ಅಹಿತಕರ ಘಟನೆಗಳಿಗೆ ಆಸ್ಪದ ನೀಡಬೇಡಿ

 ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಡಿವೈಎಸ್ಪಿ ಎಸ್.ರೋಷನ ಜಮೀರ ಮಾತನಾಡಿದರು. ಸಿಪಿಐ ಆರ್.ಆರ್.ಪಾಟೀಲ ಇದ್ದರು.
ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಡಿವೈಎಸ್ಪಿ ಎಸ್.ರೋಷನ ಜಮೀರ ಮಾತನಾಡಿದರು. ಸಿಪಿಐ ಆರ್.ಆರ್.ಪಾಟೀಲ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್ಪಿ ರೋಷನ ಜಮೀರ ಸೂಚನೆ
  • ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸಿ
  • ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಹಬ್ಬ ಆಚರಿಸಬೇಕು.
ರಬಕವಿ-ಬನಹಟ್ಟಿ: ಸರ್ಕಾರದ ಮಾರ್ಗಸೂಚಿ ಪಾಲಿಸಿ, ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು ಎಂದು ಜಮಖಂಡಿ ವಿಭಾಗದ ಡಿವೈಎಸ್ಪಿ ಎಸ್.ರೋಷನ ಜಮೀರ ಹೇಳಿದರು.
ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಗುರುವಾರ ಗಣೇಶೋತ್ಸವದ ನಿಮಿತ್ತ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು. ಗಣೇಶೋತ್ಸವ ವಿಜೃಂಭಣೆಯ ಹಬ್ಬಕ್ಕೆ ಸಿಮೀತವಾಗದೆ. ಶಾಂತಿ, ಸೌಹಾರ್ದತೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿ ಆಚರಿಸಬೇಕು. ಮೆರವಣಿಗೆ ಸಂದರ್ಭದಲ್ಲಿ ಮಹಿಳೆಯರು, ಹಿರಿಯರು ಸೇರಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಹಬ್ಬ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು. ತಪ್ಪಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬನಹಟ್ಟಿ ಸಿಪಿಐ ಆರ್.ಆರ್.ಪಾಟೀಲ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಹಬ್ಬಗಳಿಗೆ ವಿಶೇಷ ಮಹತ್ವವಿದೆ. ಶಾಂತಿಯುತವಾಗಿ ಹಬ್ಬ ಆಚರಿಸಿ, ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಸಂಬಂಧಪಟ್ಟ ಮಾಹಿತಿ ಪೊಲೀಸರಿಗೆ ನೀಡಿ ಸಹಕರಿಸಬೇಕು ಎಂದರು.
ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಕರ್ಕಶ ಧ್ವನಿ ಹಾಗೂ ಡಿಜೆ ಸೇರಿದಂತೆ ಧ್ವನಿವರ್ಧಕಗಳ ಬಳಕೆಯಿಂದ ದೂರವಿದ್ದು, ದೇಶೀಯ ವಾದ್ಯಗಳನ್ನು ಬಳಸುವ ಮೂಲಕ ಉತ್ಸವಕ್ಕೆ ಮೆರುಗು ನೀಡಬೇಕು. ಗಣೇಶ ಮಂಡಳಿಯವರು ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸ್ಥಳದಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಬನಹಟ್ಟಿ ಪಿಎಸ್‌ಐ ಶಿವರಾಜ ಧರಿಗೋಣ, ಹೆಸ್ಕಾಂ ಅಧಿಕಾರಿ ದಯಾನಂದ ಮುಳ್ಳೂರ, ಶಿವಾನಂದ ಗಾಯಕವಾಡ, ಶ್ರೀಶೈಲ ಧಬಾಡಿ, ನಗರಸಭೆ ಅಧಿಕಾರಿ ಶೋಭಾ ಹೊಸಮನಿ, ಉಪ ತಹಸೀಲ್ದಾರ್ ರಾಜಶೇಖರ ಸಾತಿಹಾಳ, ರಮೇಶ ಚಿವಟೆ, ದಾನಪ್ಪ ಹುಲಜತ್ತಿ, ಪ್ರಕಾಶ ಸಿಂಘನ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net