಿಗಳ ಒಡಲು ದಿನೇ ದಿನೇ ಖಾಲಿಯಾಗುತ್ತಿದ್ದು, ಕೆರೆಗಳ ಅಂಗಳವು ಬಣಗುತ್ತಿವೆ. ಕೋಟೆನಾಡಿನಲ್ಲಿ ಕುಡಿಯುವ ನೀರಿಗೂ ತಾತ್ವಾರ ಆಗುವ ಲಕ್ಷ್ಮಣ ಗೋಚರಿಸುತ್ತಿದೆ.
ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ಒಡಲು ಕಾದ ಹಂಚಿನಂತಾಗಿದ್ದು, ಕೃಷಿ ಚಟುವಟಿಕೆಗಳಿಗೆ ಬಹು ದೊಡ್ಡ ಹೊಡೆತ ಬಿದ್ದಿದೆ. ಬೆಳೆಗಳು ಒಣಗುತ್ತಿರುವ ದೃಶ್ಯಗಳು ಎಲ್ಲೆಂದರಲ್ಲಿ ಕಣ್ಣಿಗೆ ರಾಚುತ್ತೀವೆ. ಏಪ್ರಿಲ್ ಕೊನೇ ವಾರ, ಮೇ ತಿಂಗಳಿನಲ್ಲಿ 114 ಗ್ರಾಮ, ಜನ ವಸತಿ ಪ್ರದೇಶಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಇದಕ್ಕಾಗಿ ಜಿಲ್ಲಾಡಳಿತ ಹಲವು ಸಿದ್ಧತೆ ಆರಂಭಿಸಿದೆ.
ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ 12, ಗುಳೇದಗುಡ್ಡ ತಾಲೂಕಿನ 4, ಬಾಗಲಕೋಟೆ 2, ಬೀಳಗಿ 7, ಹುನಗುಂದ 4, ಇಳಕಲ್ಲ 5, ಜಮಖಂಡಿ 6, ಮುಧೋಳ 4, ರಬಕವಿ-ಬನಹಟ್ಟಿ ತಾಲೂಕಿನ 8 ಗ್ರಾಮಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಏಪ್ರಿಲ್ ತಿಂಗಳಲ್ಲಿ 52 ಗ್ರಾಮ, ಮೇ ತಿಂಗಳಲ್ಲಿ 62 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಜಿಲ್ಲಾಡಳಿತವು 111 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿದ್ದು, ಒಪ್ಪಂದ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗುಳೇದಗುಡ್ಡ ತಾಲೂಕಿನ ಚಿಮ್ಮಲಗಿ, ಇಳಕಲ್ ತಾಲ್ಲೂಕಿನ ಚಿಕ್ಕಕೊಡಗಲಿ ಗ್ರಾಮದಲ್ಲಿ ಈಗಾಗಲೇ ಕುಡಿಯುವ ನೀರಿಗೂ ತಾತ್ವಾರ ಉಂಟಾಗಿದೆ. ಖಾಸಗಿ ಬೋರವೆಲ್ ಮೂಲಕ ನೀರು ಪೂರೈಕೆ ಆರಂಭವಾಗಿದೆ.

ನದಿ-ಬ್ಯಾರೇಜ್‌ಗಳ ಸ್ಥಿತಿಗತಿ

ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿಗಳ ಪರಿಸ್ಥಿತಿ ಭಿನ್ನವಾಗಿಲ್ಲ. ಬ್ಯಾರೇಜ್ ಹಾಗೂ ಆಳವಾದ ಪ್ರದೇಶದಲ್ಲಿ ನೀರು ನಿಂತಿದೆ. ಆದರೂ ಸಹ ಬಿಸಿಲಿನ ತಾಪಕ್ಕೆ ನೀರು ಆವಿ ಆಗುವ ಪ್ರಮಾಣ ದಿನದಿಂದ ದಿನಕ್ಕೆ ದ್ವಿಗುಣಗೊಂಡಿದೆ. ಇದನ್ನು ಅರಿತು ಏ.10ರಂದು ಮಲಪ್ರಭಾ ನದಿಗೆ 1 ಟಿಎಂಸಿ ನೀರು ಬಿಡುಗಡೆಗೊಳಿಸಲಾಗಿದೆ. ಏ.15ಕ್ಕೆ ಬಾದಾಮಿ ತಾಲೂಕಿನ ಶಿವಯೋಗ ಮಂದಿರ ಸಮೀಪದ ಬ್ಯಾರೇಜ್‌ಗೆ ನೀರು ತಲುಪಿದ್ದು, ಇನ್ನು 15 ಬ್ಯಾರೇಜ್ ದಾಟಿ ಹಡಗಲಿ ಬ್ಯಾರೇಜ್‌ಗೆ ತಲುಪಬೇಕಿದೆ. ಘಟಪ್ರಭಾ ನದಿಗೆ 1.10 ಟಿಎಂಸಿ ನೀರು ಬಿಡುಗಡೆ ಮಾಡಿದ್ದು, ಬಾಗಲಕೋಟೆ ಸಮೀಪದ ಆನದಿನ್ನಿ ಬ್ಯಾರೇಜ್ ತಲುಪಿದೆ. ನೀರು ಬಿಡುಗಡೆಯಿಂದ ಎಲ್ಲ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳು ಚಾಲ್ತಿಯಲ್ಲಿವೆ.
ಕೃಷ್ಣಾ ನದಿ ಪಾತ್ರದಲ್ಲಿಯೂ ನೀರಿನ ಕೊರತೆ ಎದ್ದು ಕಾಣುತ್ತಿದೆ. ಚಿಕ್ಕಪಡಸಲಗಿ ಬ್ಯಾರೇಜ್ ಅಡಿಯಲ್ಲಿ 3 ಎಂವಿಎಸ್ ಯೋಜನೆಗಳಿದ್ದು, 27 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಚಿಕ್ಕಪಡಸಲಗಿ ಬ್ಯಾರೇಜ್‌ನಿಂದ ಏ. ಅಂತ್ಯದವರೆಗೆ ಮಾತ್ರ ನೀರು ಸರಬರಾಜು ಮಾಡಬಹುದಾಗಿದೆ.
ಮೇ ತಿಂಗಳಲ್ಲಿ ಹಿಪ್ಪರಗಿ ಬ್ಯಾರೇಜ್‌ದಿಂದ 0.5 ಟಿಎಂಸಿ ನೀರು ಬಿಡುಗಡೆಗೊಳಿಸಿದಲ್ಲಿ 27 ಗ್ರಾಮಗಳಿಗೆ ಜೂನ್ ಅಂತ್ಯವರೆಗೆ ನೀರು ಸರಬರಾಜು ಮಾಡಬಹುದಾಗಿದೆ.
ಮೇ ತಿಂಗಳಿನಲ್ಲಿ ಕೃಷ್ಣಾ ನದಿ ಪಾತ್ರಕ್ಕೆ ಮಹಾರಾಷ್ಟ್ರದಿಂದ ನೀರು ಹರಿದು ಬಂದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸುವದಿಲ್ಲ. ಮೂರು ದಿನಗಳ ಅವಲಂಬಿತ ಕೃಷಿ ಚಟುವಟಿಕೆಗಳಿಗೆ ಭಾರಿ ಹಿನ್ನಡೆಯಾಗಿರುವುದಂತೂ ಸತ್ಯ.
"

ಸದ್ಯಕ್ಕೆ ಬಾಗಲಕೋಟೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. 39 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮೂಲಕ ಒಟ್ಟು 402 ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ಏಪ್ರಿಲ್ 2ರಂದು ಘಟಪ್ರಭಾ ನದಿಗೆ 1.10 ಟಿಎಂಸಿ ನೀರು ಬಿಡುಗಡೆಯಾಗಿದೆ. ಮಲಪ್ರಭಾ ನದಿಗೂ ಬಿಡುಗಡೆಯಾಗಿದೆ. ಕೃಷ್ಣಾ ನದಿಗೆ ಸಂಬಂಧಪಟ್ಟಂತೆ ಗಮನಹರಿಸಲಾಗಿದೆ. ತೀವ್ರ ಸಮಸ್ಯೆ ಇರುವ ಎರಡು ಪ್ರದೇಶಗಳಿಗೆ ಖಾಸಗಿ ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡಲಾಗಿದೆ. ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಜಾಗೃತಿ ವಹಿಸಲಾಗಿದೆ.
-ಸಂಗಪ್ಪ ಎಂ. ಜಿಲ್ಲಾಧಿಕಾರಿ ಬಾಗಲಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net