ಕೂಡಲಸಂಗಮ : ವೃತ್ತಿ ಬದುಕಿನ 31 ವರ್ಷ ಪ್ರಾಮಾಣಿಕವಾಗಿ ಜನರ ಸೇವೆ ಸಲ್ಲಿಸಿ ಡಾ. ರಮೇಶ ಸನ್ನಿ ರೋಗಿಗಳ ಪಾಲಿಗೆ ದೇವರಾಗಿದ್ದರು ಎಂದು ನಿವೃತ್ತ ಉಪನ್ಯಾಸಕ ಬಿ.ಐ. ಬಡಿಗೇರ ಹೇಳಿದರು.
ಕೂಡಲಸಂಗಮದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕೂಡಲಸಂಗಮ ಗ್ರಾಮಸ್ಥರಿಂದ ನಡೆದ ಸಾರ್ಥಕ ಸೇವಾ ಸಂಭ್ರಮ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ರಮೇಶ ಸನ್ನಿಯವರು 16 ವರ್ಷದ ಹಿಂದೆ ಕೂಡಲ ಸಂಗಮದಿಂದ ಬಾದಾಮಿಗೆ ವರ್ಗಾವಣೆಗೊಂಡು, ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ನಿವೃತ್ತಿ ಹೊಂದಿದ್ದಾರೆ. ಹಿಂದೆ ಕೂಡಲಸಂಗಮದಲ್ಲಿ 15 ವರ್ಷ ಸಲ್ಲಿಸಿದ ಸೇವೆ ಸ್ಮರಿಸಿ ಸಮಾರಂಭ ಹಮ್ಮಿಕೊಂಡಿರುವುದು ಅವರ ಕಾರ್ಯಕ್ಕೆ ಹಿಡಿದ ಕೈಗನ್ನಡಿ ಎಂದರು.
ರಾಜ್ಯ ಸಹಕಾರಿ ಮಹಾ ಮಂಡಳದ ಮಾಜಿ ನಿರ್ದೇಶಕ ಎಲ್.ಎಂ. ಪಾಟೀಲ ಮಾತನಾಡಿ, ವೈದ್ಯ ವೃತ್ತಿಗೆ ನಿವೃತ್ತಿ ಎಂಬುದಿಲ್ಲ. 15 ವರ್ಷ ಪ್ರಾಮಾಣಿಕವಾಗಿ ಸನ್ನಿಯವರು ಸೇವೆ ಸಲ್ಲಿಸಿದ್ದಾರೆ. ಎಲ್ಲರಿಗೂ ಪ್ರಾಥಮಿಕ ಆರೋಗ್ಯ ಕೇಂದ್ರವೇ ಚಿಕಿತ್ಸೆಯ ಸ್ಥಳವಾಗಿತ್ತು. ಅವರ ವರ್ಗಾವಣೆ ನಂತರ ಸರ್ಕಾರಿ ಆಸ್ಪತ್ರೆಗೆ ಸೂಕ್ತ ವೈದ್ಯರೇ ಬರಲಿಲ್ಲ. ಈ ಭಾಗದ ಜನ 2010ರಿಂದ ನಿತ್ಯ ಬಾದಾಮಿಗೆ ತೆರೆಳಿ ಸನ್ನಿಯವರಿಂದ ಚಿಕಿತ್ಸೆ ಪಡೆದು ಬರುತ್ತಿರುವುದು ಅವರ ಉತ್ತಮ ಸೇವೆಗೆ ನಿದರ್ಶನವಾಗಿದೆ ಎಂದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡಮನಿ ಮಾತನಾಡಿದರು. ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಡಾ. ರಮೇಶ ಸನ್ನಿ ಮಾತನಾಡಿ, ನನ್ನ ವೃತ್ತಿ ಬದುಕು ಕೂಡಲಸಂಗಮ ಆರಂಭವಾಗಿ, ಬಾದಾಮಿಯಲ್ಲಿ ಪೂರ್ಣಗೊಂಡಿದೆ. ಬಸವಣ್ಣನ ಕಾಯಕ ತತ್ವದಲ್ಲಿ ನಂಬಿಕೆ ಇಟ್ಟು ವೃತ್ತಿ ಬದುಕು ಆರಂಭಿಸಿದೆ. ಇಲ್ಲಿನ ಜನರ ಸಹಕಾರದಿಂದ 15 ವರ್ಷ ಸೇವೆ ಸಲ್ಲಿಸಲು ಸಾಧ್ಯವಾಯಿತು. ಇಲ್ಲಿ ಸೇವೆ ಸಲ್ಲಿಸುವಾಗ ಪ್ರಾಥಮಿಕ ಆರೋಗ್ಯ ಕೇಂದ್ರವಿತ್ತು. ಇಂದು ಸಮುದಾಯ ಆರೋಗ್ಯ ಕೇಂದ್ರವಾಗಿ ಮಾರ್ಪಾಡಾಗಿದೆ. ಪ್ರಾಮಾಣಿಕ ಸೇವೆ ಸಲ್ಲಿಸಿದ ಆತ್ಮ ತೃಪ್ತಿ ನನ್ನಲ್ಲಿದೆ. ಈ ಭಾಗದ ಜನ ನನ್ನ ಮೇಲೆ ಇಟ್ಟ ನಂಬಿಕೆಗೆೆ ಯಾವಾಗಲೂ ಚಿರಋಣಿ ಎಂದರು.